ಭಕ್ತಾದಿಗಳು ನಾಗರಪಂಚಮಿ ಪ್ರಯುಕ್ತ ನಾಗ ಶಿಲೆಯ ಅಭಿಷೇಕ ಹಾಗೂ ಪೂಜೆ ಸಲ್ಲಿಸುತ್ತಿರುವುದು ಬೆಂಗಳೂರಿನ ವಿ ವಿ ಪುರಂನಲ್ಲಿ ಕಂಡು ಬಂತು.
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ದೇಶದ ನಾಲ್ಕೂ ದಿಕ್ಕಿನ ರಾಜ್ಯಗಳಲ್ಲಿ ನಾಗಪಂಚಮಿ ಹಬ್ಬವು ಬೇರೆ ಬೇರೆ ಹೆಸರಿನಲ್ಲಿ ಆಚರಣೆಯಲ್ಲಿದೆ. ನಮ್ಮ ರಾಜ್ಯಗಳ ಭಾಷೆ ಮತ್ತು ಭೂಭಾಗಗಳು ಬೇರೆಯಾದರೂ ಸಾಂಸ್ಕೃತಿಕವಾಗಿ ನಾವು ಒಂದೇ ಎಂಬುದಕ್ಕೆ ಇರುವ ಹಲವಾರು ಉದಾಹರಣೆಗಳಲ್ಲಿ ಇದು ಒಂದು – ಸರೀಸೃಪ ನಾಗನ ಕುರಿತಾಗಿ ಇರುವ ಪೂಜ್ಯಭಾವ.
‘ನಾಗರ ಪಂಚಮಿ ನಾಡಿಗೆ ದೊಡ್ಡದು’ ಎಂಬ ಜಾನಪದ ಹಾಡನ್ನು ನಾವೆಲ್ಲ ಅಲ್ಲಿಲ್ಲಿ ಕೇಳಿದ್ದಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಬೇರೆ ಬೇರೆ ಹಬ್ಬಗಳು ದೊಡ್ಡ ಹಬ್ಬ ಎನ್ನಿಸಿಕೊಳ್ಳುತ್ತವೆ. ದಕ್ಷಿಣೋತ್ತರ ಕನ್ನಡದ ಗ್ರಾಮಭಾಗದಲ್ಲಿ ಬಲು ಭಯ, ಶ್ರದ್ಧೆ ಮತ್ತು ಭಕ್ತಿಯಿಂದ ಹಾಗೂ ಹೆಚ್ಚಿನ ಸಾರ್ವಜನಿಕ ತೋರುಗಾಣಿಕೆ ಇಲ್ಲದೆ ನಡೆಯುವ ಈ ಹಬ್ಬ ಉತ್ತರ ಕರ್ನಾಟಕದ ಭಾಗದಲ್ಲಿ ಆಗುವಾಗ ದೊಡ್ಡ ಹಬ್ಬ ಎನ್ನಿಸಿಕೊಂಡು ಸಾರ್ವಜನಿಕ ಸ್ವರೂಪವನ್ನು ಪಡೆಯುತ್ತದೆ. ದೊಡ್ಡ ಹಬ್ಬವೆಂದಮೇಲೆ ಒಂದೇ ದಿನವಿದ್ದರೆ ಹೇಗೆ ಹೇಳಿ! ಹಾಗಾಗಿ ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಇದು ನಾಗರ ಅಮಾವಾಸ್ಯೆ (ಆಷಾಢ ಅಮಾವಾಸ್ಯೆ), ನಾಗಚತುರ್ಥೀ ಮತ್ತು ಪಂಚಮೀ ಸೇರಿ ಮೂರು ದಿನದ ಹಬ್ಬವಾಗುತ್ತದೆ. ನಾಗಾಪಂಚಮಿಯನ್ನೇ ‘ರೊಟ್ಟಿಪಂಚಮಿ’ ಎಂದು ಕರೆಯುವುದು ಉತ್ತರ ಕರ್ನಾಟಕದಲ್ಲಿ ರೂಢಿ. ಇಲ್ಲಿನ ಆಹಾರಸಂಸ್ಕೃತಿಯಲ್ಲಿ ರೊಟ್ಟಿಗಿರುವ ಸ್ಥಾನವಂತೂ ಅನನ್ಯ. ಇದಕ್ಕೆ ಸಂವಾದಿಯಾಗಿ ಉತ್ತರ ಕನ್ನಡದ ಗ್ರಾಮೀಣ ಭಾಗದಲ್ಲಿ ನಾಗರಪಂಚಮಿಯಂದು ‘ಚಪ್ಪೆರೊಟ್ಟಿ’ ಎಂದು ಕರೆಯಲಾಗುವ ಉಪ್ಪಿಲ್ಲದ ಅಕ್ಕಿರೊಟ್ಟಿಯನ್ನು ಮಾಡಿ ನಾಗನಿಗೆ ನೈವೇದ್ಯ ಮಾಡುವ ಸಂಪ್ರದಾಯ ಉಂಟು.
ಇನ್ನು ಈ ಹೊತ್ತಿನಲ್ಲಿ ಉತ್ತರ ಕರ್ನಾಟಕದಲ್ಲಿ ಮದುವೆಮಾಡಿಕೊಟ್ಟ ತಂಗಿಯಂದಿರನ್ನು ಅಣ್ಣಂದಿರು ಈ ಹಬ್ಬಕ್ಕೆಂದು ತವರಿಗೆ ಕರೆಯುವುದು ಬಲು ಮಹತ್ತ್ವದ ಒಂದು ಆಚರಣೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧವಾದ, ‘ಪಂಚಮಿ ಹಬ್ಬ ಉಳಿದಾವ ದಿನ ನಾಕ, ಅಣ್ಣ ಬರಲಿಲ್ಲ ಯಾಕ ಕರಿಯಾಕ’ ಎಂಬಿತ್ಯಾದಿ ಜನಪದ ಹಾಡುಗಳಲ್ಲಿ ಈ ಹಬ್ಬದ ಬಣ್ಣಗಳನ್ನು ಕಾಣಬಹುದು. ಜೀವಂತ ನಾಗನನ್ನು ತಂದು ಪೂಜೆಮಾಡುವ ಆಚರಣೆಯೂ ಸೇರಿದಂತೆ ಗ್ರಾಮದ ಮಹಿಳೆಯರೆಲ್ಲ ಸೇರಿ ಉಯ್ಯಾಲೆಯ ಆಟವಾಡುವ ತನಕ ನಾನಾ ವಿಧದ ಆಚರಣೆ ಜಾರಿಯಲ್ಲಿದೆ. ಸಮುದಾಯ ಬದುಕಿನ ಸುಂದರ ಅನುಭೂತಿಗಳ ಸಾಲಿನಲ್ಲಿ ಪಂಚಮಿ ಹಬ್ಬದ ಉಯ್ಯಾಲೆ, ಗೋರಂಟಿ, ಸಹಭೋಜನ, ತನಿ ಎರೆಯುವುದು, ಗುಂಪಾಗಿ ಹಾಡು ಹೇಳುವುದು, ಚಪ್ಪಾಳೆ ಹಾಕಿಕೊಂಡು ನರ್ತಿಸುವುದು – ಇವೆಲ್ಲವೂ ಸೇರಿವೆ.
ಈ ಹಬ್ಬದಂತೆ ನಿರಾಡಂಬರವಾದ ಹಬ್ಬಗಳು ಭಕ್ತಿಭಾವ ಮತ್ತು ಪರಿಸರದೊಟ್ಟಿಗಿನ ಸಹಬಾಳ್ವೆಯನ್ನು ಸಾರುತ್ತಲೇ ಸಾಧಿಸುವ ಇನ್ನೊಂದು ದೊಡ್ಡ ವಿಕ್ರಮವೆಂದರೆ ಅದು ಆಯಾ ಪ್ರದೇಶದ ಆಹಾರಸಂಸ್ಕೃತಿಯನ್ನು ಅಷ್ಟರಮಟ್ಟಿಗಾದರೂ ಜೀವಂತ ಉಳಿಸುವುದು. ಆಕ್ರಮಣಕ್ಕೆ ಒಳಗಾಗಿ ಅಳಿದುಹೋಗುತ್ತಿರುವ ಭಾರತೀಯತೆಯ ಬಲುದೊಡ್ಡ ಗುರುತು - ಅದು ಆಹಾರಪದ್ಧತಿ. ಅದನ್ನು ಉಳಿಸುವಲ್ಲಿ ನಾಗರಪಂಚಮಿಯಂಥ ಹಬ್ಬಗಳ ಕೊಡುಗೆ ದೊಡ್ಡದು. ಕನಿಷ್ಠಪಕ್ಷ ಅದೊಂದು ದಿನ, ಆಯಾ ಪ್ರದೇಶಕ್ಕೆ ವಿಶಿಷ್ಟವೆನಿಸಿದ ಆಹಾರವನ್ನು ತಯಾರಿಸುವ ಮತ್ತು ಸವಿಯುವ ಸಂದರ್ಭ ಈ ಹಬ್ಬದ ನೆವದಲ್ಲಿ ಒದಗಿಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.