ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಜೀವನ ವ್ಯಾಪಾರವಲ್ಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 11 ಡಿಸೆಂಬರ್ 2020, 19:31 IST
Last Updated 11 ಡಿಸೆಂಬರ್ 2020, 19:31 IST
   

ಮನುಷ್ಯ ಸಂಘಜೀವಿ. ಸಂಘಟಿತ ಬುದ್ಧಿಯಿಂದಲೇ ಪ್ರಪಂಚ ಆಳುವ ಮತ್ತು ಅಳಿಸುವ ಮಟ್ಟಕ್ಕೆ ಬೆಳೆದಿದ್ದಾನೆ. ಈಗಾಗಲೇ ಭೂಮಿ ಮೇಲಿರುವ ಚರಾಚರಗಳು ಅವನ ಸ್ವತ್ತಾಗಿವೆ. ಈಗ ಭೂಮಂಡಲದಾಚೆಗೂ ಆಧಿಪತ್ಯ ಸ್ಥಾಪಿಸಲು ಹೊರಟಿದ್ದಾನೆ. ಇದರಲ್ಲಿ ಆತ ಯಶಸ್ವಿಯೂ ಆಗಬಲ್ಲ. ಸಾವಿರ ವರ್ಷಗಳ ಹಿಂದೆ ಸಪ್ತಸಾಗರಗಳಾಚೆ ಏನಿದೆ ಎಂದು ಅನ್ವೇಷಿಸಿದವನಿಗೆ, ಮುಂದಿನ ಸಾವಿರ ವರ್ಷಗಳಲ್ಲಿ ಸೌರ ಮಂಡಲದಾಚೆಗಿನ ಬ್ರಹ್ಮಾಂಡವನ್ನ ಶೋಧಿಸುವುದು ಕಷ್ಟವಾಗುವುದಿಲ್ಲ. ಏಕೆಂದರೆ ಭಗವಂತ ಅಂತಹ ಬುದ್ಧಿಶಕ್ತಿಯನ್ನು, ಅದನ್ನ ಬಳಸುವ ಯುಕ್ತಮಾರ್ಗವನ್ನು ಅವನಿಗೆ ಕರುಣಿಸಿದ್ದಾನೆ. ಅಂತಹ ದಿವ್ಯಶಕ್ತಿ ಇರುವುದರಿಂದಲೇ ಆತನಿಗೆ ದಿಗಂತದಾಚೆ ದೃಷ್ಟಿ ನೆಟ್ಟು ನೋಡುವ ಧೈರ್ಯ ಬಂದಿದೆ. ಹಾಗಿಲ್ಲದಿದ್ದರೆ, ಭಗವಂತನ ಸೃಷ್ಟಿಯನ್ನು ಆತ ಸಣ್ಣದಾಗಿ ಯೋಚಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.

ಭಗವಂತನಾಡುವ ಸೃಷ್ಟಿವ್ಯೂಹದ ಮಾಯೆಯ ಆಟದಲ್ಲಿ ಮನುಷ್ಯ ಒಂದು ಸ್ಪರ್ಧಾಕಾಯಿ ಅಷ್ಟೇ. ಇದನ್ನರಿಯದ ಮನುಷ್ಯ ತಾನೇ ಸರ್ವಶಕ್ತ ಅಂತ ಭ್ರಮಿಸಿ, ಜೀವನದಲ್ಲಿ ಮುಗ್ಗರಿಸಿ ಬೀಳುತ್ತಿದ್ದಾನೆ. ಭೂಮಂಡಲದಾಚೆಗೆ ಲಂಗರು ಹಾಕಿ ನೋಡುವ ಮನುಷ್ಯನಿಗೆ, ತನ್ನ ಅಂತರಂಗದೊಳಗಿನ ಪ್ರಪಂಚವನ್ನೇ ಸರಿಯಾಗಿ ನೋಡಲಾರದೆ ಪರಿತಪಿಸುತ್ತಿದ್ದಾನೆ. ಜಗತ್ತನ್ನು ಗೆಲ್ಲಬೇಕೆಂದು ಹೊಂಚುವ ಅವನಿಗೆ ಸುಖ-ನೆಮ್ಮದಿಗೆ ಏನು ಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಇಡೀ ಪ್ರಪಂಚಕ್ಕೆ ಬೋಧನೆಮಾಡಬಲ್ಲವ, ತನ್ನ ಮನೆಯ ಸಣ್ಣ ಸಮಸ್ಯೆಯನ್ನು ಬಗೆಹರಿಸಲಾಗುತ್ತಿಲ್ಲ. ಇದನ್ನೇ ಮನುಷ್ಯಮಿತಿ ಅನ್ನುವುದು.

ಭಗವಂತ ಎಲ್ಲ ಕೊಡುತ್ತಾನೆ. ಯಾವುದನ್ನೂ ಕೊಡಲಾರೆ ಎನ್ನಲಾರ. ಆದರೆ ಅದನ್ನು ಸರಿಯಾಗಿ ಬಳಸುವ ಜಾಣ್ಮೆ-ತಾಳ್ಮೆ ನಮಗಿರಬೇಕು. ಬ್ರಹ್ಮಾಂಡವನ್ನೇ ಗೆಲ್ಲುವಷ್ಟು ಬುದ್ಧಿಯನ್ನು ಪಡೆದರೂ, ಮನುಷ್ಯ ನೆಮ್ಮದಿ ಇಲ್ಲದೆ ಚಡಪಡಿಸುತ್ತಾನೆಂದರೆ, ಎಲ್ಲೋ ಎಡವಿದ್ದಾನೆಂದೇ ಅರ್ಥ. ತಂದೆಯಿಂದ ಸಂಪತ್ತನ್ನು ಪಡೆದೂ ಸುಂದರ ಬದುಕನ್ನು ಕಟ್ಟಿಕೊಳ್ಳಲಾಗದ ಹೆಡ್ಡಮಗನಂತೆ, ಭಗವಂತ ಕೊಟ್ಟ ಜೀವ ಮತ್ತು ಜೀವನವನ್ನು ಸುಖವಾಗಿಸಿಕೊಳ್ಳಲಾರದೆ ಮನುಷ್ಯ ದಡ್ಡನಾಗುತ್ತಿದ್ದಾನೆ. ತಾನೇ ಸೃಷ್ಟಿಸಿಕೊಂಡಿರುವ ಅಸೌಖ್ಯದ ಬದುಕಿಗೆ, ಅದರಿಂದ ಬರುವ ಫಲಕ್ಕೆ ತುತ್ತಾಗುತ್ತಿದ್ದಾನೆ.

ADVERTISEMENT

ಇಡೀ ಪ್ರಪಂಚವನ್ನೇ ವ್ಯಾಪಾರಿಮಯ ಮಾಡಿರುವ ಮನುಷ್ಯನಿಗೆ ಎಲ್ಲವನ್ನೂ ದುಡ್ಡುಕೊಟ್ಟು ಪಡೆಯುವುದು ಗೊತ್ತೇ ಹೊರತು, ಸ್ವಂತವಾಗಿ ತನ್ನ ಬದುಕಿಗೆ ಬೇಕಾದುದನ್ನು ಸೃಷ್ಟಿಸಿಕೊಳ್ಳಲಾರ. ಹೀಗಾಗಿ ಹೊನ್ನು-ಮಣ್ಣನ್ನು ಮಾರುಕಟ್ಟೆಯಲ್ಲಿ ಖರೀದಿಸಿದಂತೆ, ಸುಖ-ಶಾಂತಿ-ನೆಮ್ಮದಿ ಖರೀದಿಸಲು ಆಗದೆ ಕಂಗಾಲಾಗಿದ್ದಾನೆ. ಎಲ್ಲವನ್ನೂ ವ್ಯಾಪಾರದೃಷ್ಟಿಯಿಂದ ನೋಡುವುದರಿಂದ ಆತನಿಗೆ ಖರೀದಿಸಿ ಗೊತ್ತೇ ಹೊರತು, ತನ್ನ ಬದುಕಿಗೆ ಅಗತ್ಯವಾದ ನೆಮ್ಮದಿಯನ್ನು ಸ್ವಯಂ ಸೃಷ್ಟಿಸಿಕೊಳ್ಳುವುದಾಗಲಿ, ಅದನ್ನು ಅನುಭವಿಸುವುದಾಗಲಿ ಗೊತ್ತಿಲ್ಲ. ಈಗಲೂ ಬದುಕಿನಲ್ಲಿ ಅಮೂಲ್ಯವಾದುದನ್ನು ಏನು ಕಳೆದುಕೊಂಡಿದ್ದೇನೆ ಅನ್ನೋದು ಅರಿವಾಗುತ್ತಿಲ್ಲ. ಇದರಿಂದಾಗಿ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ನೆಮ್ಮದಿ ಕಾಣದೆ ಅತೃಪ್ತತೆಯ ಚಡಪಡಿಕೆಯಲ್ಲೇ ಜೀವ-ಜೀವನ ಸವೆಸುತ್ತಿದ್ದಾನೆ. ತಾನೇ ಸೃಷ್ಟಿಸಿಕೊಂಡ ಅಸುಖದ ಕಂದಕಕ್ಕೆ ಬಿದ್ದು ನರಳಾಡುತ್ತಿದ್ದಾನೆ.

ಹುಟ್ಟುವಾಗಿನ ಆಸ್ಪತ್ರೆಖರ್ಚಿನಿಂದ ಸಾಯುವಾಗಿನ ಮಸಣದ ಖರ್ಚಿನವರೆಗೂ ಹಣದಲ್ಲೇ ಲೆಕ್ಕ ಹಾಕುತ್ತಾನೆ. ಹಣದಿಂದಲೇ ಎಲ್ಲವನ್ನೂ ಕೊಂಡುಕೊಳ್ಳಬಹುದೆಂದು ಸದಾ ಹಣದ ಬಗ್ಗೆಯೇ ಯೋಚಿಸುತ್ತಾನೆ. ಜೊತೆಗೆ, ಹಣ ಗಳಿಸಬೇಕೆಂಬ ಧಾವಂತದಲ್ಲಿ, ಅದು ನೆಮ್ಮದಿ ಕಟ್ಟಿಕೊಡಲಾರದೆಂಬ ಸತ್ಯ ಸಹ ಮರೆತಿದ್ದಾನೆ. ಬದುಕನ್ನು ಮಾರುಕಟ್ಟೆಯಲ್ಲಿಟ್ಟು,ನೆಮ್ಮದಿಯನ್ನು ಅರಸುವ ಅವನ ಅಜ್ಞಾನ ಅವನನ್ನೇ ನುಂಗುತ್ತಿದೆ. ವ್ಯಾಪಾರ ಜೀವನದ ಒಂದು ಭಾಗವಷ್ಟೇ, ಇಡೀ ಜೀವನವೇ ವ್ಯಾಪಾರವಲ್ಲ ಎಂಬ ‘ಸತ್ಯ’ ಗೊತ್ತಾದಾಗ ಮಾತ್ರ ಆತನಿಗೆ ‘ಸಚ್ಚಿದಾನಂದ’ಜೀವನದ ದರ್ಶನವಾಗುತ್ತದೆ. ಅಲ್ಲಿಯವರೆಗೆ ಅವನ ಜೀವನ ಅಯೋಮಯವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.