ADVERTISEMENT

ಜಾಗರಣೆಗೆ ಹರಿದು ಬಂದ ಭಕ್ತಸಾಗರ

ಮಹಾಶಿವರಾತ್ರಿ ಜಾತ್ರೆ ಅಂಗವಾಗಿ ಮಾದೇಶ್ವರನಿಗೆ ಎಣ್ಣೆಮಜ್ಜನ ಸೇವೆ: ಎಲ್ಲೆಲ್ಲೂ ಶಿವನಾಮ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:26 IST
Last Updated 22 ಫೆಬ್ರುವರಿ 2020, 11:26 IST
ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ತರಕಾರಿ ಹಾಗೂ ಹಣ್ಣುಗಳಿಂದ ಗರ್ಭಗುಡಿಯನ್ನು ಅಲಂಕರಿಸಿರುವುದು
ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ತರಕಾರಿ ಹಾಗೂ ಹಣ್ಣುಗಳಿಂದ ಗರ್ಭಗುಡಿಯನ್ನು ಅಲಂಕರಿಸಿರುವುದು   

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಎಣ್ಣೆಮಜ್ಜನ ಸೇವೆ ಹಾಗೂ ವಿವಿಧ ಸೇವಾ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು.

ಶುಕ್ರವಾರ ಮುಂಜಾನೆ ಮಹಾ ಮಂಗಳಾರತಿಯೊಂದಿಗೆ ಎಣ್ಣೆಮಜ್ಜನ ಸೇವೆ ನಡೆಯಿತು. ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಉರುಳು ಸೇವೆ, ಮುಡಿಸೇವೆ, ರಜಸೇವೆ ಸಲ್ಲಿಸಿದರು.

ಎತ್ತ ನೋಡಿದರೂ ಜನಸಾಗರ. ಮಾದಪ್ಪನ ಕ್ಷೇತ್ರದಲ್ಲಿ ಬೀಡುಬಿಟ್ಟ ಭಕ್ತರು ತಮ್ಮ ಆರಾಧ್ಯ ದೈವ ಮಹದೇಶ್ವರನ ಸ್ಮರಣೆ ಮಾಡುತ್ತಾ ‘ಉಘೇ ಮಾದಪ್ಪ, ಉಘೇ ಮಾದಪ್ಪ’ ಎನ್ನುತ್ತಿದ್ದ ಘೋಷಣೆಗಳು ಕೇಳಿಬಂದವು.

ADVERTISEMENT

ಜಾತ್ರೆ ಅಂಗವಾಗಿ ವಿಶೇಷ ಸಿದ್ಧತೆ ಕೈಗೊಳ್ಳಲಾಗಿದೆ. ದೇವಾಲಯದ ಒಳಗೆ ಮತ್ತು ಹೊರಗೆ ವಿಶೇಷವಾಗಿ ಸಿಂಗರಿಸಲಾಗಿದೆ. ಗರ್ಭಗುಡಿಯಲ್ಲಿ ವಿವಿಧ ರೀತಿಯ ತರಕಾರಿ ಮತ್ತು ಹೂಗಳಿಂದ ಸಿಂಗರಿಸಿದ್ದು, ಮನಸೂರೆಗೊಂಡಿತು.

ಭಕ್ತರ ಅನುಕೂಲಕ್ಕೆ ಇತ್ತಿಚಿಗೆ ವಿಶಾಲ ಸ್ನಾನಘಟ್ಟವನ್ನು ನಿರ್ಮಿಸಿರುವ ಕಾರಣ ಯಾವುದೇ ತೊಂದರೆಯಾಗಲಿಲ್ಲ. ಶುಕ್ರವಾರ ಶಿವರಾತ್ರಿ ಜಾತ್ರೆ ಇದ್ದ ಕಾರಣ ರಾಜ್ಯದ ವಿವಿಧ ಭಾಗಗಳಿಂದ ಕಲಾ ತಂಡಗಳು ಆಗಮಿಸಿದ್ದವು. ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ ಜಾಗರಣೆ ನಡೆಯಿತು. ಪ್ರಾಧಿಕಾರದ ವತಿಯಿಂದ ನಿರಂತರ ದಾಸೋಹ ವ್ಯವಸ್ಥೆಯನ್ನು
ಕೈಗೊಳ್ಳಲಾಗಿದೆ.

ನೆಟ್‌ವರ್ಕ್ ಇಲ್ಲದೆ ಭಕ್ತರ ಪರದಾಟ: ಬೆಟ್ಟದಲ್ಲಿ ಬಿಎಸ್‌ಎನ್‌ಎಲ್‌ ಹೊರತು‍ಪ‍ಡಿಸಿ ಬೇರೆ ಕಂಪನಿಗಳ ನೆಟ್‌ವರ್ಕ್‌ ಸಮಸ್ಯೆ ಕಾಡಿತು. ಅಪಾರ ಸಂಖ್ಯೆಯ ಭಕ್ತರು ತಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಕರೆ ಮಾಡಲು ಪರದಾಡಿದರು.

‘ವರ್ಷದಲ್ಲಿ ನಾಲ್ಕು ಬಾರಿ ಜಾತ್ರೆ ನಡೆಯುತ್ತದೆ. ಅಪಾರ ಸಂಖ್ಯೆಯ ಭಕ್ತರು ಬಂದು ವಾರಗಟ್ಟಲೇ ಇಲ್ಲಿ ವಾಸ್ತವ್ಯ ಹೂಡುತ್ತಾರೆ. ಅಂಗಡಿಗಳಿಗೆ ಹೋಗಿ ಕರೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಭಕ್ತರು ದೂರುತ್ತಾರೆ.

ಸಂಚಾರ ದಟ್ಟಣೆ: ಶುಕ್ರವಾರ ನಿರೀಕ್ಷೆಗೂ ಮೀರಿ ವಾಹನಗಳು ಬಂದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ತಾಳಬೆಟ್ಟದಿಂದ ಆನೆತಲೆದಿಂಬದವರೆಗೂ ವಾಹನಗಳು ನಿಂತಿದ್ದವು. ಸಾರಿಗೆ ಬಸ್‌ ಹಾಗೂ ಖಾಸಗಿ ವಾಹನಗಳು ಅಡ್ಡಾದಿಡ್ಡಿ ನುಗ್ಗಿದ ಪರಿಣಾಮ ಪೊನ್ನಾಚಿ ಕ್ರಾಸ್ ಬಳಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಂಚಾರ
ದಟ್ಟಣೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.