ADVERTISEMENT

ದತ್ತಾತ್ರೇಯ: ಅವಧೂತ ಮಹಾಗುರು

ಎಸ್.ಸೂರ್ಯಪ್ರಕಾಶ ಪಂಡಿತ್
Published 28 ಡಿಸೆಂಬರ್ 2020, 19:31 IST
Last Updated 28 ಡಿಸೆಂಬರ್ 2020, 19:31 IST
ದತ್ತಾತ್ರೇಯ
ದತ್ತಾತ್ರೇಯ   

ದತ್ತಾತ್ರೇಯ ಮಹಾಗುರು; ಅವಧೂತ. ಗುರು ಎಂದರೆ ಜ್ಞಾನಕ್ಕೆ ಸಂಕೇತ. ಇಂದು ದತ್ತಜಯಂತಿ. ದತ್ತಾತ್ರೇಯತತ್ತ್ವದ ಅನುಸಂಧಾನವೇ ಇಂದಿನ ದಿಟವಾದ ಆರಾಧನೆಯಾಗಲಿ.

ದತ್ತಾತ್ರೇಯ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ತತ್ತ್ವ. ಈ ತತ್ತ್ವಕ್ಕೆ ಎರಡು ಆಯಾಮಗಳು; ದತ್ತಾತ್ರೇಯ ಗುರುವೂ ಹೌದು, ದೇವರೂ ಹೌದು. ದತ್ತಾತ್ರೇಯ ಗುರುಗಳಿಗೇ ಗುರು ಮಹಾಗುರು; ಹೀಗೆಯೇ ದೇವತೆಗಳ ಸಾಲಿನಲ್ಲೂ ವಿಶೇಷ ದೇವತೆ ಎನಿಸಿಕೊಂಡಿದ್ದಾನೆ.

ಅತ್ರಿ–ಅನಸೂಯೆ ಇವರ ಮಗನಾಗಿ ಅವತರಿಸಿದವನೇ ದತ್ತಾತ್ರೇಯ. ಈ ಕಲ್ಪನೆಯಲ್ಲೇ ಸ್ವಾರಸ್ಯವುಂಟು. ಅತ್ರಿಮುನಿಯ ತಪಸ್ಸಿಗೆ ಒಲಿದು ಅವನಿಗೆ ತನ್ನನ್ನು ತಾನೇ ಕೊಡಲ್ಪಟ್ಟವನು ದತ್ತಾತ್ರೇಯ. ಇಲ್ಲಿ ಇನ್ನೂ ಒಂದು ಧ್ವನಿಯಿದೆ. ಭಗವಂತನ ಸ್ವರೂಪವೇ ಆನಂದ, ಅರಿವು. ತಪಸ್ಸಿನಲ್ಲಿ ನಿರತರಾದವರಿಗೆ ತನ್ನನ್ನು ತಾನೆ ದಾನವಾಗಿ ಕೊಡುವ ಅವನ ಔದಾರ್ಯದ ಸಂಕೇತತ್ತ್ವವೇ ದತ್ತಾತ್ರೇಯ.

ADVERTISEMENT

ದತ್ತಾತ್ರೇಯ ಮಹಾಗುರು; ಅವಧೂತ. ಗುರು ಎಂದರೆ ಜ್ಞಾನಕ್ಕೆ ಸಂಕೇತ. ನಮ್ಮ ಮುಂದಿರುವ ಕತ್ತಲೆಯನ್ನು ಪರಿಹರಿಸಿ, ಬೆಳಕನ್ನು ನೀಡುವವನೇ ಗುರು; ದತ್ತಾತ್ರೇಯ ಅಂಥ ಗುರುಗಳಿಗೇ ಗುರು.

ದತ್ತಾತ್ರೇಯ ದಿಗಂಬರ; ದಿಕ್ಕುಗಳನ್ನೇ ಬಟ್ಟೆಯಾಗಿ ಉಳ್ಳವನು ಎಂಬುದು ಇದರ ತಾತ್ಪರ್ಯ. ಜ್ಞಾನದ ಸರ್ವವ್ಯಾಪಕತೆಯನ್ನು ಈ ತತ್ತ್ವ ಸೂಚಿಸುತ್ತದೆ.

ದತ್ತಾತ್ರೇಯ ತ್ರಿಮೂರ್ತಿಸ್ವರೂಪ; ಸೃಷ್ಟಿ, ಸ್ಥಿತಿ ಮತ್ತು ಲಯಗಳು ಅವನ ಅಧೀನ ಎಂದೂ ಆಗುತ್ತದೆ; ಜ್ಞಾನವನ್ನು ಸಂಪಾದಿಸಿದವನಿಗೆ ಸೃಷ್ಟಿರಹಸ್ಯದ ಅರಿವೂ ಒದಗುತ್ತದೆ ಎಂದು ಅರ್ಥೈಸಬಹುದು.

ದತ್ತಗುರುವನ್ನು ಬಾಲ–ಹುಚ್ಚ–ಪಿಶಾಚವೇಷದಲ್ಲಿರುವವನು ಎಂಬ ವರ್ಣನೆಯಿದೆ. ಅವಧೂತರ, ಜ್ಞಾನಿಗಳ ಜಾಡನ್ನು ನಾವು ಸುಲಭವಾಗಿ ಹಿಡಿಯಲಾರೆವು ಎಂಬುದನ್ನು ಇದು ಸೂಚಿಸುತ್ತದೆ.

‘ಅವಧೂತ’ ಎಂಬ ಕಲ್ಪನೆಯೇ ಗಹನವಾದುದು. ಇಂದು ಅಪಮೌಲ್ಯವಾಗಿರುವ ಹಲವು ಪದಗಳಲ್ಲಿ, ಪದವಿಗಳಲ್ಲಿ ಅವಧೂತ ಎಂಬುದು ಕೂಡ ಒಂದಾಗಿರುವುದು ಶೋಚನೀಯ. ಅವಧೂತ ಎಂಬುದು ನಮಗೆ ನಾವೇ ಧರಿಸಿಕೊಳ್ಳುವ ಅಲಂಕಾರದ ಕಿರೀಟವಲ್ಲ; ಅದು ಜೀವನ್ಮುಕ್ತರ ಲೋಕೋತ್ತರ ಸ್ಥಿತಿಯ ಅನಿರ್ವಚನೀಯತೆಗೆ ಸುಸಂಸ್ಕೃತಸಮಾಜವು ಠಂಕಿಸಿದ ಬೀಜಾಕ್ಷರಮಂತ್ರ. ಈ ಪದದ ಒಂದೊಂದು ಅಕ್ಷರದಲ್ಲೂ ಕ್ಷರವಾಗದ ತತ್ತ್ವಗಳೇ ಅಡಗಿವೆ.

ಆಸೆಗಳನ್ನು ಬಿಟ್ಟಿರುವುದು, ಎಂದೆಂದೂ ಶುಚಿಯಾಗಿರುವುದು; ಸದಾ ಆನಂದದಲ್ಲಿಯೇ ಇರುವುದು; ಈ ಮೊದಲಿನ ಎಲ್ಲ ವಾಸನೆಗಳನ್ನೂ ಕಳೆದುಕೊಂಡಿರುವುದು; ಮಾತಿನಲ್ಲಿ ದೋಷವಾಗಲೀ ಗೊಂದಲವಾಗಲೀ ಉದ್ವೇಗವಾಗಲೀ ಇಲ್ಲದಿರುವುದು; ಹಿಂದಿನ, ಮುಂದಿನ ಕಾಲವನ್ನು ಕೈಬಿಟ್ಟು ಈಗಣ ಕ್ಷಣದಲ್ಲಿ ಮಾತ್ರ ಇರುವುದು; ಧೂಳಿನಿಂದ ಮುಚ್ಚಲ್ಪಟ್ಟ ದೇಹ; ತೊಳೆಯಲ್ಪಟ್ಟ ಮನಸ್ಸು; ಯಾವ ರೀತಿಯ ಬಾಧೆಯೂ ಇಲ್ಲದಿರುವುದು; ಧ್ಯಾನದ ಅಥವಾ ಯೋಗದ ಆವಶ್ಯಕತೆ ಇಲ್ಲದಿರುವುದು; ಸದಾ ತತ್ತ್ವವನ್ನೇ ಕುರಿತಾದ ಚಿಂತನೆ ಇರುವುದೇ ವಿನಾ ಮತ್ತೊಂದರ ಚಿಂತೆ ಇಲ್ಲದಿರುವುದು; ಕತ್ತಲು ಎಂಬ ಅಜ್ಞಾನವಿರುವುದಿಲ್ಲ; ನಾನು–ನನ್ನದೆಂಬ ಅಹಂಕಾರವೂ ಇರುವುದಿಲ್ಲ.

ಇದು ಅವಧೂತನ ಲಕ್ಷಣ.

ಅವಧೂತಗೀತೆಯಲ್ಲಿ ಈ ಸ್ಥಿತಿಯ ಬಗ್ಗೆ ವಿಶದವಾದ ವಿವರಣೆಯಿದೆ; ಅವುಗಳಲ್ಲಿ ಒಂದನ್ನಷ್ಟೆ ಇಲ್ಲಿ ನೋಡಬಹುದು:

ಸಂಜಾಯತೇ ಸರ್ವಮಿದಂ ಹಿ ತಥ್ಯಂ
ಸಂಜಾಯತೇ ಸರ್ವಮಿದಂ ವಿತಥ್ಯಮ್‌
ಏವಂ ವಿಕಲ್ಪೋ ಮಮ ನೈವ ಜಾತಃ
ಸ್ವರೂಪನಿರ್ವಾಣಮನಾಮಯೋsಹಮ್‌

ಎಂದರೆ, ‘ಹುಟ್ಟಿರುವ ಇದೆಲ್ಲವೂ ಸತ್ಯವೆ? ಹುಟ್ಟಿರುವ ಇದೆಲ್ಲವೂ ಮಿಥ್ಯೆಯೆ? ಇಂಥ ಸಂಶಯ ನನ್ನ ಮನಸ್ಸಿನಲ್ಲಿ ತೋರಿಕೊಂಡಿದ್ದೇ ಇಲ್ಲ. ಆನಂದವಾಗಿರುವುದೂ ನಿರ್ದೋಷವಾಗಿರುವುದೂ ನನ್ನ ಸ್ವರೂಪ.’

ನಮ್ಮಲ್ಲಿ ಜೀವನ್ಮುಕ್ತನ ಕಲ್ಪನೆಯೂ ಉಂಟು.ದತ್ತಾತ್ರೇಯ ಮಹಾಗುರುವೇ ಈ ತತ್ತ್ವಕ್ಕೂ ಆದರ್ಶ. ‘ಜೀವನು ಸಾಕ್ಷತ್‌ ಶಿವನೇ. ಸಕಲ ಭೂತಗಳಲ್ಲಿಯೂ ಅವನು ಶಿವರೂಪದಲ್ಲಿ ಅಡಗಿದ್ದು, ಸರ್ವವ್ಯಾಪಕನೂ ಆಗಿದ್ದಾನೆ. ಯಾರು ಈ ಪರಮಸತ್ಯವನ್ನು ತಿಳಿದಿರುವನೋ ಅವನೇ ಜೀವನ್ಮುಕ್ತ; ಬದುಕಿರುವಾಗಲೇ ನೆಮ್ಮದಿಯ ಸ್ಥಿತಿಯನ್ನು ಪಡೆದವನು.’ ಇದು ಜೀವನ್ಮುಕ್ತಿಯ ಸರಳ ವಿವರಣೆ. ಇಂಥ ಸ್ಥಿತಿಯಲ್ಲಿರುವವನೇ ದತ್ತಾತ್ರೇಯ. ಮಾತ್ರವಲ್ಲ, ಅಂಥ ಸ್ಥಿತಿಯನ್ನು ದಯಪಾಲಿಸುವವನೂ ಅವನೇ.

ಇಂದು ದತ್ತಜಯಂತಿ. ದತ್ತಾತ್ರೇಯತತ್ತ್ವದ ಅನುಸಂಧಾನವೇ ಇಂದಿನ ದಿಟವಾದ ಆರಾಧನೆಯಾಗಲಿ. ಇಂದಿನ ಸಮಾಜದಲ್ಲಿ ನಮ್ಮ ದಿಟವಾದ ಸಾಂಸ್ಕೃತಿಕ, ಆಧ್ಯಾತ್ಮಿಕ ಆದರ್ಶಗಳನ್ನು ಕೆಲವರು ‘ಉದರನಿಮಿತ್ತಂ ಬಹುಕೃತ ವೇಷಂ’ ಎಂಬ ಅವಸ್ಥೆಯನ್ನಾಗಿಸಿದ್ದಾರೆ. ನಾವು ಆಚರಿಸುತ್ತಿರುವ ಜಯಂತಿ–ವ್ರತ–ಪರ್ವಗಳು ನಮ್ಮ ನೈಜ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ತತ್ತ್ವಗಳ ಸಾಕ್ಷಾತ್ಕಾರಕ್ಕೆ ಒದಗುವ ಸತ್ಯಕಲಾಪಗಳಾಗಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.