ADVERTISEMENT

ಮಕರ ಸಂಕ್ರಾಂತಿ: ದೇಶದಾದ್ಯಂತ ಹಬ್ಬದ ಸಂಭ್ರಮ, ವಿಶೇಷ ಪ್ರಾರ್ಥನೆ

ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 2:19 IST
Last Updated 15 ಜನವರಿ 2020, 2:19 IST
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಜಸ್ಥಾನದ ಜೈಪುರದಲ್ಲಿ ಮಂಗಳವಾರ ರಾತ್ರಿ ನಡೆದ ಸಿಡಿಮದ್ದು ಪ್ರದರ್ಶನ –ಪಿಟಿಐ ಚಿತ್ರ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಜಸ್ಥಾನದ ಜೈಪುರದಲ್ಲಿ ಮಂಗಳವಾರ ರಾತ್ರಿ ನಡೆದ ಸಿಡಿಮದ್ದು ಪ್ರದರ್ಶನ –ಪಿಟಿಐ ಚಿತ್ರ   

ನವದೆಹಲಿ/ಬೆಂಗಳೂರು:ದೇಶದಾದ್ಯಂತ ಹಲವೆಡೆಗಳಲ್ಲಿ ಇಂದು ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಹಬ್ಬದ ಪ್ರಯುಕ್ತ ಪುಣ್ಯಕ್ಷೇತ್ರ ವಾರಾಣಸಿಯಲ್ಲಿ ನಸುಕಿನಲ್ಲೇ ಸಾವಿರಾರು ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನೂರಾರು ಭಕ್ತರು ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.

ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿಯೂ ಹಬ್ಬದ ಪ್ರಯುಕ್ತ ವಿಶೇಷ ಪೂಜೆ–ಪುನಸ್ಕಾರ ನಡೆಯುತ್ತಿವೆ. ಇಂದು ಸಂಜೆ ಮಕರಜ್ಯೋತಿ ದರ್ಶನದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಕೆಲವೆಡೆ ಮಂಗಳವಾರವೇ ಹಬ್ಬ ಆಚರಿಸಲಾಗಿತ್ತು.

ADVERTISEMENT

ಗಣ್ಯರಿಂದ ಶುಭಾಶಯ:ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಪ್ರಮುಖ ನಾಯಕರು ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ್ದಾರೆ.

‘ಏಕತಾ ಪ್ರತಿಮೆ’ ಬಳಿ ವರ್ಣಮಯ ಉತ್ತರಾಯಣ ಆಚರಣೆಯ ಚಿತ್ರಗಳನ್ನು ನೋಡಿ ಎಂದು ಕೆಲವು ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ ಮೋದಿ.

‘ಸೂರ್ಯನು ಪಥ ಬದಲಿಸುವ, ಹವಾಮಾನವು ಬದಲಾಗುವ ಹಾಗೂ ದೇಶದ ಹಲವು ಕಡೆಗಳಲ್ಲಿ ಕೊಯ್ಲು ಪ್ರಾರಂಭವಾಗುವ ಈ ಸಂದರ್ಭವನ್ನು ಮಕರ ಸಂಕ್ರಾಂತಿ, ಭೋಗಲಿ ಬಿಹು, ಪೊಂಗಲ್, ಉತ್ತರಾಯಣ ಮತ್ತು ಪೌಷ್ ಎಂಬ ಹೆಸರುಗಳಿಂದ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಶುಭಾಶಯಗಳು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.

‘ಸೂರ್ಯನ ಪಥ ಬದಲಾದಂತೆ ಎಲ್ಲರ ಬದುಕಿನ ಪಥವೂ ಅಭಿವೃದ್ಧಿಯತ್ತ ಸಾಗಲಿ. ಸುಖ, ಸಮೃದ್ಧಿಯ ಸುಗ್ಗಿ ಪ‍್ರತಿ ಮನೆ–ಮನ ತುಂಬಲಿ. ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.