ADVERTISEMENT

ಕ್ರಿಸ್‌ಮಸ್ ಹಬ್ಬ: ಬೆತ್ಲೆಹೇಮಿನ ಮಂಗಳಶ್ರೀರಾತ್ರಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 20:31 IST
Last Updated 24 ಡಿಸೆಂಬರ್ 2025, 20:31 IST
   

ಆ ರಾತ್ರಿ ಬೆಳದಿಂಗಳಲ್ಲದಿದ್ದರೂ, ಆಕಾಶವೇ ಒಂದು ದಿವ್ಯ ವೇದಿಕೆಯಂತೆ ಕಂಗೊಳಿಸುತ್ತಿತ್ತು. ನಕ್ಷತ್ರಗಳ ಹರಿವಿನ ಹಾಲುಹಾದಿ ಇಸ್ರೇಲಿನ ಮರಳು ದಿಬ್ಬಗಳ ಮೇಲೆ, ಕಣಿವೆಗಳಲ್ಲಿ ಹರಡಿದ್ದ ಹಳ್ಳಿಗಾಡಿನ ಮೇಲೆ ಬೆಳ್ಳಿಯ ಕಿರಣಗಳನ್ನು ಸೂಸಿತ್ತು. ಸಾಮಾನ್ಯ ದಿನಗಳಲ್ಲಿ ಅತಿಥಿಗಳನ್ನೇ ಕಾಣದ ಬೆತ್ಲೆಹೆಂ ಎಂಬ ಕುಗ್ರಾಮ — ಆ ದಿನ ಮಾತ್ರ ಜೀವಂತ ಸಮುದ್ರದಂತೆ ಭೋರ್ಗರೆಯುತ್ತಿತ್ತು. ಜನಗಣತಿಯ ನೆಪದಲ್ಲಿ ಎಲ್ಲರೂ ತಂತಮ್ಮ ಪೂರ್ವಜರ ನೆಲೆಗೆ ಮರಳಿದ್ದರಿಂದ, ದಾರಿಯಿಕ್ಕೆಲವೂ ಹಳೆಯ ಮುಖಗಳ ಮಿಲನ, ನಗು, ಸಂಭ್ರಮ, ಹಬ್ಬದ ಗದ್ದಲ. ಎಷ್ಟೋ ವರ್ಷಗಳ ನಂತರ ಹುಟ್ಟೂರಿಗೆ ಬಂದಿದ್ದರಿಂದ ಎಲ್ಲರೂ ಮುದಗೊಂಡಿದ್ದರು.

ಈ ನಡುವೆ, ತಾವು ಬದುಕು ಕಟ್ಟಿಕೊಂಡಿದ್ದ ತೊಂಬತ್ತು ಕಿಲೋಮೀಟರ್ ದೂರದ ‘ನಜರೆತ್‌’ ಎಂಬ ಪಟ್ಟಣದಿಂದ ಬಂದು ದಣಿದಿದ್ದ ತುಂಬುಗರ್ಭಿಣಿ ಮರಿಯಾ ಮತ್ತು ಜೋಸೆಫ್ — ಕತ್ತೆಯ ಮೇಲೆ ನಡೆಸಿದ ಕಷ್ಟಯಾತ್ರೆಯ ನಂತರ —‌ ಛತ್ರದ ಬಾಗಿಲು ತಟ್ಟಿದರು. ತುಂಬು ಗರ್ಭಿಣಿಯಾದ ಮರಿಯಳ ಸ್ಥಿತಿ ಎಲ್ಲರ ಕಣ್ಣಿಗೂ ಕಾಣುತ್ತಿತ್ತು. ಆದರೂ ಕೊಠಡಿಗಳೆಲ್ಲ ತುಂಬಿದ್ದವು. ಛತ್ರದ ಮಾಲಿಕನಿಗೋ ಇದ್ದ ಅತಿಥಿಗಳನ್ನು ನೋಡಿಕೊಳ್ಳುವುದೇ ಸಾಕುಸಾಕಾಗಿತ್ತು. ಪವಿತ್ರ ಬೈಬಲ್‌ನಲ್ಲಿ ಹೇಳುವಂತೆ ‘ಛತ್ರದಲ್ಲಿ ಅವರಿಗೆ ಸ್ಥಳ ದೊರೆಯಲಿಲ್ಲ’.

ತಾಯಿಯ ಗರ್ಭದಲ್ಲಿರುವಾಗಲೇ ಯೇಸುವು ‘ಸತ್ರದಲ್ಲಿ ನೇಮದಿಂದಿರಲಿಕೆಡೆಯುಂಟು’ ಎಂಬ ನೆಲದ ನಿಯಮಕ್ಕೆ ತಲೆಬಾಗಿದ. ಆ ದಂಪತಿಗೆ ಆ ರಾತ್ರಿ ದೊರೆತ ಏಕೈಕ ಆಶ್ರಯ — ದನದಕೊಟ್ಟಿಗೆ.

ADVERTISEMENT

ಮಧ್ಯರಾತ್ರಿ ನಿಶ್ಶಬ್ದದಲ್ಲಿ ಜಗತ್ತನ್ನೇ ಬದಲಿಸುವ ಕ್ಷಣ ಜನಿಸಿತು — ಶಕಪುರುಷ ಯೇಸು ಜನಿಸಿದ. ಹಸುಕರುಗಳ ನಡುವೆ ಚಿಗುರು ಹುಲ್ಲಿನ ಮೃದುವಾದ ಮೆತ್ತೆಯ ಗೋದಲಿಯಲ್ಲಿ ಯೇಸು ಪವಡಿಸಿದಾಗ ಮೋಹನರಾಗ ಮಾತ್ರವಲ್ಲ, ಸ್ವರ್ಗಕಿನ್ನರರ ದಿವ್ಯಗಾನವೇ ಆ ಕೊಟ್ಟಿಗೆಯ ಸುತ್ತ ಹರಡಿತು. ಆಕಾಶದಲ್ಲಿ ತೇಜಸ್ವಿಯಾದ ನಕ್ಷತ್ರವೊಂದು ಮಿನುಗಿ ಬುವಿಯತ್ತ ದಾರಿ ತೋರಿಸಿತು. ಔತಣಕೂಟಗಳಲ್ಲಿ ‘ಮಜಾ’ ಮಾಡುತ್ತಿದ್ದವರಿಗೆ ಹಸುಕಂದನ ಅಳುವಾಗಲೀ ದೇವಗಾನವಾಗಲೀ, ಏನೂ ಕೇಳಿಸಲಿಲ್ಲ; ಆದರೆ ಬಯಲಿನಲ್ಲಿ ಕುರಿಗಳನ್ನು ಕಾಯುತ್ತಿದ್ದ ಸೂರಿಲ್ಲದ ಕುರುಬರಿಗೆ ಮಾತ್ರ ಸುವಾಸಿತ ತಂಬೆಲರು ಕುಳಿರ್ಗಾಳಿಯ ಆಲಾಪದೊಂದಿಗೆ ಆ ದೇವಗಾನ ಕೇಳಿಸಿತು. ‘ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಬುವಿಯಲ್ಲಿ ಒಳ್ಳೆಯ ಮನಸ್ಸಿನವರಿಗೆ ಶಾಂತಿ’ ಎಂಬ ಘೋಷಣೆ ಮೈಮನಗಳನ್ನು ಪುಳಕಗೊಳಿಸಿತು.

ಅಷ್ಟೇ ಅಲ್ಲ; ದೂರದ ಪೂರ್ವದೇಶದಲ್ಲಿದ್ದ ಖಗೋಳಜ್ಞಾನಿಗಳೂ ಆ ಮಿನುಗುವ ನಕ್ಷತ್ರದ ಸಂದೇಶವನ್ನು ಓದಿ ಅರ್ಥೈಸಿ ನಿಬ್ಬೆರಗಾದರು. ಕೂಡಲೇ ಅವರು ಗಣಿತ ಲೆಕ್ಕಿಸಿ, ನಿಖರ ದಿಕ್ಕು ಹಿಡಿದು, ಜಗದೋದ್ಧಾರಕನನ್ನು ಗೌರವಿಸಲು ಪಯಣ ಹೊರಟರು. ಅವರ ಒಂಟೆಗಳು ಮರಳ ಮೇಲೆ ಹೆಜ್ಜೆ ಹಾಕುತ್ತ, ಒಂದು ಹೊಸ ಯುಗದ ಉದಯವನ್ನು ಸಾರುತ್ತಿದ್ದವು.

ಇಂದು ನಮ್ಮ ಮನೆಗಳಲ್ಲಿ ಕಟ್ಟುವ ಕೊಟ್ಟಿಗೆಗಳು — ಹಸು, ಕರು, ಕುರಿಮರಿ, ಗೋದಲಿಯ ಮೇಲೆ ಯೇಸು ಮಲಗಿರುವ ದೃಶ್ಯ — ಇವೆಲ್ಲವೂ ಸಾವಿರಾರು ವರ್ಷಗಳ ಹಿಂದಿನ ಆ ಅಮೃತರಾತ್ರಿಯ ಮರುನಿರ್ಮಾಣ. ಕುರುಬರ ಮೊಗದ ವಿಸ್ಮಯ, ಮರಿಯಳ ಸ್ನಿಗ್ದ ನಗು, ಜ್ಯೋತಿಷಿಗಳ ದೀರ್ಘಯಾನ — ಎಲ್ಲವೂ ಮನೆಯ ಜಗುಲಿಗಳಲ್ಲಿ ಪುನಃ ಜೀವಂತವಾಗುತ್ತವೆ. ನಾವು ಕಟ್ಟುವ ಕೊಟ್ಟಿಗೆಯಲ್ಲಿ ನವಿರಾಗಿ ನಿರ್ಮಿಸುವ ಪ್ರತಿ ದೃಶ್ಯವೂ ಆ ಪವಿತ್ರರಾತ್ರಿಯ ನೆನಪೇ ಆಗಿದೆ.

ಬೆತ್ಲೆಹೇಮಿನ ಆ ರಾತ್ರಿಯು ಒಂದು ಕಥನವಲ್ಲ — ಮನುಜಪ್ರೀತಿಯ ವಿಶ್ವಶಾಂತಿಯ ಹೊಂಬೆಳಕಿನ ಹುಟ್ಟು. ಮತ್ತು ಆ ಬೆಳಕು ವಿಶ್ವಮಾನವನ ರೂಪದಲ್ಲಿ ಇಂದಿಗೂ ಜಗತ್ತನ್ನು ಬೆಳಗಿಸುತ್ತಲೇ ಇದೆ. ವಿಶ್ವದ ಮಹಾಮಹಿಮರು ಮಹಾತ್ಮರು ಆ ಬೆಳಕಿನತ್ತಲೇ ಜಗತ್ತನ್ನು ಮುನ್ನಡೆಸುತ್ತಿದ್ದಾರೆ. ಕ್ರಿಸ್ತಜಯಂತಿಯ ಈ ಶುಭಸಂದರ್ಭದಲ್ಲಿ ಧರೆಯಲ್ಲಿ ಯುದ್ಧಗಳು ದ್ವೇಷಗಳು ಅಳಿದು ಶಾಂತಿ ನೆಲೆಸಲೆಂದು, ಸೂರಿಲ್ಲದವರಿಗೆ ಸೂರು ದೊರೆಯಲೆಂದು ಹಾರೈಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.