ADVERTISEMENT

ಅನುರಣಿಸಿದ ಓಂ ನಮಃ ಶಿವಾಯ...

ಸಿದ್ಧಾರೂಢ ಮಠಕ್ಕೆ ಭಕ್ತರ ದಂಡು, ಬಿಲ್ವಪತ್ರೆಯಿಂದ ದೇವರ ಅಲಂಕಾರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:12 IST
Last Updated 22 ಫೆಬ್ರುವರಿ 2020, 10:12 IST
ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಸಮೀಪದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತಾದಿಗಳು
ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಸಮೀಪದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತಾದಿಗಳು   

ಹುಬ್ಬಳ್ಳಿ: ಮಹಾಶಿವರಾತ್ರಿ ಅಂಗವಾಗಿ ನಗರದ ಪ್ರಮುಖ ಶಿವ ದೇವಾಲಯಗಳಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದಿನಪೂರ್ತಿ ’ಓಂ ನಮಃ ಶಿವಾಯ...‘ ಅನುರಣಿಸಿತು.

ಸಿದ್ಧಾರೂಢ ಸ್ವಾಮಿ ಮಠ, ಸಿದ್ದೇಶ್ವರ ಪಾರ್ಕ್‌ನಲ್ಲಿರುವ ಕಾಶಿ ವಿಶ್ವನಾಥ ಮಂದಿರ, ಉಣಕಲ್ಲನ ರಾಮಲಿಂಗೇಶ್ವರ ದೇವಸ್ಥಾನ,ಮೂರು ಸಾವಿರಮಠ, ಅಂಚಟಗೇರಿಯ ನಾಗೇಶ್ವರ ದೇವಸ್ಥಾನ, ಇಂಡಿಪಂಪ್ ಹತ್ತಿರದ ಮಂಜುನಾಥ ದೇವಸ್ಥಾನ,ತೊರವಿಹಕ್ಕಲದ ಈಶ್ವರ ದೇವಸ್ಥಾನ, ಬಸವೇಶ್ವರ ನಗರದ ಶಿವ, ಗಣಪ ದೇವಸ್ಥಾನ ಮತ್ತು ರೇಣುಕಾನಗರದ ಚಿನ್ಮಯ ದೇವಸ್ಥಾನದಲ್ಲಿ ಬಿಲ್ವಪತ್ರೆಯಿಂದ ದೇವರನ್ನು ಅಲಂಕರಿಸಲಾಗಿತ್ತು. ಬೆಳಿಗ್ಗೆ ಆರು ಗಂಟೆಯಿಂದಲೇ ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆದವು. ದಿವಟಗಿ ಓಣಿಯ ಈಶ್ವರ ದೇವಸ್ಥಾನದಲ್ಲಿ ರಂಗೋಲಿಯಲ್ಲಿ ಅರಳಿದ್ದ ಶಿವನ ಮೂರ್ತಿ ಕಣ್ಮನ ಸೆಳೆಯಿತು. ಮೂರು ಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಮಠದಲ್ಲಿ ಪೂಜೆ ಸಲ್ಲಿಸಿದರು.

ನಗರದ ಸ್ಟೇಷನ್ ರಸ್ತೆಯಲ್ಲಿರುವ ಈಶ್ವರ ದೇವಾಲಯದ ಮೂರ್ತಿಗೆ ಈ ಬಾರಿ ಐದು ಅಡಿ ಎತ್ತರದ ಬೆಳ್ಳಿ ಕವಚ ಹಾಕಿದ್ದರಿಂದ ಮೂರ್ತಿ ಆಕರ್ಷಕವಾಗಿ ಕಾಣುತ್ತಿತ್ತು. 20 ಕೆ.ಜಿ. ಬೆಳ್ಳಿಯಲ್ಲಿ ಈ ಕವಚವನ್ನು ಉಡುಪಿಯಲ್ಲಿ ನಿರ್ಮಿಸಲಾಗಿದೆ. ವರ್ಷಕ್ಕೆ ಒಂದು ಸಲ ಮಾತ್ರ ಭಕ್ತರಿಗೆ ಶಿವನ ಮೂರ್ತಿಯನ್ನು ಸ್ಪರ್ಶಿಸಲು ಅವಕಾಶ ಸಿಗುವ ವಿದ್ಯಾನಗರದ ಜಯನಗರದ ಈಶ್ವರ ದೇವಸ್ಥಾನದಲ್ಲಿ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದ ಚಿತ್ರಣ ಕಂಡು ಬಂತು.

ADVERTISEMENT

ಉಪವಾಸ ಮಾಡಿದವರಿಗೆ ಮತ್ತು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಸ್ವಯಂ ಸೇವಕರು ವಿವಿಧ ಹಣ್ಣುಗಳನ್ನು ನೀಡುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಹಣ್ಣು, ಹಾಲು, ಕರ್ಜೂರ ವಿತರಿಸಿದರು. ಸಿದ್ಧಾರೂಢರ ಸೇವಾ ಬಳಗದ ಸದಸ್ಯರು ಮಠದ ಆವರಣದಲ್ಲಿ ಹಣ್ಣುಗಳನ್ನು ವಿತರಿಸಿದರು. ಈ ವೇಳೆ ಬಿಜೆಪಿ ಮುಖಂಡ ರವಿ ನಾಯ್ಕ, ರಾಮಣ್ಣ ಗಾರವಾಡ, ಮಂಜುನಾಥ ಅಬ್ಬಿಗೇರಿ, ಮಂಜುನಾಥ ಗಾರವಾಡ, ಚನ್ನಪ್ಪ ಬ್ಯಾಹಟ್ಟಿ, ನಾಗರಾಜ ಗಾಣಿಗೇರ, ರವಿ ಬನ್ನಿಕೊಪ್ಪ, ಕಸ್ತೂರಿ ಗಾರವಾಡ, ಕಲ್ಪನಾ ರವಿ ನಾಯ್ಕ ಪಾಲ್ಗೊಂಡಿದ್ದರು.

ಸಿದ್ಧಾರೂಢ ಮಠದಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ದಂಡ ನೆರೆದಿತ್ತು. ಅನೇಕ ಭಕ್ತರು ಮಠಕ್ಕೆ ಕಾಲ್ನಡಿಗೆಯಲ್ಲಿ ಬಂದು ಭಕ್ತಿ ಸಮರ್ಪಿಸಿದರೆ, ರೈಲ್ವೆ ನಿಲ್ದಾಣ ಆಟೊ ಚಾಲಕರ ಸಂಘದವರು ಭಕ್ತರಿಗೆ ಉಚಿತ ಆಟೊ ಸೇವೆ ಒದಗಿಸಿ ಭಕ್ತಿಗೆ ಪಾತ್ರರಾದರು. ಭಕ್ತರು ಬಿಲ್ವಪತ್ರೆ, ಹಣ್ಣುಗಳನ್ನು ಹಿಡಿದು ಸಿದ್ಧಾರೂಢರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ದೇವಸ್ಥಾನಗಳಲ್ಲಿ ಭಕ್ತರು ಶಿವನ ಭಜನೆ ಮಾಡಿದರು. ನೃಪತುಂಗ ಬೆಟ್ಟದ ಬಳಿಯಿರುವ ಪಿರಾಮಿಡ್‌ನಲ್ಲಿ ಸಂಜೆ ಸಮೂಹ ಧ್ಯಾನ ನಡೆಯಿತು.

ಚಳಮಟ್ಟಿ ಕ್ರಾಸ್‌ನ ಬೂದನಗುಡ್ಡದ ಹತ್ತಿರದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಶುಕ್ರವಾರ ಮಹಾರುದ್ರಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ನಾಮಾವಳಿ ಪಠಣ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆದವು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜ್ಯೋತಿರ್ಲಿಂಗ ರಥಯಾತ್ರೆ ಹಮ್ಮಿಕೊಂಡಿತ್ತು. ಸ್ಥಳೀಯ ವಿದ್ಯಾಕೇಂದ್ರದ ಹುಬ್ಬಳ್ಳಿ ವಲಯದ ನಿರ್ದೇಶಕ ಬಸವರಾಜ ರಾಜಋಷಿ ಶಿವಧ್ವಜಾರೋಹಣ ನೆರವೇರಿಸಿದರು.

’ಬೆಳಿಗ್ಗೆ ಆರು ಗಂಟೆಯಿಂದಲೇ ಭಕ್ತರುದೇವಸ್ಥಾನಕ್ಕೆ ನಿರಂತರವಾಗಿ ಬರುತ್ತಿದ್ದಾರೆ. ಶಿವರಾತ್ರಿಯಂದು ಬಿಲ್ವಾರ್ಚನೆ ಅಭಿಷೇಕ ವಿಶೇಷವಾದದ್ದು. ಹೀಗಾಗಿ ಬಿಲ್ವಾರ್ಚನೆಯಿಂದಲೇ ದೇವರನ್ನು ಅಲಂಕಾರ ಮಾಡಲಾಗಿದೆ‘ ಎಂದು ಸಿದ್ಧೇಶ್ವರ ಕಾಶಿ ವಿಶ್ವನಾಥ ಮಂದಿರದ ಅರ್ಚಕ ಪ್ರಭಯ್ಯಸ್ವಾಮಿ ಗಂಗಯ್ಯಸ್ವಾಮಿ ಹಿರೇಮಠ ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.