ಮನುಷ್ಯ ಬುದ್ಧಿವಂತನಾದಷ್ಟೂ ಅವನ ಜೀವನದ ಗುಣಮಟ್ಟ ಸುಧಾರಿಸಬೇಕು; ನೆಮ್ಮದಿಯ ಬಾಳ್ವೆ ಅವನದ್ದಾಗಬೇಕು. ಆದರೆ ಈಗಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಸುಖದ ಹುಡುಕಾಟದಲ್ಲಿ ಮನುಷ್ಯನು ಪಡೆದಿರುವ ಫಲ ಎಂದರೆ ಆತಂಕ–ಭಯಗಳೇ; ಅವನ ಬುದ್ಧಿವಂತಿಕೆ ಅವನಿಗೆ ನೀಡುತ್ತಿರುವ ಬಳುವಳಿ ಎಂದರೆ ಅದು ಅಶಾಂತಿಯೇ. ‘ಈ ವಿಪರೀತ ವಿದ್ಯಮಾನಗಳಿಗೆ ಕಾರಣವೇನು? ಮನುಷ್ಯನ ಬುದ್ಧಿಶಕ್ತಿಯು ಅವನ ನೆಮ್ಮದಿಗೆ ಬೇಕಾದ ವಿವೇಕಶಕ್ತಿಯನ್ನು ನೀಡುವಲ್ಲಿ ವಿಫಲವಾಗಿರುವುದಾದರೂ ಏಕೆ? ಮನುಷ್ಯನ ದಿಟವಾದ ನೆಮ್ಮದಿ–ಆನಂದಗಳ ಸ್ವರೂಪ ಏನು? ಅವುಗಳ ನೆಲೆಯಾದರೂ ಎಲ್ಲಿ’ ಇಂಥ ಜೀವನಾಭಿಮುಖವಾದ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕೊಡುವಂಥದ್ದೇ ವೇದಾಂತ. ಈ ವೇದಾಂತಶಾಸ್ತ್ರದ ಕಾಂತಿಯನ್ನೂ ಬಲವನ್ನೂ ಹೆಚ್ಚಿಸಿ, ಅದನ್ನು ಗಟ್ಟಿಯಾಗಿ ನೆಲೆಗೊಳಿಸಿದವರು ಶಂಕರಾಚಾರ್ಯರು.
‘ವೇದಾಂತ’ ಎಂದರೆ ವೇದದ ಕೊನೆ, ತಾತ್ಪರ್ಯ. ‘ವೇದ’ ಎಂದರೆ ತಿಳಿವಳಿಕೆ, ಅರಿವು, ಜ್ಞಾನ. ನಮ್ಮ ಅರಿವಿನ ಕೊನೆಯನ್ನು, ಎಂದರೆ ಅದರ ಅಂತಿಮ ಗುರಿಯನ್ನು ತಿಳಿಸಿಕೊಡುವುದೇ ವೇದಾಂತ. ಶಂಕರಾಚಾರ್ಯರು ವೇದಾಂತಕ್ಕೆ ಸ್ಪಷ್ಟತೆಯನ್ನು ತಂದುಕೊಟ್ಟವರು. ವೇದಾಂತದ ಗುರಿಯೇ ಬ್ರಹ್ಮಜ್ಞಾನದ ಅರಿವು ಎಂಬುದನ್ನು ಅವರು ಪ್ರತಿಪಾದಿಸಿದರು. ಬ್ರಹ್ಮಜ್ಞಾನ ಎಂದರೆ ನಮ್ಮತನದ ಅರಿವಲ್ಲದೆ ಬೇರೇನೂ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ನಮ್ಮತನದ ಅರಿವು ಎಂದರೆ ಏನು? ನಾನು ಯಾರು – ಎಂಬುದನ್ನು ಕಂಡುಕೊಳ್ಳುವುದೇ ನಮ್ಮತನದ ಅರಿವು. ಈ ಪ್ರಶ್ನೆಗೆ ಉತ್ತರ ಮೇಲ್ನೋಟಕ್ಕೆ ಬಹಳ ಸುಲಭ ಎನಿಸುತ್ತದೆ. ಆದರೆ ಹಂತಹಂತವಾಗಿ ಈ ಪ್ರಶ್ನೆಯ ಆಳಕ್ಕೆ ಇಳಿಯುತ್ತಹೋದಂತೆ ಇದರ ಗಹನತೆ ನಮ್ಮನ್ನು ಬೆರಗುಗೊಳಿಸದಿರದು. ನಾವು ದಿಟವಾಗಿಯೂ ಯಾರು – ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ವಿಫಲವಾಗಿರುವುದೇ ಇಂದಿನ ನಮ್ಮ ಸಮಸ್ಯೆಗಳಿಗೆ ಮೂಲಕಾರಣವಾಗಿದೆ.
ನಾವು ಸತ್ಯವನ್ನು ಸುಳ್ಳು ಎಂಬಂತೆಯೂ, ಸುಳ್ಳನ್ನು ಸತ್ಯ ಎಂಬಂತೆಯೂ ಸ್ವೀಕರಿಸುತ್ತಿದ್ದೇವೆ. ಇದೇ ಅವಿದ್ಯೆ. ಈ ಅವಿದ್ಯೆಯಿಂದ ನಾವು ಬಿಡುಗಡೆಯನ್ನು ಸಾಧಿಸಬೇಕೆಂಬುದೇ ವೇದಾಂತದ ತವಕ. ಇಂಥ ಅವಿದ್ಯೆಯ ಮೂಲವನ್ನು ಶಂಕರಾಚಾರ್ಯರು ‘ಅಧ್ಯಾಸ’ ಎಂದು ಒಕ್ಕಣಿಸಿದರು.‘ಅದಲ್ಲದ್ದರಲ್ಲಿ ಅದು ಎಂಬ ತಿಳಿವಳಿಕೆಯೇ ಅಧ್ಯಾಸ’ ಎಂದಿದ್ದಾರೆ. ಇದು ಹೇಗೆ ಎಂದರೆ ಹಗ್ಗವನ್ನು ಕಂಡು ಹಾವು ಎಂದು ಹೆದರಿಕೊಂಡಂತೆ! ‘ನಾನು ಬಡವ, ನಾನು ಶ್ರೀಮಂತ; ನಾನು ಆ ಜಾತಿಯವನು, ನಾನು ಈ ಧರ್ಮದವನು; ನಾನು ಆ ರಾಜ್ಯದವನು, ನಾನು ಈ ಭಾಷೆಯವನು’ – ಹೀಗೆ ನಮ್ಮನ್ನು ನಾವು ಏನೇನೋ ಆಗಿ ತಿಳಿದುಕೊಳ್ಳುತ್ತಿರುತ್ತೇವೆ. ಹೀಗೆ ನಾವು ತಿಳಿದುಕೊಂಡಿರುವುದನ್ನೇ ಸತ್ಯ ಎಂದು ಹಟವನ್ನೂ ಮಾಡುತ್ತಿರುತ್ತೇವೆ. ಈ ಹಟಬುದ್ಧಿಯಿಂದ ನಮ್ಮಲ್ಲಿ ಪೂರ್ವಗ್ರಹಗಳು ಉಂಟಾಗಿ ಅವು ರಾಗ–ದ್ವೇಷಗಳಿಗೆ ಮೂಲವಾಗುತ್ತವೆ. ಈ ರಾಗದ್ವೇಷಗಳು ನಮ್ಮನ್ನು ಆಕ್ರಮಿಸಿಕೊಂಡು ನಮ್ಮಿಂದ ಎಲ್ಲ ಅನಾಹುತಗಳನ್ನು ಮಾಡಿಸುತ್ತಿರುತ್ತವೆ. ಒಮ್ಮೆ ನಾವು ಯಾರೆಂದು ನಮಗೇ ಅರಿವಾದರೆ ಆಗ ನಮ್ಮ ರಾಗದ್ವೇಷಗಳು ಅಡಗಿ, ನಮ್ಮಲ್ಲಿ ವಿವೇಕದ ಉದಯವಾಗಿ, ಉದ್ವೇಗಗಳು ತೊಲಗಿ ನೆಮ್ಮದಿ ಮೂಡಿಕೊಳ್ಳುತ್ತದೆ. ಹೀಗೆ ನಮ್ಮಲ್ಲಿ ನೆಮ್ಮದಿಯನ್ನು ನೆಲೆಗೊಳಿಸುವುದೇ ವೇದಾಂತದ ಗುರಿ.
ಹಾಗಾದರೆ ನಾವು ನಿಜವಾಗಿಯೂ ಯಾರು? ನಾವೆಲ್ಲರೂ ಚೈತನ್ಯಸ್ವರೂಪಿಗಳು. ಈ ಚೈತನ್ಯವಸ್ತುವನ್ನೇ ವೇದಾಂತಶಾಸ್ತ್ರ ‘ಬ್ರಹ್ಮ’ ಎಂದು ಕರೆದಿರುವುದು. ನಾವು ಈ ಬ್ರಹ್ಮಜ್ಞಾನವನ್ನು ಸಂಪಾದಿಸುವ ವಿಧಾನವನ್ನು ತಿಳಿಸಿಕೊಟ್ಟಿರುವುದೇ ಶಂಕರಾಚಾರ್ಯರ ಹಿರಿಮೆ.
ಬ್ರಹ್ಮಜ್ಞಾನವನ್ನು ಸಂಪಾದಿಸಲು ನಮಗೆ ಬೇಕಾದ ಮೊದಲ ಅರ್ಹತೆ ಎಂದರೆ ಮೊದಲಿಗೆ ನಾವು ಮನುಷ್ಯರಾಗಬೇಕು ಎಂದು ಸೂಚಿಸುತ್ತಾರೆ, ಶಂಕರರು. ಈ ಸಾಧನೆಯ ಮಾರ್ಗವೇ ಸಾಧನಚತುಷ್ಟಯ. ನಮ್ಮ ಒಳಗಿನ ಮತ್ತು ಹೊರಗಿನ, ಎಲ್ಲ ವಿಧದ ಕೊಳೆಗಳನ್ನು ಕಳೆದುಕೊಳ್ಳುವ ವಿಧಾನವೇ ಈ ಸಾಧನೆಯ ತಾತ್ಪರ್ಯ. ನಮ್ಮ ಎಲ್ಲ ಭಾವ–ಬುದ್ಧಿಗಳು ಸಂಸ್ಕಾರಗೊಂಡು ಮನಸ್ಸು ಉದ್ವೇಗವನ್ನು ಕಳೆದುಕೊಂಡಾಗ ಎಲ್ಲೆಲ್ಲೂ ನಮಗೆ ಏಕತೆಯೇ ಅರಿವಿಗೆ ಬರುತ್ತದೆ. ಇಂಥ ಏಕತೆಯನ್ನು ಪಡೆದ ವ್ಯಕ್ತಿಯಲ್ಲಿ ಎಂಥ ಭೇದಬುದ್ಧಿಗೂ ನೆಲೆ ಇರದು. ಭೇದಬುದ್ಧಿಯೇ ಇಲ್ಲದಿದ್ದಾಗ ಭಯ, ದ್ವೇಷ, ಆತಂಕ, ಹಿಂಸೆಗಳಿಗೆ ಅವಕಾಶವಾದರೂ ಹೇಗಿದ್ದೀತು? ಇಂಥ ಸಮಾನತೆಯ ದರ್ಶನವೇ ಅದ್ವೈತದರ್ಶನ. ಇದನ್ನು ಲೋಕದಲ್ಲಿ ಸ್ಥಿರಗೊಳಿಸಿದವರು ಆಚಾರ್ಯ ಶಂಕರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.