ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕಲ್ಯಾಣಮಂಟಪಕ್ಕೆ ಬಂದ ಶಿವ

ಭಾಗ 273

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 11 ನವೆಂಬರ್ 2022, 19:30 IST
Last Updated 11 ನವೆಂಬರ್ 2022, 19:30 IST
   

ಕಲ್ಯಾಣಮಂಟಪಕ್ಕೆ ಶಿವನನ್ನು ಉತ್ಸವದ ಮೂಲಕ ಹಿಮವಂತನ ಬಂಧುಗಳು ಕರೆತರುತ್ತಾರೆ. ಈ ಸಂದರ್ಭದಲ್ಲಿ ಕೆಲವರು ಶಂಕರನಿಗೆ ಛತ್ರಿಯನ್ನು ಹಿಡಿದಿದ್ದರೆ, ಅದರಮೇಲೆ ಕೆಲವರು ಮೇಲುಕಟ್ಟನ್ನು ಹಿಡಿದಿದ್ದರು. ಇನ್ನು ಕೆಲವರು ಎಡಬಲಗಳಲ್ಲಿ ಚಾಮರವನ್ನು ಬೀಸುತ್ತಿದ್ದರು. ಗಂಧರ್ವ ಗಾಯಕರು ಮಂಗಳವಾದ ಗಾನವನ್ನು ಮಾಡುತ್ತಾ, ಅಪ್ಸರೆಯರು ನರ್ತಿಸುತ್ತಾ ಸಾಗುತ್ತಿದ್ದರು. ಇವರೊಂದಿಗೆ ಶಿವಗಣಗಳು ಭೇರಿ-ಮದ್ದಳೆಯ ಲಯತಾಳಕ್ಕೆ ತಕ್ಕಂತೆ ನರ್ತನ ಮಾಡುತ್ತಿದ್ದರು. ಜನರು ಮಹಾದೇವನನ್ನು ಬಗೆಬಗೆಯ ಸ್ತೋತ್ರಮಾಡುತ್ತಿದ್ದರು. ಶಿವ ವಿವಾಹಮಂಟಪವನ್ನು ಪ್ರವೇಶಿಸಿದ. ಆಗ ಹಿಮವಂತನ ಬಂಧುಗಳಾದ ಪರ್ವತಶ್ರೇಷ್ಠರೆಲ್ಲ ಶಿವನನ್ನು ಗೌರವದಿಂದ ನಂದಿವಾಹನದಿಂದ ಇಳಿಸಿಕೊಂಡರು. ನಂತರ ಕಲ್ಯಾಣಮಂಟಪಕ್ಕೆ ಕರೆದುಕೊಂಡು ಹೋದರು.

ವಿವಾಹಮಂಟಪದ ಬಳಿ ಕಾದಿದ್ದ ಹಿಮವಂತ, ದೇವಗಣಗಳೊಡನೆ ಬಂದ ಈಶ್ವರನಿಗೆ ಭಕ್ತಿಯಿಂದ ನಮಸ್ಕರಿಸಿದ. ನಂತರ ಪುರದ ಸುಮಂಗಲೆಯರಿಂದ ವಿಧಿವತ್ತಾಗಿ ಆರತಿಯನ್ನು ಮಾಡಿಸಿ, ಮಂಟಪದೊಳಗೆ ಕರೆದೊಯ್ದ. ಶಿವನ ಜೊತೆ ಬಂದಿದ್ದ ಹರಿ, ಬ್ರಹ್ಮ ಸೇರಿದಂತೆ ಎಲ್ಲಾ ದೇವತೆಗಳು, ಮುನಿಗಳಿಗೂ ಪಾದ್ಯ ಅರ್ಘ್ಯಗಳನ್ನು ಕೊಟ್ಟು ಆತ್ಮೀಯವಾಗಿ ಬರಮಾಡಿಕೊಂಡು, ಅವರಿಗೆ ಸೂಕ್ತವಾದ ಆತಿಥ್ಯ ನೀಡಿದ.

ಬ್ರಹ್ಮ, ವಿಷ್ಣು, ಮತ್ತಿತರ ದೇವೋತ್ತಮರನ್ನು ಮದುಮಗ ಶಂಕರ ಕುಳಿತ್ತಿದ್ದ ರತ್ನಸಿಂಹಾಸನದ ಅಕ್ಕಪಕ್ಕ ಕುಳ್ಳಿರಿಸಿದ. ಅಲ್ಲಿಗೆ ಸುಮಂಗಲೆಯರೊಂದಿಗೆ ಬಂದ ಮೇನಾದೇವಿ ಸಂತಸದಿಂದ ಶಿವನಿಗೆ ಆರತಿಯನ್ನು ಎತ್ತಿದಳು. ಗರ್ಗಮುನಿ ಶಂಕರನಿಗೆ ಮಧುಪರ್ಕ ಮುಂತಾದ ವಿವಾಹಾಂಗವಿಧಿಗಳನ್ನು ಶಾಸ್ತ್ರೋಕ್ತ್ರವಾಗಿ ಮಾಡಿಸಿದ. ಬ್ರಹ್ಮನ ಆದೇಶದಂತೆ ವಿವಾಹಕ್ಕೆ ಮೊದಲು ಮಾಡಬೇಕಾದ ಮಂಗಳಕಾರ್ಯವನ್ನು ಮನಃಸಂತೋಷದಿಂದ ಮಾಡಿದ.

ADVERTISEMENT

ವಧುವಿನ ತಂದೆ ಹಿಮವಂತ ಕಲ್ಯಾಣಮಂಟಪದ ವೇದಿಕೆಗೆ ಮಗಳು ಪಾರ್ವತಿಯನ್ನು ಕರೆದುಕೊಂಡುಬಂದ. ಆಗ ಬ್ರಹ್ಮ, ವಿಷ್ಣು ವರಮಹಾಶಯ ಮಹಾದೇವನನ್ನು ವಿವಾಹ ವೇದಿಕೆಗೆ ಕರೆತಂದರು. ಬೃಹಸ್ಪತಿ ಮೊದಲಾದ ಶಾಸ್ತ್ರವೇತ್ತರು ಹರ್ಷದಿಂದ ಕನ್ಯಾದಾನಕ್ಕೆ ಯೋಗ್ಯವಾದ ಮುಹೂರ್ತ ಸಮೀಪಿಸುವುದನ್ನು ನಿರೀಕ್ಷಿಸುತ್ತಿದ್ದರು. ಪುರೋಹಿತನಾದ ಗರ್ಗಮುನಿ ಘಟಿಕಾಯಂತ್ರದ ಬಳಿಯಲ್ಲೇ ಕುಳಿತು, ಲಗ್ನದ ಘಳಿಗೆ ಬರುವವರೆಗೂ ಓಂಕಾರ ಮಂತ್ರವನ್ನು ಪಠಿಸುತ್ತಲೇ ಇದ್ದ.

ಗರ್ಗಮುನಿ ಪುಣ್ಯಾಹಮಂತ್ರವನ್ನು ಹೇಳಿ ಗಿರಿಜಾ-ಶಿವರಿಗೆ ಅಂಜಲಿ ಹಿಡಿಯುವಂತೆ ಹೇಳಿದ. ಪಾರ್ವತಿಯು ತನ್ನ ಅಂಜಲಿಯಲ್ಲಿರುವ ಅಕ್ಷತೆಯನ್ನು ಶಿವನ ಮೇಲೆ ಪ್ರೀತಿಯಿಂದ ಹಾಕಿದಳು. ನಂತರ ಸುಂದರಮುಖಿಯಾದ ಗಿರಿಜೆ ಮಂಗಳದ್ರವ್ಯಗಳಾದ ಮೊಸರು, ಅಕ್ಷತೆ, ಕುಶಜಲಗಳಿಂದ ಶಿವನನ್ನು ಮಹಾಪ್ರೇಮದಿಂದ ಪೂಜಿಸಿದಳು. ಹೀಗೆ ಪೂಜಿಸುವಾಗ ಪಾರ್ವತಿ ಯಾರನ್ನು ಪಡೆಯುವುದಕ್ಕಾಗಿ, ಹಿಂದೆ ಮಹಾತಪಸ್ಸು ಮಾಡಿದ್ದಳೋ, ಅಂತಹ ಶಂಕರನನ್ನು ಬಹಳ ಹತ್ತಿರದಿಂದ ನೋಡಿ ಪುಳಕಿತಳಾದಳು. ಆಗ ಗಿರಿಜೆ ಮುಖ ಲಜ್ಜೆಯಿಂದ ಕೆಂಪೇರಿತು.

ಬ್ರಹ್ಮ ಮತ್ತು ಗರ್ಗ ಮೊದಲಾದ ಮುನಿಗಳ ಮಾತಿನಂತೆ ಶಿವನೂ ಲೋಕಾಚಾರದಂತೆ ಗಿರಿಜೆಯನ್ನು ಪೂಜಿಸಿದ. ಹೀಗೆ ಅನ್ಯೋನ್ಯವಾಗಿ ಪರಸ್ಪರ ಪೂಜಿಸುತ್ತಾ ವಧು-ವರರಾಗಿ ಶೋಭಿಸಿದ ಜಗದ್ರೂಪರಾದ ಪಾರ್ವತೀ ಪರಮೇಶ್ವರರಿಗೆ ಲಕ್ಷ್ಮಿ, ಸರಸ್ವತಿ, ಪುರದ ಸುಮಂಗಲೆಯರು ಮಂಗಳಾರತಿ ಬೆಳಗಿದರು.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ನಲವತ್ತೇಳನೆಯ ಅಧ್ಯಾಯ ಮುಗಿಯುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.