ADVERTISEMENT

ಇಂದು ದತ್ತ ಜಯಂತಿ | ದತ್ತ: ಅಖಂಡತೆಯ ಅವಧೂತ

ಎಸ್.ಸೂರ್ಯಪ್ರಕಾಶ ಪಂಡಿತ್
Published 17 ಡಿಸೆಂಬರ್ 2021, 20:55 IST
Last Updated 17 ಡಿಸೆಂಬರ್ 2021, 20:55 IST
ದತ್ತಾತ್ರೇಯ
ದತ್ತಾತ್ರೇಯ   

ಸರ್ವಂ ಜಗದ್ವಿದ್ಧಿ ನಿರಾಕೃತೀದಂ ಸರ್ವಂ ಜಗದ್ವಿದ್ಧಿ ವಿಕಾರಹೀನಮ್‌
ಸರ್ವಂ ಜಗದ್ವಿದ್ಧಿ ವಿಶುದ್ಧದೇಹಂ ಸರ್ವಂ ಜಗದ್ವಿದ್ಧಿ ಶಿವೈಕರೂಪಮ್‌

ಇದು ’ಅವಧೂತಗೀತೆ‘ಯ ಒಂದು ಪದ್ಯ. ಸಾಕ್ಷಾತ್‌ ದತ್ತಾತ್ರೇಯನೇ ಉಪದೇಶಿಸಿದ್ದು ಈ ಗೀತೆ ಎಂಬ ನಂಬಿಕೆ ಪರಂಪರೆಯಲ್ಲಿದೆ.

ದತ್ತಾತ್ರೇಯ ಅವಧೂತಗುರು. ಅವಧೂತ ಎಂದರೆ ಎಲ್ಲ ಬಗೆಯ ರಾಗ–ದ್ವೇಷಗಳನ್ನೂ ಬಿಟ್ಟವನು; ಯಾವುದಕ್ಕೂ ಅಂಟಿಕೊಂಡವನಲ್ಲ. ಹೀಗಾಗಿಯೇ ಅವನು ಲೋಕದ ಕಣ್ಣಿಗೆ ವಿಚಿತ್ರವಾಗಿ ಕಾಣುತ್ತಾನೆ – ಬಾಲನಂತೆ, ಹುಚ್ಚನಂತೆ, ಪಿಶಾಚದಂತೆ – ಅವನು ನಮ್ಮ ಕಣ್ಣಿಗೆ ಕಾಣುತ್ತಾನೆ. ನಮಗೆ ಯಾವುದು ಪೂಜ್ಯವೋ ಅದು ಅವನಿಗೆ ತ್ಯಾಜ್ಯವಾಗಿರಬಲ್ಲದು, ನಮಗೆ ಯಾವುದು ತ್ಯಾಜ್ಯವೋ ಅದು ಅವನಿಗೆ ಪೂಜ್ಯವಾಗಿರಬಹುದು. ಒಟ್ಟಿನಲ್ಲಿ ಅವಧೂತ ನಮ್ಮ ಎಣಿಕೆಗೆ ಸಿಗುವವನಲ್ಲ ಎಂಬುದು ತಾತ್ಪರ್ಯ.

ADVERTISEMENT

ಅವಧೂತತತ್ತ್ವದ ಕಲ್ಪನೆ ಭಾರತೀಯ ಪರಂಪರೆಯ ವಿಶಿಷ್ಟ ಚಿಂತನೆ. ನಮ್ಮ ದಿಟವಾದ ಇರವು ಎಂದರೆ ಆನಂದವೇ ಹೌದು ಎಂಬುದು ವೇದಾಂತದ ನಿಲುವು. ಈ ಆನಂದಕ್ಕೆ ಮೂಲವೇ ನಮ್ಮತನದ ಅರಿವು ಎಂದು ಅದು ಘೋಷಿಸುತ್ತದೆ. ಹಾಗಾದರೆ ಈ ಅರಿವನ್ನು ಹೇಗೆ ಪಡೆಯುವುದು? ಅರಿವಿನ ಮೂಲ ಒಂದೇ ಅಲ್ಲವಷ್ಟೆ! ’ಇದೊಂದೇ ಅರಿವಿನ ಮೂಲ‘ ಎಂಬ ಚೌಕಟ್ಟನ್ನು ಹಾಕಿದ ಕೂಡಲೇ ಅರಿವಿನ ಲಕ್ಷಣಕ್ಕೆ ಮಿತಿಯನ್ನು ಹೇಳಿದಂತಾಗುತ್ತದೆ. ಅರಿವು ನಮ್ಮ ಎಣಿಕೆಯ ಬಂಧನಕ್ಕೆ ಸಿಕ್ಕಿಹಾಕಿಕೊಂಡಿರುವಂಥದ್ದಲ್ಲ; ಅದು ಎಲ್ಲೆಲ್ಲಿಯೂ ಎಲ್ಲದರಲ್ಲೂ ಎಲ್ಲರಲ್ಲೂ ಎಲ್ಲ ಕಾಲದಲ್ಲಿಯೂ ಇರುವಂಥದ್ದು. ಮಾತ್ರವಲ್ಲ, ಅರಿವು ಬೇರೆ ಅಲ್ಲ, ಆನಂದ ಬೇರೆ ಅಲ್ಲ; ನಮ್ಮ ಇರವು ಕೂಡ ಬೇರೆ ಅಲ್ಲ. ಇಂಥ ವಿಶಾಲ ತತ್ತ್ವದ ಪಾತಳಿಯಲ್ಲಿ ಮೈದೋರಿಕೊಂಡ ಸಿದ್ಧಾಂತವೇ ಅವಧೂತತತ್ತ್ವ.

ಮೇಲೆ ಉಲ್ಲೇಖಿಸಿದ ಪದ್ಯದ ತಾತ್ಪರ್ಯವನ್ನು ಇಲ್ಲಿ ನೋಡಬಹುದು: ‘ನಮಗೆ ಕಾಣುತ್ತಿರುವ ಈ ಜಗತ್ತೆಲ್ಲವೂ ದಿಟವಾಗಿ ಆಕಾರ ಇಲ್ಲದ್ದು ಎಂದು ತಿಳಿದುಕೋ. ಈ ವಿಶ್ವಜಗತ್ತು ವಿಕಾರವೂ ಇಲ್ಲದ್ದು ಎಂದೂ ತಿಳಿದುಕೋ. ಈ ಜಗತ್ತು ಪರಮಾತ್ಮನ ಶುದ್ಧದೇಹ ಎಂದೂ ತಿಳಿದುಕೋ. ಈ ಜಗತ್ತು ಕೇವಲ ಮಂಗಳರೂಪವಾದುದು ಎಂದು ತಿಳಿದುಕೋ.’

ನಮ್ಮಲ್ಲಿಯೇ ಇರುವ ಅರಿವನ್ನೂ ನಲವನ್ನೂ ಕಂಡುಕೊಳ್ಳಲು ಬೇಕಾದ ಸಾಧನವನ್ನು ಈ ಪದ್ಯ ಸೊಗಸಾಗಿ ನಿರೂಪಿಸುತ್ತಿದೆ. ಈ ಪದ್ಯವೊಂದರ ಬಗ್ಗೆ ಚಿಂತನೆ ನಡೆದು, ಅದರ ಮಥಿತಾರ್ಥ ನಮ್ಮ ಭಾವಬುದ್ಧಿಗಳಲ್ಲಿ ಒಂದಾದರೆ ಖಂಡಿತವಾಗಿಯೂ ಸಮಾಜದಲ್ಲಿರುವ ಭೇದಬುದ್ಧಿ, ಪೂರ್ವಗ್ರಹಗಳು, ರಾಗ–ದ್ವೇಷಗಳು ಮರೆಯಾಗುವುದರಲ್ಲಿ ಸಂಶಯವಿಲ್ಲ.

ಭಾರತೀಯ ವೇದಾಂತದ ಸಾರವೇ ಅಖಂಡತೆಯನ್ನು ಪ್ರತಿಪಾದಿಸುವುದು; ಒಡಕುತನ ಅದಕ್ಕೆ ಸಲ್ಲದ ಸಂಗತಿ. ‘ಅವಧೂತಗೀತೆ‘ಯ ಇನ್ನೊಂದು ಪದ್ಯವನ್ನು ನೋಡಿ:

ವೇದಾಃ ನ ಲೋಕಾಃ ನ ಸುರಾ ನ ಯಜ್ಞಾಃ

ವರ್ಣಾಶ್ರಮೋ ನೈವ ಕುಲಂ
ಚ ಜಾತಿಃ

ನ ಧೂಮಮಾರ್ಗೋ ನ
ಚ ದೀಪ್ತಿಮಾರ್ಗೋ

ಬ್ರಹೈಕ ರೂಪಂ
ಪರಮಾರ್ಥತತ್ತ್ವಮ್‌

ಎಂದರೆ, ‘ವೇದಗಳಾಗಲೀ ಲೋಕಗಳಾಗಲೀ ದೇವಗಣಗಳಾಗಲೀ ಯಜ್ಞಗಳಾಗಲೀ ವರ್ಣಾಶ್ರಮವಾಗಲೀ ಕುಲಜಾತಿಗಳಾಗಲೀ ಯಾವುದೂ ಇಲ್ಲ; ಹೀಗೆಯೇ ಧೂಮ ಮಾರ್ಗವೂ ಜ್ಯೋತಿರ್ಮಾಗವೂ ಇಲ್ಲ; ಇರುವುದು ಒಂದೇ ಬ್ರಹ್ಮ. ಅದು ಎಲ್ಲ ಇರವುಗಳ ಇರವು, ಎಲ್ಲ ಅರಿವುಗಳ ಅರಿವು.’

ಈ ಅಖಂಡಸ್ವರೂಪದ ಅನುಸಂಧಾನಕ್ಕೆ ದತ್ತ ಜಯಂತಿ ನಮ್ಮೆಲ್ಲರಿಗೂ ಸ್ಫೂರ್ತಿಯನ್ನು ಒದಗಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.