ADVERTISEMENT

ಆಧುನಿಕವಿಜ್ಞಾನ ಮತ್ತು ಭಾರತೀಯ ಜ್ಞಾನಪರಂಪರೆಯ ಸಂಗಮ: 'ದಕ್ಷಿಣಾಸ್ಯದರ್ಶಿನೀ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2026, 7:12 IST
Last Updated 28 ಜನವರಿ 2026, 7:12 IST
   
ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ವೇದಾಂತಭಾರತೀಯಿಂದ ‘ವಿವೇಕದೀಪ್ತಿ’ ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಹಾಗೂ ‘ದಕ್ಷಿಣಾಸ್ಯದರ್ಶಿನೀ’ ಕಾರ್ಯಕ್ರಮ ನಡೆಯಲಿದೆ. ದಕ್ಷಿಣಾಸ್ಯದರ್ಶಿನೀ ಕಾರ್ಯಕ್ರಮ ಜನವರಿ 29ರಿಂದ ಫೆ.1ರ ವರೆಗೆ ನಡೆಯಲಿದೆ. ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಜನವರಿ 31ರಂದು ಬೆಂಗಳೂರು ಅರಮನೆ ಮೈದಾನದ 'ಕೃಷ್ಣವಿಹಾರ'ದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು: ಯುವಜನಾಂಗದಲ್ಲಿ ವಿಚಾರಶಕ್ತಿ, ವಿವೇಕ ಮತ್ತು ಚಿಂತನಾ ಸ್ಪಷ್ಟತೆಯನ್ನು ಜಾಗೃತಗೊಳಿಸುವ ಉದ್ದೇಶದೊಂದಿಗೆ ವೇದಾಂತಭಾರತೀ ಸಂಸ್ಥೆಯು ‘ದಕ್ಷಿಣಾಸ್ಯದರ್ಶಿನೀ’ ಎಂಬ ಆಧುನಿಕ ವಿಜ್ಞಾನ, ವಿಚಾರಣೆ ಮತ್ತು ಅನುಭವಾಧಾರಿತ ಅಧ್ಯಯನದ ಜ್ಞಾನವೇದಿಕೆಯನ್ನು ಜನವರಿ 29ರಿಂದ ಫೆಬ್ರವರಿ 1ರವರೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿದೆ.

ದಕ್ಷಿಣಾಸ್ಯದರ್ಶಿನೀ ಎಂಬುದು ವೇದಾಂತಭಾರತಿಯು ಪ್ರಾರಂಭಿಸಿರುವ ‘ವಿವೇಕದೀಪ್ತಿ’ ಎಂಬ ಮಹಾಭಿಯಾನದ ಅಡಿಯಲ್ಲಿ ಆಯೋಜಿಸಲಾದ ವಿಶಿಷ್ಟ ಕಾರ್ಯಕ್ರಮವಾಗಿದೆ. ಕಳೆದ ಒಂದು ವರ್ಷದಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿವೇಕದೀಪ್ತಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು, ಯುವಕರು, ಉದ್ಯೋಗಕ್ಷೇತ್ರದಲ್ಲಿರುವವರು ಶಿಕ್ಷಕರು ಮತ್ತು ಸಮಾಜದ ವಿಭಿನ್ನ ವರ್ಗಗಳನ್ನು ಒಳಗೊಂಡಂತೆ ಎಲ್ಲರ ಜೊತೆಗೆ ಸಂವಾದ, ಅಧ್ಯಯನ ನಡೆಸಿ ಅನುಭವಾಧಾರಿತ ಚಟುವಟಿಕೆಗಳನ್ನು ನಡೆಸಲಾಗಿದೆ.

ಆದಿ ಶಂಕರಾಚಾರ್ಯರು ರಚಿಸಿದ ದಕ್ಷಿಣಾಮೂರ್ತಿ ಅಷ್ಟಕದಲ್ಲಿ ಪ್ರತಿಪಾದಿಸಲಾದ ತತ್ತ್ವಗಳನ್ನು ಆಧಾರವಾಗಿ ಇಟ್ಟುಕೊಂಡು, ಅವುಗಳನ್ನು ಆಧುನಿಕ ವಿಜ್ಞಾನ — ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ ಮತ್ತು ತಂತ್ರಜ್ಞಾನದ ಮೂಲಕ ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಪ್ರಯತ್ನವೇ ದಕ್ಷಿಣಾಸ್ಯದರ್ಶಿನಿಯ ವೈಶಿಷ್ಟ್ಯ.

ADVERTISEMENT

ಈ ಪ್ರದರ್ಶಿನಿಯನ್ನು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಅವರ ಕರಕಮಲಸಂಜಾತರಾದ ಪರಮಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದಭಾರತೀ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದ್ದು, ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಪರಮಪೂಜ್ಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದ ಈ ಕಾರ್ಯಕ್ರಮಕ್ಕೆ ಲಭಿಸಿದೆ.

ಈ ಪ್ರದರ್ಶಿನಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರದರ್ಶಿಸಲ್ಪಡುವ ಪ್ರಯೋಗಗಳನ್ನು ಮತ್ತು ಮಾದರಿಗಳನ್ನು ಮುಖ್ಯವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೇ ನಿರೂಪಿಸುವುದು. ಸಂಸ್ಕೃತ ಹಾಗೂ ವೇದಾಂತ ಅಧ್ಯಯನ ಮಾಡಿದ ಹಿರಿಯ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು, ಈ ವಿಜ್ಞಾನ ಪ್ರಯೋಗಗಳಿಗೆ ಸಂಬಂಧಿಸಿದ ತಾತ್ತ್ವಿಕ ಅಂಶಗಳನ್ನು ವಿವರಿಸಲಿದ್ದಾರೆ. ವಿವಿಧ ಕಾಲೇಜುಗಳ ಮತ್ತು ಸಂಸ್ಥೆಗಳ 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ.

ಪ್ರದರ್ಶನದ ಜೊತೆಗೆ, ನಾಲ್ಕು ದಿನಗಳ ಅವಧಿಯಲ್ಲಿ 24 ಆಯ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಾರತೀಯ ಕಲಾ–ಸಾಂಸ್ಕೃತಿಕ ಪರಂಪರೆ, ಮೌಲ್ಯಗಳನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿವೆ. ಈ ಕಾರ್ಯಕ್ರಮಗಳು ದಕ್ಷಿಣಾಸ್ಯದರ್ಶಿನಿಯ ಬೌದ್ಧಿಕ ಆಶಯಗಳಿಗೆ ಪೂರಕವಾಗಿ ರೂಪುಗೊಂಡಿವೆ.

ಪರಮ್ ಫೌಂಡೇಶನ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅನುಭವಾಧಾರಿತ ಶಿಕ್ಷಣ, ಯುವಸಾಮರ್ಥ್ಯ ನಿರ್ಮಾಣ ಮತ್ತು ಭಾರತೀಯ ಜ್ಞಾನಪರಂಪರೆಯನ್ನು ಸಮಕಾಲೀನ ಅಧ್ಯಯನದೊಂದಿಗೆ ಸಂಯೋಜಿಸುವ ದಿಕ್ಕಿನಲ್ಲಿ ಈ ಸಹಭಾಗಿತ್ವ ಕಾರ್ಯನಿರ್ವಹಿಸುತ್ತಿದೆ.

ಜನವರಿ 29ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎಸ್. ಸೋಮನಾಥ್ ಮತ್ತು ಖ್ಯಾತ ಇತಿಹಾಸ ತಜ್ಞ ಹಾಗೂ ಲೇಖಕರಾದ ಡಾ. ವಿಕ್ರಮ್ ಸಂಪತ್ ಭಾಗವಹಿಸಲಿದ್ದಾರೆ.

ಭಾರತೀಯ ಜ್ಞಾನಪರಂಪರೆಯನ್ನು ಜೀವಂತ, ವಿಚಾರಣಾಧಾರಿತ ಹಾಗೂ ಸಮಕಾಲೀನ ಚಿಂತನೆಗೆ ತಕ್ಕ ರೀತಿಯಲ್ಲಿ ಯುವಮನಸ್ಸಿಗೆ ತಲುಪಿಸುವ ರಾಷ್ಟ್ರಮಟ್ಟದ ಪ್ರಯತ್ನವೇ ದಕ್ಷಿಣಾಸ್ಯದರ್ಶಿನೀ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.