ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಲಿಂಗಾಕಾರದಲ್ಲಿ ಶಿವನ ಪೂಜೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 20 ಜನವರಿ 2022, 16:05 IST
Last Updated 20 ಜನವರಿ 2022, 16:05 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಶ್ರವಣ-ಪಠಣ-ಮನನ ಎಂಬ ಮೂರು ಮುಕ್ತಿಸಾಧನಗಳನ್ನು ಅನುಸರಿಸಲು ಅಸಮರ್ಥರಾದವರು ಹೆಚ್ಚಿನ ಶ್ರಮವಿಲ್ಲದೆ ಯಾವ ಕ್ರಮ ಅನುಸರಿಸಿ ಮುಕ್ತಿ ಪಡೆಯಬಹುದೆಂದು ಪ್ರಯಾಗದ ಮುನಿಗಳು ಕೇಳುತ್ತಾರೆ. ಆಗ ಸೂತಮುನಿ ಸರಳವಾಗಿ ಶಿವನನ್ನು ಆರಾಧಿಸುವ ವಿವರ ತಿಳಿಸುತ್ತಾನೆ. ‘ಮನೆಯಲ್ಲಿ ಅಥವಾ ಗುಡಿಯಲ್ಲಿ ಶಂಕರನ ಲಿಂಗ ಮತ್ತು ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜಿಸಿದರೆ ಮುಕ್ತಿಯನ್ನು ಪಡೆಯಬಹುದು. ವಂಚನೆ ಇಲ್ಲದೆ, ಶಕ್ತಿ ಇದ್ದಷ್ಟು ಪೂಜಾದ್ರವ್ಯಗಳನ್ನು ಶಿವಲಿಂಗ ಮತ್ತು ಮೂರ್ತಿಗಳಿಗೆ ಅರ್ಪಿಸಬೇಕು. ಹೆಚ್ಚು ಜನ ಸೇರುವುದಿದ್ದರೆ ಪವಿತ್ರವಾದ ಮಠ, ಪುಣ್ಯ ತೀರ್ಥಕ್ಷೇತ್ರಗಳನ್ನು ಪೂಜೆಗಾಗಿ ವಿನಿಯೋಗಿಸಬೇಕು. ಶಿವಲಿಂಗ ಮತ್ತು ಶಿವಮೂರ್ತಿಗಳಿಗೆ ಮಂಟಪ, ಗೋಪುರ ನಿರ್ಮಿಸಬೇಕು. ವಸ್ತ್ರ, ಗಂಧ, ಹಾರ, ಧೂಪ, ದೀಪ ಮತ್ತು ಅನೇಕ ಬಗೆಯ ಅನ್ನಗಳುಳ್ಳ ಮತ್ತು ಹೋಳಿಗೆ ಮುಂತಾದ ನೈವೇದ್ಯಗಳನ್ನು ಶಿವಲಿಂಗಮೂರ್ತಿಗೆ ಅರ್ಪಿಸಬೇಕು. ಶ್ವೇತಚ್ಛತ್ರಿ, ಧ್ವಜ, ವ್ಯಜನ ಅಂದರೆ ಬೀಸಣಿಗೆ, ಚಾಮರ ಮೊದಲಾದವುಗಳಿಂದ ಶಂಕರನ ಲಿಂಗ ಮತ್ತು ಮೂರ್ತಿಗಳನ್ನು ಅಲಂಕರಿಸಬೇಕು. ಆಮೇಲೆ ಪ್ರದಕ್ಷಿಣೆ, ನಮಸ್ಕಾರ, ಯಥಾಶಕ್ತಿ ಶಿವಪಂಚಾಕ್ಷರೀಮಂತ್ರದ ಜಪ ಮುಂತಾದ ಆವಾಹನದಿಂದ ವಿಸರ್ಜನೆಯವರೆಗಿನ ಎಲ್ಲಾ ಪೂಜಾಕ್ರಮವನ್ನು ಭಕ್ತಿಯಿಂದ ನಿತ್ಯವೂ ಶಿವಲಿಂಗ ಮತ್ತು ಶಿವಮೂರ್ತಿಗಳಿಗೆ ಮಾಡಬೇಕು. ಹೀಗೆ ನಿತ್ಯವೂ ಶಿವಲಿಂಗ ಮತ್ತು ಶಿವಮೂರ್ತಿಗಳನ್ನು ಪೂಜಿಸುವವರು, ಶ್ರವಣ-ಪಠಣ-ಮನನ ಎಂಬ ಮೂರು ಮುಕ್ತಿಸಾಧನದ ಕ್ರಮಗಳಿಲ್ಲದೇ, ಶಿವನಅನುಗ್ರಹದಿಂದ ಸಿದ್ಧಿಯನ್ನು ಮುಕ್ತಿಯನ್ನೂ ಪಡೆಯಬಹುದು’ ಎಂದು ಸೂತಮುನಿ ಸರಳ ಮುಕ್ತಿಮಾರ್ಗವನ್ನು ತಿಳಿಸುತ್ತಾನೆ.

ಸೂತಮುನಿಯಿಂದ ಶಿವನನ್ನು ಒಲಿಸಿಕೊಳ್ಳುವ ಸರಳ ಮುಕ್ತಿಮಾರ್ಗವನ್ನು ತಿಳಿದ ಮುನಿಗಳು, ‘ಇತರೆ ದೇವರುಗಳನ್ನು ಮೂರ್ತಿಯಲ್ಲಿಯೇ ಪೂಜಿಸುತ್ತೇವೆ. ಆದರೆ ಪರಮೇಶ್ವರನನ್ನು ಮಾತ್ರ ಲಿಂಗ ಮತ್ತು ಮೂರ್ತಿ ಎರಡರಲ್ಲೂ ಪೂಜಿಸಲು ಕಾರಣವೇನು?’ ಅಂತ ತಮ್ಮನ್ನು ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಯೊಂದನ್ನು ಕೇಳುತ್ತಾರೆ. ಸೂತಮುನಿಯು, ‘ನೀವು ಕೇಳಿದ ವಿಷಯ ತುಂಬಾ ಪವಿತ್ರವಾದುದು. ಇದಕ್ಕೆ ಮಹಾದೇವನ ಹೊರತು ಇನ್ನಾರೂ ಉತ್ತರ ಹೇಳಲಾರರು. ಪರಮಶಿವ ಹೇಳಿದ್ದನ್ನು ಗುರುಗಳಾದ ವ್ಯಾಸರು ನನಗೆ ಹೇಳಿದ್ದಾರೆ. ಅದನ್ನು ನಿಮಗೆ ತಿಳಿಸುತ್ತೇನೆ ಕೇಳಿ’ ಎನ್ನುತ್ತಾನೆ.

ಜಗತ್ತಿನಲ್ಲಿ ಶಿವನೋರ್ವನೇ ಬ್ರಹ್ಮಸ್ವರೂಪ. ಆಕಾಶದಂತೆ ಎಲ್ಲೆಲ್ಲಿಯೂ ಇರುವವನು ಶಿವನೊಬ್ಬನೇ. ಆದ ಕಾರಣ, ಆಕಾಶದಂತೆ ಅವಯವಗಳಿಲ್ಲದ ಅಸೀಮರೂಪಿ ಶಿವ. ಆದರೆ ಮಾಯಾಮಯರಾದ ಬ್ರಹ್ಮ, ವಿಷ್ಣು ಮೊದಲಾದ ದೇವರುಗಳು ಜೀವರೂಪವುಳ್ಳವರಾದ್ದರಿಂದ, ಅವರ ರೂಪಕ್ಕನುಗುಣವಾಗಿ ಮೂರ್ತಿರೂಪದಲ್ಲಿ ಪೂಜಿಸುತ್ತೇವೆ. ಆದರೆ ಶಿವನು ಅಸೀಮವಾದ ಬ್ರಹ್ಮಾಂಡ ಸ್ವರೂಪಿ. ಹೀಗಾಗಿ ಶಿವನೂ ಮಾಯದ ಅವಯವಗಳುಳ್ಳ ಆಕಾರವೂ ಹೊಂದಿದ್ದಾನೆ ಮತ್ತು ಪಾರಮಾರ್ಥಿಕವಾಗಿ ಅವಯವಗಳಿಲ್ಲದ ನಿರಾಕಾರನೂ ಆಗಿದ್ದಾನೆ. ನಿರಾಕಾರದಲ್ಲೂ ಶಿವನನ್ನು ಪೂಜಿಸಬಹುದು. ಆದರೆ, ಸಾಮಾನ್ಯ ಜನ ನಿರಾಕಾರದಲ್ಲಿ ಪೂಜಿಸುವಾಗ ಅಥವಾ ಪ್ರಾರ್ಥನೆ ಮಾಡುವಾಗ ಧೃತಿಗೆಡುತ್ತಾರೆ. ಅದೇ ಆಕಾರರೂಪದಲ್ಲಿ ಶಿವನನ್ನು ಪೂಜಿಸಿದಾಗ ಜನರ ಮನಸ್ಸು ಒಂದು ಕಡೆ ಭಕ್ತಿಭಾವದಲ್ಲಿ ಕೇಂದ್ರೀಕೃತವಾಗುತ್ತದೆ. ಇದಕ್ಕಾಗಿ ಶಿವನನ್ನು ಲಿಂಗರೂಪದಲ್ಲಿ ಪೂಜಿಸುವುದು ಅನುಕೂಲ’ ಎಂದು ಸೂತಮುನಿ ತಿಳಿಸುತ್ತಾನೆ.

ADVERTISEMENT

ಈಶ್ವನು ನಿರಾಕಾರನಾದುದರಿಂದ ನಿರಾಕಾರವಾದ ಲಿಂಗವು ಪೂಜೆಗೆ ಯೋಗ್ಯವಾದುದು. ಹಾಗೆ, ಮಾಯಾಮಯವಾಗಿ ಸಾಕಾರನೂ ಆಗಿರುವುದರಿಂದ, ಈಶ್ವರನ ಪೂಜೆಗೆ ಶಿವಮೂರ್ತಿಯು ಯೋಗ್ಯವಾದುದು. ಬ್ರಹ್ಮಸ್ವರೂಪನಾದ ಶಿವನು ಸಾಕಾರ ಮತ್ತು ನಿರಾಕಾರ ರೂಪನಾದುದುರಿಂದ ಲಿಂಗ ಮತ್ತು ಮೂರ್ತಿಗಳೆರಡರಲ್ಲಿಯೂ ಜನಗಳಿಂದ ನಿತ್ಯವೂ ಪೂಜಿಸಲ್ಪಡುತ್ತಾನೆ. ಉಳಿದ ದೇವ-ದೇವತೆಗಳು ಬ್ರಹ್ಮರೂಪರಲ್ಲ. ಆ ದೇವರುಗಳು ಜೀವವುಳ್ಳವರಾಗಿರುವುದರಿಂದ ನಿರಾಕಾರರಲ್ಲ. ಆದ್ದರಿಂದ ಆ ದೇವರುಗಳನ್ನು ನಿರಾಕಾರವಾದ ಲಿಂಗದಲ್ಲಿ ಪೂಜಿಸುವುದಿಲ್ಲ. ಬದಲಿಗೆ ಅವರ ಮೂರ್ತರೂಪದಲ್ಲೇ ಪೂಜಿಸಲ್ಪಡುತ್ತಾರೆ. ವೇದಾಂತಗಳು ಶಂಕರನೋರ್ವನೇ ಬ್ರಹ್ಮಸ್ವರೂಪ ಎಂದು ಓಂಕಾರಾರ್ಥದಲ್ಲಿ ಹೇಳಿವೆ. ಅಂದರೆ ಓಂಕಾರದ ಅರ್ಥವೆ ಬ್ರಹ್ಮ. ಓಂಕಾರದ ಮೂಲಕ ಶಂಕರನು ಬ್ರಹ್ಮವೆಂದು ವೇದಾಂತಗಳು ಸಾರಿವೆ ಎಂದು ವಿವರಿಸುತ್ತಾನೆ ಸೂತಮುನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.