ADVERTISEMENT

ಈ ಕಾಲ ‘ಕನಕ’ ಕಾಲ

ನವೆಂಬರ್‌ 15 ‘ಕನಕದಾಸ’ ಜಯಂತಿ

ಚ.ಹ.ರಘುನಾಥ
Published 8 ನವೆಂಬರ್ 2019, 19:45 IST
Last Updated 8 ನವೆಂಬರ್ 2019, 19:45 IST
ಕಲೆ: ಬಿ.ಕೆ.ಎಸ್‌.ವರ್ಮಾ
ಕಲೆ: ಬಿ.ಕೆ.ಎಸ್‌.ವರ್ಮಾ    

ಮಣ್ಣಲ್ಲಿನ ಅದಿರು ಸೋಸಿ ಸೋಸಿ ಪರಿಷ್ಕಾರಗೊಂಡು ಚಿನ್ನವಾಗುವುದು. ಕನಕದಾಸರೂ ಹಾಗೆಯೇ. ಬದಲಾವಣೆಯ ಉರಿಗೆ ತಮ್ಮನ್ನೊಡ್ಡಿಕೊಂಡೇ ಅಪರಂಜಿ ಗುಣವ ‍ಪಡೆದವರು. ಹೆಸರಷ್ಟೇ ಅಲ್ಲ, ಅವರ ವ್ಯಕ್ತಿತ್ವವೂ ಕನಕ. ಕರ್ನಾಟಕದ ಸಾಮಾಜಿಕ–ಸಾಂಸ್ಕೃತಿಕ ಚರಿತ್ರೆಯ ಮಹತ್ವದ ಘಟ್ಟಗಳಲ್ಲೊಂದು ದಾಸಯುಗ. ಜನರ ನಡುವೆಯಿದ್ದೂ ವಿರಾಗಿಗಳಾಗಿದ್ದವರು, ಆಡುನುಡಿಯಲ್ಲಿ ಬದುಕಿನ ಘನಸತ್ಯಗಳನ್ನು ಕಾಣಿಸಿದವರು ದಾಸರು. ಈ ದಾಸಪರಂಪರೆಯ ಬಹುಮುಖ್ಯ ಭಾಗ ‘ಕನಕದಾಸ.’

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಾಡ ಕನಕದಾಸರ ಹುಟ್ಟೂರು. ಹುಟ್ಟಿದ್ದು ಕ್ಷಾತ್ರ ಪರಿಸರದಲ್ಲಿ. ಶ್ರೀಮಂತಿಕೆ, ಅಧಿಕಾರ, ಯುದ್ಧಮದ – ಎಲ್ಲದರಿಂದ ಕಳಚಿಕೊಂಡ ತಿಮ್ಮಪ್ಪನಾಯಕ ಕನಕದಾಸನಾಗಿ ಬದಲಾದ. ಈ ಬದಲಾವಣೆ ಸುಲಭದ್ದಾಗಿರಲಿಲ್ಲ. ಕಾಲ, ಸಮಾಜ, ಗುರು – ಎಲ್ಲವೂ ಎಲ್ಲರೂ ಅಪರಂಜಿಯ ಕಿಲುಬು ತೊಳೆವ ಪ್ರಕ್ರಿಯೆಯಲ್ಲಿ ಪರೀಕ್ಷಕರಾದರು. ಕತ್ತಿ ಕೆಳಗಿಟ್ಟ ತಿಮ್ಮಪ್ಪ, ‘ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ/ಇಹದ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ’ ಎನ್ನುವ ಭಾವಪರವಶತೆಯಲ್ಲಿ, ಕೇಶವನ ಕೀರ್ತನೆಗಳನ್ನು ಎದೆದುಂಬಿಕೊಂಡು ಕನಕದಾಸನಾದ.

ಕನಕದಾಸರದು ‘ಭಕ್ತಿಮಾರ್ಗ’. ಶರಣಾಗತಿ–ದೈನ್ಯ ಭಕ್ತಿಯ ಪ್ರಮುಖ ಲಕ್ಷಣ. ಕನಕರೂ ಆದಿಮೂರುತಿಯಲ್ಲಿ ಶರಣಾದವರೇ. ‘ದೀನ ನಾನು, ಸಮಸ್ತಲೋಕಕೆ ದಾನಿ ನೀನು’ ಎನ್ನುವ ಕನಕಮಾರ್ಗದಲ್ಲಿ ಸಲಿಗೆಗೂ ಪ್ರಶ್ನೆಗೂ ಅವಕಾಶವಿದೆ. ‘ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ / ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು / ಭಜಿಸಿ ಬದುಕೆಲೊ ಮಾನವ’ ಎನ್ನುವ ಕನಕರು, ‘ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ’ ಎಂದು ದೈವವನ್ನು ಹಂಗಿಸುತ್ತಾರೆ; ‘ಆವ ಸಿರಿಯಲಿ ನೀನು ಎನ್ನ ಮರೆತೆ’ ಎಂದು ಪ್ರಶ್ನಿಸುತ್ತಾರೆ. ಸುರರ ಸಿರಿಯನು ಬಿಡಿಸಿದ, ಕರಿ ಮೊರೆಯನು ಲಾಲಿಸಿದ, ಕಡಲೊಳು ಮನೆ ಮಾಡಿದ, ಶರಧಿಗೆ ಸೇತುವೆ ಕಟ್ಟಿದ, ಭೂಮಿಯನು ಮೂರಡಿ ಮಾಡಿದ – ಇವೆಲ್ಲದರ ಜೊತೆಗೆ, ಮನುಜರೆಲ್ಲರು ತನ್ನನ್ನು ಸ್ತುತಿಸುವರೆನ್ನುವ ಸಿರಿಯಿಂದಲೂ ದೇವನಿಗೆ ಮೈಮರೆವೆ ಉಂಟಾಗಿರಬಹುದೆನ್ನುವುದು ಅವರ ರಮ್ಯ ಕಲ್ಪನೆ. (ಈ ಹೊತ್ತಿಗೆ ಅನ್ವಯಿಸಿನೋಡಿದರೆ, ನಮ್ಮ ಪ್ರಜಾಪ್ರಭುತ್ವದ ಪ್ರತಿನಿಧಿಗಳು ಯಾವ ಯಾವ ಸಿರಿಗಳಲ್ಲಿ ಮೈಮರೆತಿರಬಹುದು.)

ADVERTISEMENT

ಸಮಾಜ ಶಿಕ್ಷಣ ದಾಸರ ಕೀರ್ತನೆಗಳ ಒಂದು ಉದ್ದೇಶವಷ್ಟೇ. ಕನಕದಾಸರ ಬರವಣಿಗೆಯಲ್ಲಂತೂ ಈ ಶಿಕ್ಷಣ ಎದ್ದುಕಾಣುವಂತಿದೆ. ‘ಬಲು ಪಾಶಗಳ ತರಿದು’ ಎಂದು ಮುಕ್ತಿಮಾರ್ಗದತ್ತ ಬೆಟ್ಟುಮಾಡುತ್ತಲೇ, ಅದಕ್ಕೆ ಪೂರ್ವಭಾವಿಯಾಗಿ ಕುಲಛಲಂಗಳ ಬಿಡುವ ಅವಶ್ಯಕತೆಯನ್ನು ಕಾಣಿಸುತ್ತಾರೆ. ‘ನೆಚ್ಚದಿರು ಸಂಸಾರ’ ಎನ್ನುತ್ತಲೇ – ಭೂಮಿ, ದ್ರವ್ಯ, ದುರಿತರಾಶಿಗಳನು ಗಳಿಸದಿರು; ಪರಸತಿಯ ಕೂಡದಿರು; ಗರ್ವದ ಮಾತುಗಳಾಡದಿರು ಎನ್ನುತ್ತಾರೆ.

ಕೇಶವನ ದಾಸನಾಗಿದ್ದ ಕನಕರೊಳಗೊಬ್ಬ ಕವಿಯೂ ಇದ್ದ ಎನ್ನುವುದಕ್ಕೆ ಉತ್ತಮ ಉದಾಹರಣೆ, ‘ಕಣ್ಣೇ ಕಾಮನ ಬೀಜ – ಈ ಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ’ ಎನ್ನುವ ಸಾಲು. ಈ ಭಕ್ತ–ಕವಿಯ ಯುಗಳದ ರೂಪದಲ್ಲಿ ‘ಹರಿಭಕ್ತಿಸಾರ’ವನ್ನೂ ‘ಮೋಹನ ತರಂಗಿಣಿ’ಯನ್ನೂ ನೋಡಬಹುದು. ಹರಿಯನ್ನು ಕೊಂಡಾಡಿದಷ್ಟೇ ತೀವ್ರತೆಯಲ್ಲಿ ಉಷಾ–ಅನಿರುದ್ಧರ ಶೃಂಗಾರವನ್ನು ಬಣ್ಣಿಸುವುದೂ ಅವರಿಗೆ ಸಾಧ್ಯವಾಗಿದೆ. ಡೊಂಕು ಬಾಲದ ನಾಯಕನ ಊಟದ ಬಗ್ಗೆ ವಿಚಾರಿಸುತ್ತ, ನಾಯಿಯ ಜೀವನಗತಿಯ ಮೂಲಕ ಲೌಕಿಕದಲ್ಲಿ ಸಿಲುಕಿಕೊಂಡವರ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಸೂಚಿಸುವಲ್ಲಿ ಕೂಡ ಕವಿಯದೇ ಮೇಲುಗೈ.

ಕನಕದಾಸರ ಬದುಕು–ಕಾವ್ಯದಲ್ಲಿ ಸಾಮಾಜಿಕ ಸಂಘರ್ಷದ ಆಯಾಮವನ್ನು ಗುರ್ತಿಸುವುದಿದೆ. ಹಿಂದುಳಿದ ವರ್ಗದವನೆನ್ನುವ ಕಾರಣಕ್ಕೆ ಕೃಷ್ಣನ ದರ್ಶನ ದೊರೆಯದಾದಾಗ, ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಎನ್ನುವ ಕನಕನ ಆರ್ತತೆಗೆ ಗೋಡೆಯನೊಡೆದು ಕೃಷ್ಣ ದರ್ಶನ ಕೊಟ್ಟಿದ್ದು ಜನಪ್ರಿಯ ಐತಿಹ್ಯ. ಈ ಕಥನ, ಸಾಂಪ್ರದಾಯಿಕ ಜಡತೆ ಹಾಗೂ ಮೌಢ್ಯಗಳ ಗೋಡೆ ಕುಸಿದುಬಿದ್ದಾಗ ಭಕ್ತಿ–ಸಮತೆಯ ಬೆಳಕು ಮೂಡುವ ರೂಪಕವೂ ಆಗಿದೆ. ಕನಕರ ವೈಚಾರಿಕ–ಸಾಮಾಜಿಕ ಪ್ರಜ್ಞೆ ಪ್ರಖರವಾಗಿ ಒಡಮೂಡಿರುವುದು ‘ರಾಮಧಾನ್ಯಚರಿತ್ರೆ’ ಕಾವ್ಯದಲ್ಲಿ. ಕನಕರ ಆತ್ಮವೃತ್ತಾಂತದ ರೂಪದಲ್ಲೂ ಓದಿಕೊಳ್ಳಲು ಸಾಧ್ಯವಿರುವುದು ಆ ಐತಿಹ್ಯದ ವಿಶೇಷ. ಶ್ರೇಷ್ಠತೆಯ ವ್ಯಸನದಲ್ಲಿ ಜಗಳಕ್ಕೆ ಬಿದ್ದ ಧಾನ್ಯಗಳ (ರಾಗಿ ಮತ್ತು ಭತ್ತ) ನೆಪದಲ್ಲಿ ವರ್ಗ–ವರ್ಣ ತರತಮಗಳನ್ನೂ ‘ರಾಮಧಾನ್ಯಚರಿತ್ರೆ’ ಟೀಕಿಸುತ್ತದೆ. ರಾಗಿಯ ಪರವಾಗಿ ರಾಮ ನಿಲ್ಲುವುದು, ಅಧಿಕಾರದಲ್ಲಿ ಇರುವವರು ತಳೆಯಬೇಕಾದ ನಿಲುವು ಯಾವುದೆನ್ನುವುದನ್ನು ಸೂಚಿಸುವಂತಿದೆ.

ಭಕ್ತಿ–ಸಮತೆಗಳ ‘ಕನಕಮಾರ್ಗ’ದ ಬಗ್ಗೆ ಯೋಚಿಸಲು ‘ಕನಕದಾಸ ಜಯಂತಿ’ ಒಂದು ಸುಸಂದರ್ಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.