ADVERTISEMENT

ಅಪಾರ ವ್ಯಾಪ್ತಿಯ ಗಣೇಶಾನುಸಂಧಾನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:22 IST
Last Updated 20 ಆಗಸ್ಟ್ 2020, 21:22 IST
ಗಣಪತಿ
ಗಣಪತಿ   

ಮತ್ತೊಮ್ಮೆ ಚೌತಿ ಬಂದಿದೆ. ಒಂದು ಭಿನ್ನ ಸನ್ನಿವೇಶದಲ್ಲಿ. ಸಾರ್ವಜನಿಕ ಗಣೇಶೋತ್ಸವಗಳ ಅಬ್ಬರ, ಸಾಂಸ್ಕೃತಿಕ ಉಲ್ಲಾಸ ಸಂಭ್ರಮಗಳಿಲ್ಲದೆ, ಆದರೆ, ಗಣೇಶ ಸಂಸ್ಕೃತಿ ಉಳಿಸಿ ಮನೆ ಮನಗಳಲ್ಲಿ ಗಣೇಶನನ್ನು ಅನುಸಂಧಾನ ಪೂರ್ವಕ ಹೆಚ್ಚು ಹತ್ತಿರಗೊಳಿಸಿಕೊಳ್ಳಲು ಇದೊಂದು ಪ್ರೇರಣೆಯೇ?

***

ಗಣೇಶನು ವಕ್ರತುಂಡ, ವಕ್ರರೂಪ, ವಿಚಿತ್ರ ಚರಿತ್ರವಲ್ಲವೆ? ‘ವಕ್ರತೆ’ಯೇ ಸೌಂದರ್ಯದ ಸರ್ವಸ್ವವೆಂದಿದ್ದಾನೆ ಮಹಾ ಆಲಂಕಾರಿಕನಾದ ಕುಂತಕ. ಸರಳತೆಯೂ ವಕ್ರವೇ, ಅಂದದಲ್ಲಿ!

ADVERTISEMENT

ಆಚರಣೆ: ಗಣೇಶನ ಆರಾಧನೆ ಬಹುಪ್ರಾಚೀನ. ಗಣೇಶನೂ ಬಹುರೂಪಿ. ವೇದದ ಗಣಾನಾಂಪತಿಯಿಂದ ತೊಡಗಿ, ನಮ್ಮ ಮನೆಯ ಬತ್ತದ ರಾಶಿಯವರೆಗೆ ಅವನ ಬತ್ತದ ಬೆಳೆ ಮುಖ್ಯವಾಗಿ ಗಣೇಶಾರಾಧನೆ ಆರು ವಿಧ. ಕಾರ್ಯಾರಂಭದಲ್ಲಿ ಗಣೇಶ ಪೂಜೆ, ಆರ್ಷ ಭಾರತೀಯ ಆಚರಣೆಯಲ್ಲಿ ಸರ್ವತ್ರ ಇರುವಂತಹದು. ಚಾಂದ್ರಮಾಸಗಳ ಶುಕ್ಲ ಚತುರ್ಥಿ ವಿನಾಯಕೀ, ಕೃಷ್ಣಪಕ್ಷದಲ್ಲಿ ಸಂಕಷ್ಟಹರ ಚತುರ್ಥಿ. ವಾರ್ಷಿಕ ಆರಾಧನೆ - ಭಾದ್ರಪದ ಶುಕ್ಲ ಚೌತಿ (ಶ್ರಾವಣದಲ್ಲೂ ಉಂಟು) ಗಣೇಶ ಚತುರ್ಥಿ, ಹೋಮ, ವಿಶೇಷ ಪೂಜೆ, ಭಜನೆ, ಮೆರವಣಿಗೆ, ಕಲೆ ಸಾಹಿತ್ಯ ಉತ್ಸವ. ಹಾಗೆಯೇ ವಾಮಕೌಲ ಆಚರಣೆಯಲ್ಲಿ ವಿಶೇಷ ಸಿದ್ಧಿಗಾಗಿ ವ್ರತಾಚರಣೆ. ಆರನೆಯದು ಗಣೇಶನ ಅಧ್ಯಯನ ಅನುಸಂಧಾನ. ಪಂಥ, ಜಾತಿಗಳನ್ನು ಮೀರಿರುವ ಗಣ-ಪತಿ, ಶೈವ, ಶಾಕ್ತ, ಸಾರ, ವೈಷ್ಣವಾದಿ ಸಕಲರಿಗೂ ಮೊದಲ ಪೂಜೆಗೆ ದೈವ. ಮಡಿಮೈಲಿಗೆ ಶುದ್ಧಾಶುದ್ಧಗಳನ್ನು ಮೀರಿ ಬೀದಿ ವಿನಾಯಕನಿಂದ ನಿರಾಕಾರ ಗಣಪತಿಯ ತನಕ ಅವನ ಸೊಂಡಿಲು ಎಲ್ಲೆಲ್ಲೂ ಇದೆ. ಜನಗಣ, ದೇವಗಣ, ಪ್ರಾಣಿ ಪಕ್ಷಿಗಣ, ಅಧ್ಯಾತ್ಮಗಣ, ಪ್ರಕೃತಿ ಗಣಕ್ಕೆಲ್ಲ ಅವನು ವಿಘ್ನಗಣ, ನಿರ್ವಿಘ್ನಗಣ, ಯಕ್ಷಗಣಗಳಿಗೆಲ್ಲ ಅವನು ಒಡೆಯ. ಅವನು ಎಂದೂ ಒಡೆಯ; ಜೋಡಿಸುವವನು.

ರೂಪಗಣ: ಗಣೇಶನ ರೂಪಗಳೆಷ್ಟು? ನಿಜಕ್ಕೂ ಅಗಣ್ಯ, ಅಪಾರ. ಬ್ರಾಹ್ಮೀ - ನಾಗರಿಲಿಪಿಗಳ ಓಂ, ಶ್ರೀಗಳು ಗಣಪತಿಯ ಸಂಕೇತಗಳೆಂದು ಊಹಿಸಲೆಡೆಯಿದೆ. ಎರಡೇ ಗೆರೆ ಎಳೆದರೆ ಗಣೇಶನಾಗುತ್ತಾನೆ. ಮಂಡಲ, ಚಕ್ರ, ಚಿತ್ರ, ಗೆರೆ, ಮೂರ್ತಿಗಳಲ್ಲಿ ಗಣೇಶ ವಿಧ ಅದೆಷ್ಟು? ಸಂಗ್ರಹಿಸಲು ಯತ್ನಿಸಿ. ರೋಚಕ, ದಿಗ್ಭ್ರಾಮಕ. ಎಕ್ಕದ ಮರದ ಬೇರು ಗಣೇಶ, ಗಣಪತಿ ಕಾಯಿ (ಧೂಪದ ಕಾಯಿ) ಗಣಪತಿ, ಸೊಂಡಿಲಿನ ಚಿತ್ರ ಗಣಪತಿ, ಹಾರುವ ನೀರಿನಲ್ಲೂ ಮೋಡದಲ್ಲೂ ಕಂಡರೆ ಅವನುಂಟು. ಮಣ್ಣಿನ ಮುದ್ದೆಗೆ, ಹಿಟ್ಟಿನ ಗೋಪುರಕ್ಕೆ ಐದು ಬೆರಳು ಒತ್ತಿದರೆ, ಪ್ರತೀಕ ಗಣಪತಿಯಂತೆ. ಹಿಟ್ಟಿನ ಗಣಪತಿ ಬಂಡೆಗಳು ವಿಶೇಷ ಸಾನ್ನಿಧ್ಯ ಸ್ಥಳಗಳಾಗಿ ಪೂಜ್ಯವಾಗಿವೆ. ಬತ್ತ, ಜೋಳ, ರಾಗಿ ಗಣಪತಿಯ ರಾಶಿರಾಶಿ. ಜವೆ ಗೋದಿ ಬಾರ್ಲಿ? ಹೌದು.

ಶೋಣಭದ್ರಾ ನದಿಯು ಕೆಂಪು ಕಲ್ಲುಗಳು. ಜಲ ಶಿಲಾ ಗಣೇಶ ಲಿಂಗಗಳಾಗಿ ಪ್ರಸಿದ್ಧಿ. ಪಂಚಾಯತನಗಳಲೆಲ್ಲ ಅವುಗಳೇ ಇರುವುದು. ಶೋಣಶಿಲಾ ಮೂರ್ತಿಗಳೂ ಇವೆ. ಸ್ವಸ್ತಿಕ ಚಿಹ್ನೆ, ಬರಿಯ ಚೌಕದ ರಂಗೋಲಿಯೂ ಗಣಪನೇ. ಮಣ್ಣು ಕೆಂಪು ಗಣಪ, ಆಕಾಶ ನೀಲಿ ಗಣಪತಿ. ವಾಯುವಿನ ಮೂಲಕ ವಿಘ್ನಕರ್ತಾ ಹರ್ತಾ ಗಣಪನಿರುವುದು ವ್ಯಕ್ತಾವ್ಯಕ್ತ. ಈಗ ಸ್ಪಷ್ಟ.

ಋಕ್ಕಿನಲ್ಲಿ ಗಣೇಶ ಆನೆಮೊಗ, ಕವಿ ಆದರೆ ಅಥರ್ವದಲ್ಲಿ ಸರ್ವಸ್ವ ಸರ್ವೋಪರಿ. ಗಣಪತಿ ಅಥರ್ವಶೀರ್ಷದಲ್ಲಿ ತ್ವವೇವ ಕೇವಲ ಕರ್ತಾಸಿ, ಭರ್ತಾಸಿ,... ಪ್ರತ್ಯಕ್ಷ ಕೇವಲಂ ಬ್ರಹ್ಮಾಸಿ - ಚಿನ್ಮಯ. ದ್ವೈತಾದ್ವೈತ ಸಕಲ ಚಿಂತನ ಗಣ-ಪತಿತ್ವ ಅವನಿಗೆ.

ಬ್ರಹ್ಮಚಾರಿ ಗಣೇಶನು ಸಿದ್ಧಿ–ಬುದ್ಧಿ ರಮಣ. ಲಕ್ಷ್ಮೀಗಣೇಶ ಸಂಪತ್ತಿಗೆ, ವಿದ್ಯಾಗಣಪತಿ ಅರಿವಿಗೆ ಆರಾಧ್ಯ.

ಇಲಿ ಅವನಿಗೆ ವಾಹನವಾದರೂ ಸಿಂಹ, ಪಕ್ಷಿಯಿಂದ ಬೈಕು, ವಿಮಾನಗಳನ್ನು ಕೊಟ್ಟಿದ್ದಾರೆ. ಹುಲ್ಲುಗರಿಕೆ, ನೀರು, ಕೊಟ್ಟರೆ ಸಾಕು ಅವನಿಗೆ. ಉಂಡೆ ಚಕ್ಕುಲಿ ಮೋದಕ ಬೇಕು. ಕಲ್ಪಿಸಿ ಕೊಟ್ಟರೂ ಸರಿ. ಅವನು ಬಾಲ (ತುಂಟ, ಹುಡುಗ, ಮಹಾಜ್ಞಾನಿ, ಮುಗ್ಧ, ಸಿದ್ಧ).

ನಮ್ಮ ಯಕ್ಷಗಾನದಲ್ಲಿ ಕಿರೀಟವೇ ಅವನು. ಗಣಪತಿ ಕಿರೀಟವುಂಟು. ಅಕ್ಕಿ ತೆಂಗಿನಕಾಯಿ ಇಟ್ಟರೆ ಅದೇ ಗಣಪತಿ. ಗಣೇಶ ಆಟದ ಮೇಳಗಳಿಗೆ ರಕ್ಷಕ. ಆದಿ - ಅಂತ್ಯಗಳಲ್ಲಿ ಅವನದೇ ಪದ, ಪದ್ಯ.

ಈ ಬಾರಿ ಹರಿದ್ರಾಗಣಪತಿ
ಮನುಕುಲಕ್ಕೆ ಬಂದಿರುವ ಆಪತ್ತಿನ ಮಧ್ಯೆ ನಾವು ಗಣೇಶನ ಆರಾಧನೆ ಬಿಡುವುದಿಲ್ಲ. ಅರಿಸಿಣದಲ್ಲಿ ಹರಿದ್ರಾ ಗಣಪತಿ ಮಾಡೋಣ. ಅರಿಸಿಣ ಕುಂಕುಮದ ಮಂಡಲ, ರಂಗೋಲಿ ಆಗದೆ? ಧಾನ್ಯದ ಸ್ವಸ್ತಿಕ, ಮಣ್ಣಿನ ಕಿರುಗೋಪುರ ಕಡಮೆ ಮಹಿಮೆಯದಲ್ಲ. ಶಿಲೆ, ಲೋಹ ಮೂರ್ತಿ ಉಂಟಲ್ಲವೇ? ಗರಿಕೆಗೆ ಕೊರತೆಯಿಲ್ಲ. ಭಕ್ತಿ ಬಗೆದು ಮೊಗೆದಷ್ಟು.

ಕೋವಿದನಲ್ಲಿ ಮೌನ ಪ್ರಾರ್ಥನೆ
ಶ್ರೀ ಗಣೇಶ ಸಕಲ ವಿದ್ಯಾ ಶಾಸ್ತ್ರ ಕಲಾ ಅಧ್ಯಾತ್ಮ ಕೋವಿದ. ಈ ಬಾರಿ ಎಲ್ಲರೂ ಪ್ರಾರ್ಥಿಸಬೇಕಾದುದು. ವಿಘ್ನಕರ್ತೃ, ವಿಘ್ನಹರ್ತೃ - ಎರಡೂ ನೀನೇ. ಮೊದಲ ವಿಷಯ ಈ ಬಾರಿ ಗೊತ್ತಾಗಿದೆ. ಈಗ ಎರಡನೆಯ ಮುಖವನ್ನು ಕಾಣಿಸು. ಏನಾದರೂ ದಾರಿ ತೋರಿಸುವ ವೈದ್ಯಗಣೇಶನಾಗು. ಕ್ಷಿಪ್ರ ಪ್ರಸಾದನಾಗು. ಮುಂದಿನ ವರ್ಷ ಕಬ್ಬು, ಬೆಲ್ಲ, ಕಜ್ಜಾಯ, ಚಕ್ಕುಲಿ, ಪೂಜೆ, ನೃತ್ಯ, ಯಕ್ಷಗಾನ ಸೇವೆ ಖಂಡಿತ. ನಾವು ಕೊಡುತ್ತೇವೆ. ಅಲ್ಲ. ನೀನು ತೆಗೆದುಕೋ ಸತ್ಯ ಗಣಪತಿ. ಮೋರಯಾ.

ಉಚ್ಛಿಷ್ಟ ಗಣಪತಿ
ಉಚ್ಛಿಷ್ಟ (ಉಳಿದದ್ದು, ಎಂಜಲು) ಗಣೇಶನ ವಾಮಾಚಾರದ ಸಂಕಲ್ಪಕ್ಕೆ, ಬಹುಶಃ ಉಚ್ಫಿಷ್ಟ - ಎಲ್ಲವನ್ನೂ ಮೀರಿದ ಉತ್-ಶಿಷ್ಟ, ಪರಾತ್ಪರ, ಹತ್ತಂಗುಲ ಮೀರಿದ ಅತ್ಯತಿಷ್ಟವೇ ಮೂಲ. ಅವನ ಮೂರ್ತಿಕಲ್ಪದಲ್ಲಿ ಮುವತ್ತೆರಡು ಪ್ರಸಿದ್ಧಿ. ಬಾಲ, ತರುಣ, ವೀರ, ಶಕ್ತಿ, ನೃತ್ಯ, ಸಿದ್ಧಿ, ವಿಘ್ನ, ಕ್ಷಿಪ್ರ - ಹೀಗೆ ಇನ್ನಷ್ಟು. ಆದರೆ ವ್ಯಾಸನಿಗೇ ಲಿಪಿಕಾರನಾದ ಇವನು, ‘ವ್ಯಾಕರಣ’ ಮೀರಿನಿಂತ ಅನಂತಮೂರ್ತಿ. ದ್ವಿಭುಜ, ಬಹುಭುಜ, ಪಂಚಮುಖ, ವಿಶ್ವರೂಪಿ, ವ್ಯಾಪಿ - ಕಪಿಲನಿಂದ ಪುಂಡು ಹುಡುಗನ ವರೆಗೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.