ADVERTISEMENT

ಪ್ರಾರ್ಥನೆ ಎಂಬ ಪರಮ ಔಷಧ

ರಘು ವಿ
Published 11 ಮಾರ್ಚ್ 2020, 19:30 IST
Last Updated 11 ಮಾರ್ಚ್ 2020, 19:30 IST
.
.   

‘ಪ್ರಾ ರ್ಥನೆ ಎಂಬುದು ಹಗಲಿನ ಕೀಲಿಯಾಗಲಿ ಮತ್ತು ರಾತ್ರಿಯ ಬೀಗಮುದ್ರೆಯಾಗಲಿ’ ಎನ್ನುತ್ತಾನೆ, ಜಾರ್ಜ್ ಹರ್ಬರ್ಟ್.

ಎಲ್ಲ ಧರ್ಮಗಳಲ್ಲೂ ಪ್ರಾರ್ಥನೆಗೆ ಮಹತ್ತರವಾದ ಸ್ಥಾನವಿದೆ. ಎಲ್ಲರೂ ಒಂದಿಲ್ಲೊಂದು ಬಗೆಯಲ್ಲಿ ಪ್ರಾರ್ಥಿಸಿಯೇ ಇರುತ್ತಾರೆ. ಮಗುವಿನ ಅಳುವಿನಷ್ಟೇ ಸಹಜ ಮನುಷ್ಯನಿಗೆ ಪ್ರಾರ್ಥನೆ. ಪ್ರತಿಯೊಂದು ಬಯಕೆಯೂ ಒಂದು ಮಟ್ಟದ ಪ್ರಾರ್ಥನೆಯೇ. ನಾಸ್ತಿಕನಾಗಲೀ ಆಸ್ತಿಕನಾಗಲೀ –ಬೇಕುಗಳಿಗಾಗಿ ಹಂಬಲಿಸುತ್ತಿರುತ್ತಾನೆ.

ಪ್ರಾರ್ಥನೆಗಳಲ್ಲಿ ಸ್ಥೂಲವಾಗಿ ಎರಡು ವಿಧ. ಒಂದು ಪ್ರಾಪಂಚಿಕ ಅಪೇಕ್ಷೆಗಳ ಪೂರೈಕೆಗೆ ಪ್ರಾರ್ಥನೆ. ಮತ್ತೊಂದು ಆಧ್ಯಾತ್ಮಿಕ ಅಪೇಕ್ಷೆಗಳಿಗಾಗಿ ಪ್ರಾರ್ಥನೆ. ಶಕ್ತಿ, ಸಂಪತ್ತು, ಸಾವಿಲ್ಲದ ಬದುಕಿಗಾಗಿ ಪ್ರಾರ್ಥಿಸಿ ಪಡೆದುಕೊಳ್ಳುವವರು ಕೆಲವರಾದರೆ; ಭಕ್ತಿ, ವೈರಾಗ್ಯ, ಮುಕ್ತಿಗಾಗಿ ಪ್ರಾರ್ಥಿಸಿಕೊಳ್ಳುವವರು ಹಲವರು. ಎಲ್ಲರೂ ಬುದ್ಧರಾಗುವುದು ಸಾಧ್ಯವಿಲ್ಲ. ಭೋಗ ಮುಗಿದ ಬಳಿಕವಷ್ಟೇ ತ್ಯಾಗ. ಈ ಸತ್ಯದ ಅರಿವಾಗಬೇಕಾದರೂ ಬಹಳ ಕಾಲವೇ ಹಿಡಿಯುತ್ತದೆ. ಶ್ರೀರಾಮಕೃಷ್ಣರ ಮಾತಿನಲ್ಲಿ ಹೇಳುವುದಾದರೆ - ‘ಬೆಳ್ಳುಳ್ಳಿಯನ್ನಿಟ್ಟ ಪಾತ್ರೆಯ ವಾಸನೆ ಎಷ್ಟು ತೊಳೆದರೂ ಹೋಗದು . . . .’ ಮುಂದುವರೆದು ಹೇಳುವರು: ‘ಬೆಂಕಿಯಲ್ಲಿ ಸುಟ್ಟರೆ ಪಾತ್ರೆಯಲ್ಲಿನ ಆ ವಾಸನೆ ಹೋಗುವುದು’ (ಅಂದರೆ, ತಪಸ್ಸು, ಸಾಧನೆಗಳಿಂದ ಮನಸ್ಸನ್ನು ಸುಟ್ಟು ಪವಿತ್ರಗೊಳಿಸಿದರೆ, ಅಂತಹ ಶುದ್ಧ ಮನಸ್ಸಿನಿಂದ ಬಲವಾದ ಪ್ರಾರ್ಥನೆ ಮಾಡಲು ಸಾಧ್ಯ).

ADVERTISEMENT

ಕ್ರಿಶ್ಚಿಯನ್ ಧರ್ಮದಲ್ಲೂ ಪ್ರಾರ್ಥನೆಗೆ ಒತ್ತು ನೀಡಲಾಗಿದೆ. ಸಂತ ಪಾಲನು ‘ಎಡೆಬಿಡದೆ ಪ್ರಾರ್ಥಿಸಿ’ ಎನ್ನುತ್ತಾನೆ. ಕ್ರಿಸ್ತ ಕೂಡ ದೀರ್ಘಕಾಲದ ಪ್ರಾರ್ಥನೆ ಮಾಡುತ್ತಿದ್ದನಲ್ಲದೆ ‘ಜಾಗ್ರತರಾಗಿರಿ ಮತ್ತು ಪ್ರಾರ್ಥಿಸುತ್ತಿರಿ’ ಎಂಬ ಸಂದೇಶ ನೀಡಿದ್ದಾನೆ. ಕ್ರೈಸ್ತ ಆಧ್ಯಾತ್ಮಿಕ ಜೀವನದ ಮೂರು ಸೂತ್ರಗಳು: ಧ್ಯಾನ (meditatio), ಪ್ರಾರ್ಥನೆ (oratio) ಮತ್ತು ಮನನ (contemplatio). ಬದುಕನ್ನು ಸರಳವೂ ಪವಿತ್ರವೂ ದೇವಪುತ್ರನಿಗೆ ಪ್ರಿಯವೂ ಆಗುವಂತೆ ಮಾಡಿಕೊಳ್ಳುವ ಮಾರ್ಗವಿದು. ಇಸ್ಲಾಮಿನಲ್ಲಿಯೂ ಪ್ರಾರ್ಥನೆಗೆ ಸರಳ ಸೂತ್ರಗಳನ್ನು ನೀಡಲಾಗಿದೆ. ಅದು ಆರಂಭವಾಗುವುದೇ ಬಾಹ್ಯಶುದ್ಧಿಯಿಂದ (ವುಜ಼ು) ಅನಂತರ ಸಲಾಹ್. ಆ ಪ್ರಾರ್ಥನೆಯನ್ನು ಮಾಡುವ ಕ್ರಮವಿದೆ. ಪವಿತ್ರ ಕಾಬಾಹ್‌ದತ್ತ ಮುಖ ಮಾಡಿ ನಿಂತು ನಿಯ್ಯಾಹ್ (ಸಂಕಲ್ಪ) ಮಾಡಬೇಕು. ತದನಂತರದ ಕ್ರಮಗಳನ್ನು ಕೆಲವು ಸೂತ್ರಗಳನ್ನು ಪವಿತ್ರ ಖುರಾನಿನ ಭಾಗಗಳನ್ನು ಪಠಿಸಿ ಪ್ರಾರ್ಥನೆ ಮಾಡಬೇಕು.

ಆದರೆ ಯಾವುದೇ ಧರ್ಮದ, ಕ್ರಮದ ಪ್ರಾರ್ಥನೆಯಾದರೂ ಮೂಲದಲ್ಲಿ ಶ್ರದ್ಧೆಯಿರಬೇಕು. ಒಳಗಿನ ಅಹಂಕಾರ ತಡೆಯಾದರೆ ಪ್ರಾರ್ಥನೆ ಫಲಿಸದು. ಮತ್ತೆ ರಾಮಕೃಷ್ಣರ ಮಾತಿನಲ್ಲೇ ಹೇಳುವುದಾದರೆ: ‘ಮಣ್ಣು ದಿಬ್ಬದ ಮೇಲೆ ಮಳೆಯ ನೀರು ನಿಲ್ಲುವುದಿಲ್ಲ.’ ಪ್ರಾರ್ಥನೆಯ ಹಿಂದೆ ಶಾಂತಿ, ಸರ್ವಹಿತ, ಸಮಾಧಾನದ ಭಾವ ಇದ್ದಾಗ ಅದು ಫಲಿಸುವುದು. ಪರಮಾತ್ಮನೊಂದಿಗೆ ನಮಗಿರುವ ಸಂಪರ್ಕಸಾಧನ ಅದೊಂದೇ. ಜೀವನದಲ್ಲಿ ಅದೊಂದು ದೊಡ್ಡ ಭರವಸೆ. ಸಂತ ಜಾನನ ಪ್ರಕಾರ: ‘ನಮ್ಮ ಎಲ್ಲ ಕಷ್ಟಕೋಟಲೆ, ತೊಂದರೆ, ಬೇಡಿಕೆಗಳಿಗೆ ಪ್ರಾರ್ಥನೆಯೇ ಪರಮೌಷಧ. ಭಗವಂತನು ತನ್ನದೇ ರೀತಿಯಲ್ಲಿ ಅದನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿರಲಿ.’ ಭವಸಾಗರದ ಪಯಣದಲ್ಲಿ ಭಕ್ತಿಯ ಹಾಯಿಪಟಕ್ಕೆ ಶಕ್ತಿ ತುಂಬುವುದೇ ಪ್ರಾರ್ಥನೆ. ಒಳಿತಿಗಾಗಿ, ಶಾಂತಿಗಾಗಿ ಎಲ್ಲರೂ ಪ್ರಾರ್ಥಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.