ADVERTISEMENT

ವಿಶ್ವಸಂತ ರಾಮಕೃಷ್ಣ ಪರಮಹಂಸ

ರಘು ವಿ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
ram
ram   

‘ಶ್ರೀರಾಮಕೃಷ್ಣರ ಜೀವನಚರಿತ್ರೆ ಎಂಬುದು ಧರ್ಮದ ಪ್ರಾಯೋಗಿಕ ಚರಿತ್ರೆ. ಅವರ ಜೀವನದ ಮೂಲಕ ನಾವು ದೇವರಿಗೆ ಮುಖಾಮುಖಿಯಾಗುತ್ತೇವೆ’ ಎಂದರು ಮಹಾತ್ಮಾ ಗಾಂಧಿ.

ಕಾಮಾರಪುಕುರವೆಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶ್ರೀರಾಮಕೃಷ್ಣರ ಮೂಲ ಹೆಸರು ಗದಾಧರ. ಗದಾಧರನ (ವಿಷ್ಣು) ಕೃಪೆಯಿಂದ ಹುಟ್ಟಿದ ಶಿಶು ಎಂಬ ಕಾರಣಕ್ಕೆ ಅವರ ತಂದೆ ಕ್ಷುಧಿರಾಮ ಈ ಹೆಸರನ್ನಿಟ್ಟರಂತೆ. ತಾಯಿ, ಚಂದ್ರಮಣಿ ದೇವಿ. ತಂದೆ-ತಾಯಿ ಇಬ್ಬರೂ ಸಜ್ಜನರೂ ಸದಾಚಾರಿಗಳೂ ಆದವರು. ಈ ಮಗುವು ಬಾಲ್ಯದಿಂದಲೇ ಭಗವದಭಿಮುಖವಾದದ್ದಕ್ಕೆ ಅವರು ಸಂತಸವನ್ನೇ ಪಟ್ಟರು. ಆದರೆ ಯಾವಾಗ ಮಗುವು ವಿದ್ಯೆ - ಅಂದರೆ ಅಕ್ಷರ ವಿದ್ಯೆಯ ಕಲಿಕೆಯ ಕಡೆಗೆ ಆಸಕ್ತಿ ತೋರಲಿಲ್ಲವೊ ಆಗ ಅಣ್ಣ ರಾಮಕುಮಾರನಿಗೆ ತಮ್ಮನ ಭವಿಷ್ಯದ ಬಗ್ಗೆ ಚಿಂತೆ ಹತ್ತಿತು. ಅವನು ಅವರನ್ನು ಕಲ್ಕತ್ತೆಗೆ ಕರೆದೊಯ್ದ. ಮುಂದೆ ಅಣ್ಣ-ತಮ್ಮ ಇಬ್ಬರೂ ರಾಣಿ ರಾಸಮಣಿಯು ಕಟ್ಟಿಸಿದ ಭವತಾರಿಣಿ ಕಾಳಿ ಮಂದಿರದಲ್ಲಿ ಅರ್ಚಕರಾದರು. ಕ್ರಮೇಣ ಗದಾಧರ - ಅಂದರೆ ರಾಮಕೃಷ್ಣ (ರಾಣಿಯ ಅಳಿಯ ಮಥುರನಾಥ ವಿಶ್ವಾಸ ಈ ಹೆಸರನ್ನು ಅವರಿಗೆ ಗಟ್ಟಿ ಮಾಡಿದ) ಕಾಳಿಯ ಪ್ರಧಾನ ಅರ್ಚಕರಾದರು. ಅವರ ಪಾಲಿಗೆ ಪೂಜೆ, ಅರ್ಚನೆ, ದೇವತಾ ಕೈಂಕರ್ಯ ಕೇವಲ ಕ್ರಿಯೆಯಾಗಿರಲಿಲ್ಲ. ಅವರಿಗೆ ಕಾಳಿಯ ಮೂರ್ತಿ ಕೇವಲ ವಿಗ್ರಹವಾಗಿರಲಿಲ್ಲ. ಪೂಜಕನು ಪೂಜಿತ ವಸ್ತುವಿನಲ್ಲಿ ಚೈತನ್ಯವನ್ನು ದೀಪ್ತಗೊಳಿಸುವ ಪರಿ ಅದಾಗಿತ್ತು. ಜಗತ್ತು ಈ ಅದ್ಭುತ ಪವಾಡವನ್ನು ಬೆರಗಿನಿಂದ ನೋಡಿತು, ಮೊದಲಿಗೆ ’ಹುಚ್ಚು ಪೂಜಾರಿ’ ಎಂದಿತು. ಬಳಿಕ ಮಹಾಸಾಧಕ, ಸಿದ್ಧ ಎಂದಿತು. ಕೊನೆಗೆ ಅವತಾರಪುರುಷ ಎಂದು ಒಪ್ಪಿತು. ದಕ್ಷಿಣೇಶ್ವರದಲ್ಲಿ ದೇವತೆಯ ಜಾಗೃತಿಯೊಂದಿಗೆ ದೇವ ಮಾನವನ ಸ್ಥಾಪನೆಯಾದದ್ದು ಹೀಗೆ.

ಶ್ರೀರಾಮಕೃಷ್ಣರ ಬದುಕನ್ನು ಸರಳವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ಸಾಧನಾಪೂರ್ವದ ಹಳ್ಳಿಯ ಗದಾಧರ, ಕಾಳಿಯ ಅರ್ಚಕ-ಸಾಧಕ ಶ್ರೀರಾಮಕೃಷ್ಣ ಮತ್ತು ಅವತಾರ ಪುರುಷ ಶ್ರೀರಾಮಕೃಷ್ಣ.

ADVERTISEMENT

ಆದರೆ ಈ ಮೂರೂ ಹಂತದಲ್ಲಿ ಅವರಲ್ಲಿ ನಾವು ಕಾಣುವುದು ಪ್ರಾಮಾಣಿಕತೆ, ಸತ್ಯಾನ್ವೇಷಣೆ ಮತ್ತು ಸ್ಥಿರತೆ. ಇನ್ನು ಅವತಾರವೆಂದು ಘೋಷಣೆಯಾದ ಮೇಲೂ ಅವರಲ್ಲಿ ಸತ್ಯವನ್ನು ಹಂಚುವ ಹಂಬಲವಿತ್ತೇ ಹೊರತು ವಿಮುಖತೆಯ ವೈರಾಗ್ಯವಾಗಲಿ, ಅಹಮಿಕೆಯ ಮೆರೆತವಾಗಲಿ ಇರಲಿಲ್ಲ. ತಮ್ಮ ಇಡೀ ಬದುಕನ್ನೇ ಅವರು ಪ್ರಯೋಗಶಾಲೆಯಾಗಿಸಿಕೊಂಡು ತಾವು ಕಂಡುಂಡ ಸತ್ಯವನ್ನು ಸುತ್ತಲಿನವರಿಗೆ ಹಂಚುವುದರಲ್ಲಿ ನಿರತರಾಗಿದ್ದರು. ಧರ್ಮದ ಹೆಸರಿನಲ್ಲಿ, ಮತದ ಹೆಸರಿನಲ್ಲಿ ಛಿದ್ರ ಛಿದ್ರ ಭಾವಗಳು ಹರಡುತ್ತಿರುವ ಕಾಲದಲ್ಲಿ ಎಲ್ಲ ಮತಧರ್ಮಗಳನ್ನು ಅವುಗಳ ಮೂಲ ಬೋಧನೆ ಮತ್ತು ಆಚರಣೆಗಳ ಮೂಲಕ ಅರಗಿಸಿಕೊಂಡು, ಅವೆಲ್ಲವೂ ಒಂದೇ ಗಮ್ಯ ತಲುಪಿಸುವ ಸಾಧನಗಳೆಂದು ಘೋಷಿಸಿದರು. ಚರಿತ್ರಕಾರ ಆರ್ನಾಲ್ಡ್ ಟಾಯನ್‌ಬಿ ಹೇಳುತ್ತಾರೆ: ‘ಶ್ರೀರಾಮಕೃಷ್ಣರ ಸಂದೇಶ ಒಂದು ಕ್ರಿಯಾತ್ಮಕ ಅಭಿವ್ಯಕ್ತಿ. ಧರ್ಮ ಕೇವಲ ಅಧ್ಯಯನದ ವಸ್ತುವಲ್ಲ, ಅದು ಜೀವನಕ್ರಮ ಮತ್ತು ಅನುಭವ. ಈ ಕ್ಷೇತ್ರದ ವಿಶೇಷತೆಯನ್ನು ತೋರಿದವರು ಶ್ರೀರಾಮಕೃಷ್ಣರು. ಭಾರತ ಅಥವಾ ಬೇರೆಲ್ಲಿಯೂ ಯಾವುದೇ ಧರ್ಮಶ್ರೇಷ್ಠನು ಏರಲಾರದ ಎತ್ತರವನ್ನು, ಅನುಭವವನ್ನು ಮುಟ್ಟಿದರು ಶ್ರೀರಾಮಕೃಷ್ಣರು.’

ಇಡೀ ವಿಶ್ವದ ಚರಿತ್ರೆಯಲ್ಲಿ ಮನುಷ್ಯನ ಚಿಂತನೆ, ಧಾರ್ಮಿಕ ಅನುಭವಗಳನ್ನು ವ್ಯಾಪಕವಾಗಿ ವಿಸ್ತರಿಸಿದ, ಎತ್ತರಕ್ಕೇರಿಸಿದ ಮಹಾನುಭಾವರು ಶ್ರೀರಾಮಕೃಷ್ಣರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.