ADVERTISEMENT

ಮಧ್ವಾಚಾರ್ಯ: ಭಕ್ತಿಮಾರ್ಗದ ಅರಿವು

ಘನಶ್ಯಾಮ ಡಿ.ಎಂ.
Published 29 ಜನವರಿ 2020, 19:30 IST
Last Updated 29 ಜನವರಿ 2020, 19:30 IST
ಮಧ್ವಾಚಾರ್ಯರು
ಮಧ್ವಾಚಾರ್ಯರು   

‘ಒಳಿತಿನ ಕರ್ಮವಷ್ಟೇ ಅಲ್ಲ, ಸಂಕಲ್ಪವೂ ಸತ್ಫಲವನ್ನೇ ಕೊಡುತ್ತದೆ’ ಎಂದು ಸಾರಿಹೇಳಿ, ‘ಸಾಧನೆಯು ಮುಕ್ತಿಗೆ ದಾರಿ’ ಎಂಬ ಭರವಸೆ ಹುಟ್ಟಿಸಿದ ಮಹಾನುಭಾವರು ಮಧ್ವಾಚಾರ್ಯರು. ‘ಜಗತ್ತು ಸತ್ಯ, ಪಂಚಭೇದಗಳು ನಿತ್ಯ, ಹರಿಯೇ ಸರ್ವೋತ್ತಮ’ ಎಂಬುದು ಮಧ್ವಸಿದ್ಧಾಂತದ ಮುಖ್ಯ ಸೂತ್ರ.ಇದನ್ನು ಆಚಾರ್ಯರು ತಮ್ಮ ಕೃತಿಗಳ ಮೂಲಕ ತರ್ಕಬದ್ಧವಾಗಿ ನಿರೂಪಿಸಿದರು.

‘ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಮಾರ್ಗವೇ ಸೋಪಾನ’ ಎಂದು ಪ್ರತಿಪಾದಿಸಿ, ದ್ವಾದಶಸ್ತೋತ್ರಗಳ ಮೂಲಕದಾಸ ಸಾಹಿತ್ಯಕ್ಕೆ ಮುನ್ನುಡಿಯನ್ನೂ ಬರೆದರು.

ದ್ವಾದಶಸ್ತೋತ್ರದಲ್ಲಿ ಬರುವ ‘ಕುರು ಭುಂಕ್ಷ ಚ ಕರ್ಮ ನಿಜಂ ನಿಯತಂ ಹರಿಪಾದ ವಿನಮ್ರಧಿಯಾ ಸತತಮ್’ (ನಿನ್ನ ಪಾಲಿನ ಕರ್ಮ ಮಾಡು, ಬಂದುದನುಣ್ಣು, ಹರಿಯ ಚರಣಗಳರಿವು ತಪ್ಪದಿರಲಿ) - ಎಂಬ ಆಜ್ಞಾರೂಪದ ಅವರ ನುಡಿಗಳು ಮಧ್ವರು ಪ್ರತಿಪಾದಿಸಿದಕಾಯಕ ಪ್ರಜ್ಞೆಯನ್ನು ಎತ್ತಿಹಿಡಿಯುತ್ತದೆ. ಈಚೆಗಷ್ಟೇ ಹರಿಪಾದ ಸೇರಿದ ವಿಶ್ವೇಶತೀರ್ಥರು ಪದೇಪದೇ ಉಲ್ಲೇಖಿಸುತ್ತಿದ್ದ‘ನಾನಾ ಜನಸ್ಯ ಶುಶ್ರೂಷಾ ಕರ್ತವ್ಯ ಕರ್ಮಾಖ್ಯಾಕರವಸ್ಮಿತೇಃ’ (ಜನಸೇವೆಗೆ ‘ಕರ್ಮ’ ಎಂದು ಹೆಸರು. ಇದು ರಾಜನಿಗೆ ತೆರಿಗೆ ಪಾವತಿಸುವಂತೆ ಪ್ರತಿಯೊಬ್ಬನ ಕರ್ತವ್ಯ) ಎಂಬ ಸೂತ್ರವಾಕ್ಯ ಕೊಟ್ಟವರೂ ಆಚಾರ್ಯ ಮಧ್ವರೇ.

ADVERTISEMENT

ಆಚಾರ್ಯ ಮಧ್ವರ ಬದುಕನ್ನು ಕಟ್ಟಿಕೊಡುವ ಕೃತಿ ‘ಸುಮಧ್ವವಿಜಯ’. ತ್ರೇತಾಯುಗದಲ್ಲಿ ಆಂಜನೇಯ, ದ್ವಾಪರದಲ್ಲಿ ಭೀಮಸೇನನಾಗಿದ್ದ ವಾಯುದೇವನೇ ಕಲಿಯುಗದಲ್ಲಿ ಮಧ್ವರಾಗಿ ಅವತಾರ ಮಾಡಿದ ಎನ್ನುವುದು ಪಾರಂಪರಿಕ ನಂಬಿಕೆ.

ತಂತ್ರಸಾರಸಂಗ್ರಹ, ಸದಾಚಾರಸ್ಮೃತಿ, ಯತಿಪ್ರಣವಕಲ್ಪ, ಮಹಾಭಾರತ ತಾತ್ಪರ್ಯನಿರ್ಣಯ, ದ್ವಾದಶಸ್ತೋತ್ರ, ನಖಸ್ತುತಿ ಸೇರಿದಂತೆ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಬ್ರಹ್ಮಸೂತ್ರಗಳು, ಉಪನಿಷತ್ತಗಳು ಮತ್ತು ಭಗವದ್ಗೀತೆಗೆ ಭಾಷ್ಯಗಳನ್ನೂ ರಚಿಸಿದ್ದಾರೆ. ಮಧ್ವರ ಕೃತಿಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ.

ಅವತಾರ ಮತ್ತು ಅಂತರ್ಧಾನ

ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ಮಧ್ಯಗೇಹ ಭಟ್ಟ, ವೇದವತಿ ದಂಪತಿಯ ಮಗನಾಗಿ ಕ್ರಿ.ಶ. 1238ರಲ್ಲಿ ಅವತಾರ ಮಾಡಿದರು. ಅವತಾರಕಾರ್ಯಗಳು ಸಮಾಪ್ತಿಯಾದ ನಂತರ ಉಡುಪಿಯ ಅನಂತೇಶ್ವರನ ದೇಗುಲದಲ್ಲಿ 1317ರಲ್ಲಿ ಅಂತರ್ಧಾನರಾದರು. ಅದನ್ನೇ ಮಧ್ವನವಮಿ ಎಂದು ಕರೆಯುತ್ತಾರೆ.

ಪ್ರತಿ ವರ್ಷ ಮಾಘ ಮಾಸದ ನವಮಿಯನ್ನು ‘ಮಧ್ವನವಮಿ’ಯಾಗಿ ಆಚರಿಸಲಾಗುತ್ತದೆ. ಮಾಧ್ವ ಪರಂಪರೆ ಅನುಸರಿಸುವವರಿಗೆ ಅದು ದೊಡ್ಡ ಹಬ್ಬ. ಅಂದು ವಿಶೇಷ ಪೂಜೆ, ಭಜನೆಗಳೊಂದಿಗೆ ಜ್ಞಾನಸ್ವರೂಪಿ ಪರಮಾತ್ಮ ವೇದವ್ಯಾಸನನ್ನು ಆರಾಧಿಸಿ, ಮಧ್ವರ ಉಪದೇಶಗಳನ್ನು ನೆನೆಯಲಾಗುತ್ತದೆ. ಕಡಲೆಬೇಳೆಯಿಂದ ತಯಾರಿಸುವ ಸಿಹಿತಿನಿಸು ‘ಹಯಗ್ರೀವ’ ಈ ಹಬ್ಬದ ವೈಶಿಷ್ಟ್ಯ.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.