ADVERTISEMENT

ಕೊರೊನಾ ಕಾಲದಲ್ಲಿ ಕ್ರೈಸ್ತರು ಮತ್ತು ಈಸ್ಟರ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 5:21 IST
Last Updated 9 ಏಪ್ರಿಲ್ 2020, 5:21 IST
.
.   

ಜಾತಿ, ಧರ್ಮ, ಕುಲಗೋತ್ರ ನೋಡದೆ, ಬಡವ ಬಲ್ಲಿದ, ಅಕ್ಷರಸ್ಥ ಅನಕ್ಷರಸ್ಥ ಎಂದು ಭೇದಭಾವ ಮಾಡದೇ ಕೊರೊನಾ ವೈರಾಣುವಿನಿಂದ ಬರುವ ಕೋವಿಡ್ -19 ಮಹಾಮಾರಿ ಮೂರು ತಿಂಗಳಿಂದ ಜಗತ್ತನ್ನು ಕಾಡುತ್ತಿದೆ.

ಕ್ರೈಸ್ತಧರ್ಮದ ನೆಲಗಟ್ಟಾಗಿರುವ ಶಿಲುಬೆಮರಣದ ಶಿಕ್ಷೆಗೊಳಗಾಗುವ ಯೇಸುಕ್ರಿಸ್ತರ ಪಾಡುಗಳನ್ನು ಸ್ಮರಿಸುವ, ಶಿಲುಬೆಮರಣ ಮತ್ತು ಅವರು ಮೃತರ ಮಧ್ಯದಿಂದ ಪುನರ್ ಜೀವಂತರಾಗಿ ಏಳುವುದನ್ನು ಸಂಭ್ರಮಿಸುವ ಈಸ್ಟರ್ ಹಬ್ಬದ (ಏಪ್ರಿಲ್ 12) ಸಂದರ್ಭದಲ್ಲಿರುವ ಕ್ರೈಸ್ತರನ್ನೂ ಈ ಸಾವಿನ ರುದ್ರನರ್ತನ ಕಂಗೆಡಿಸಿದೆ.

ಹಲವು ವಾರಗಳಿಂದ ಕ್ರೈಸ್ತರು, ವಿಶ್ವವ್ಯಾಪಿ ಕಥೋಲಿಕ್‌ ಧರ್ಮಸಭೆಯ ಆಶಯದಂತೆ ಚರ್ಚಿನ ಭಾನುವಾರದ ಪೂಜೆಗಳಲ್ಲಿ ಭಾಗವಹಿಸಬೇಕೆಂಬ ಆಣತಿಯನ್ನು ಪಾಲಿಸಲಾಗುತ್ತಿಲ್ಲ. ಪೂಜೆಯಲ್ಲಿ ಯಾಜಕರು ಪ್ರಭು ಯೇಸುಸ್ವಾಮಿಯ ಶರೀರವನ್ನು ಆವಾಹನೆ ಮಾಡಿದ ರೊಟ್ಟಿ (ಪರಮ ಪ್ರಸಾದದ)ಯನ್ನು ಪಡೆಯಲಾಗುತ್ತಿಲ್ಲ. ವರ್ಷಕ್ಕೊಮ್ಮೆ ಅದೂ, ಈಸ್ಟರ್ ಪವಿತ್ರ ವಾರದಲ್ಲಿ ತಪ್ಪದೇ ಪಾಪಸಂಕೀರ್ತನೆ ಮಾಡಿ ಪರಮಪ್ರಸಾದ ಸ್ವೀಕರಿಸಬೇಕೆಂಬುದನ್ನು ಪಾಲಿಸಲಾಗುತ್ತಿಲ್ಲ. ಭಾನುವಾರದ ಗರಿಗಳ ಹಬ್ಬದ( ಏಪ್ರಿಲ್ 5) ಮೆರವಣಿಗೆ ನಡೆಯಲೇ ಇಲ್ಲ. ಯಾಜಕರಷ್ಟೇ ಪೂಜಾವಿಧಿಗಳನ್ನು ನಡೆಸಬೇಕಾಯಿತು. 12 ಶಿಷ್ಯರ ಪಾದ ತೊಳೆಯುವ ಪವಿತ್ರ ಗುರುವಾರ ಮತ್ತು ಶುಭ ಶುಕ್ರವಾರದ ಸಾಂಗ್ಯಗಳೂ ಅಷ್ಟೇ. ಈಸ್ಟರ್ ಹಬ್ಬವನ್ನು ಕಥೋಲಿಕ್ ಕುಟುಂಬಗಳು ಏಕಾಂಗಿಯೇ ಆಚರಿಸಬೇಕಾಗಿ ಬಂದಿದೆ.

ADVERTISEMENT

ಅನಿರೀಕ್ಷಿತ ಸವಾಲುಗಳನ್ನು ಎದುರಿಸಿರುವ ಎರಡು ಶತಮಾನಗಳ ಕಥೋಲಿಕ್‌ ಧರ್ಮಸಭೆಯು ಈಗ, ಏಪ್ರಿಲ್ 15ರಂದು ಕೊನೆಗೊಳ್ಳುವ 21 ದಿನಗಳ ಜನಜೀವನವನ್ನು ಸ್ತಬ್ಧಗೊಳಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ಗೃಹಬಂಧನ, ಸಾಮಾಜಿಕ ಅಂತರದ ತುರ್ತಿನಲ್ಲಿರುವ ವಿಶ್ವಾಸಿಕರ ಮೇಲಿನ ಧರ್ಮಸಭೆಯ ಆಣತಿಗಳನ್ನು ಸಡಲಿಸುವಂತೆ ಆಯಾ ಧರ್ಮಕ್ಷೇತ್ರದ ಮತ್ರಾಣಿ(ಬಿಷಪ್)ಗಳಿಗೆ ಸೂಚಿಸಿದೆ. ಕ್ರೈಸ್ತ ವಿಶ್ವಾಸಿಗಳು ಮನೆಯಲ್ಲಿದ್ದು ಧಾರ್ಮಿಕ ವಿಧಿಗಳನ್ನು ಆಚರಿಸಬೇಕೆಂಬ ತಿಳಿವಳಿಕೆ ನೀಡಲಾಗಿದೆ. ಕ್ರೈಸ್ತ ವಿಶ್ವಾಸಿಗಳು ಕಳೆದ ವಾರದಿಂದ ನಿಗದಿತ ಸಮಯದಲ್ಲಿ ಆನ್ ಲೈನ್‌ನಲ್ಲಿ ಬಿತ್ತರಗೊಳ್ಳುವ ಪೂಜೆಗಳಲ್ಲಿ ಭಾಗವಹಿಸಿ ಪುನೀತರಾಗುತ್ತಿದ್ದಾರೆ.

ಕ್ರೈಸ್ತ ವಿಶ್ವಾಸಿಗಳು ತಮ್ಮ ಧರ್ಮಸಭೆ ಬೋಧನೆಗಳನ್ನು ಪಾಲಿಸಬೇಕೋ? ಆಯಾ ದೇಶಗಳ ಸರ್ಕಾರಗಳು ನೀಡುವ ಆದೇಶಗಳನ್ನು ಪಾಲಿಸಬೇಕೋ? ಇವು, ಅಪ್ರಬುದ್ಧ ಪ್ರಶ್ನೆಗಳು. ಏನೇ ಇರಲಿ ಮಾನವಪ್ರೀತಿ, ತನ್ನಂತೆ ಪರರನ್ನು, ನೆರೆಹೊರೆಯವರನ್ನು ಪ್ರೀತಿಸುವುದು ಮತ್ತು ದೈವಭಕ್ತಿ ಕ್ರೈಸ್ತ ಧರ್ಮದ ಜೀವಾಳ. ಸಾಮೂಹಿಕವಾಗಿ ಪ್ರಾರ್ಥಿಸುವುದರಿಂದ ಕೊರೊನಾ ವೈರಾಣು ಹರಡುತ್ತದೆ, ನೆರೆಹೊರೆಯವರ ಜೀವಕ್ಕೆ ಕುತ್ತು ತರುತ್ತದೆ, ಎಂದರೆ ಅದು ಕ್ರೈಸ್ತ ಪ್ರಾರ್ಥನೆಯೇ ಅಲ್ಲ. ಅಂಥ ಪ್ರಾರ್ಥನೆಯಿಂದ ದೂರ ಇರುವುದೆಂದರೆ ಸಾವಿಗೆ ಹೆದರಿ ದೂರ ಇದ್ದಂತಲ್ಲ; ಅದು ಮಾನವತೆಗಾಗಿ, ಮಾನವಪ್ರೀತಿಗಾಗಿ ಕ್ರೈಸ್ತರು ಇಡುವ ಹೆಜ್ಜೆ ಎನ್ನುವುದು ಪ್ರಾಜ್ಞರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.