ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕಪಿಮುಖ ಹೊತ್ತ ನಾರದ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 24 ಮಾರ್ಚ್ 2022, 1:20 IST
Last Updated 24 ಮಾರ್ಚ್ 2022, 1:20 IST
   

ರಾಜಕುಮಾರಿ ಶ್ರೀಮತಿಯನ್ನು ಸ್ವಯಂವರದಲ್ಲಿ ಹೇಗಾದರೂ ತಾನೇ ವರಿಸಬೇಕೆಂಬ ದುರಾಸೆಪಟ್ಟ ನಾರದ, ಇದಕ್ಕಾಗಿ ಕುತಂತ್ರ ಹೆಣೆಯಲು ಸಿದ್ದನಾದ. ‘ತಾನು ಸುಂದರ ಪುರುಷಧಾರಿಯಾಗಬೇಕು. ಆಗ ಅವಳು ಪ್ರಸನ್ನಳಾಗಿ ತನಗೆ ಮಾಲೆ ಹಾಕಿ ವರಿಸುತ್ತಾಳೆ’ ಎಂದು ಊಹಿಸಿ, ವಿಷ್ಣುವಿನ ಸೌಂದರ್ಯ ಕೋರಲು ವೈಕುಂಠಕ್ಕೆ ಬರುತ್ತಾನೆ. ‘ರಾಜ ಶೀಲನಿಧಿ ತನ್ನ ಮಗಳ ಕೋರಿಕೆಯಂತೆ ಸ್ವಯಂವರವನ್ನು ಏರ್ಪಡಿಸಿದ್ದಾನೆ. ದಶದಿಕ್ಕುಗಳಿಂದಲೂ ಸಾವಿರಾರು ರಾಜಕುಮಾರರು ಸ್ವಯಂವರಕ್ಕೆ ಬಂದಿದ್ದಾರೆ. ರಾಜಕುಮಾರಿ ಶ್ರೀಮತಿಯನ್ನು ವರಿಸಲು ನನಗೆ ಆಸೆಯಾಗಿದೆ. ನಿನ್ನ ಸೌಂದರ್ಯವನ್ನು ನನಗೆ ಕೊಟ್ಟರೆ. ನಾನವಳನ್ನು ಖಂಡಿತವಾಗಿಯೂ ಪಡೆಯುತ್ತೇನೆ. ಆದ್ದರಿಂದ ನಿನ್ನ ಸ್ವರೂಪವನ್ನು ನನಗೆ ನೀಡು’ ಎಂದು ವಿಷ್ಣುವನ್ನ ಕೋರುತ್ತಾನೆ.

ಆಗ ವಿಷ್ಣು ‘ಹರಿ’ಯ (ಕಪಿಯ) ಮುಖವನ್ನೂ ನಾರದನಿಗೆ ಅನುಗ್ರಹಿಸುತ್ತಾನೆ. ನಾರದನು ಹರಿಯ ಸ್ವರೂಪವನ್ನು ಪಡೆದೆ ಅಂತ ಹಿಗ್ಗುತ್ತಾನೆ. ಶ್ರೀಹರಿಯ ಮರ್ಮ ಏನೆಂಬುದನ್ನು ಅರಿಯದೆ, ರಾಜಕುಮಾರರೆಲ್ಲರೂ ಸೇರಿದ್ದ ಸ್ವಯಂವರ ಸ್ಥಳಕ್ಕೆ ಬರುತ್ತಾನೆ. ವಿಷ್ಣುವಿನ ರೂಪವನ್ನು ಧರಿಸಿದ್ದೇನೆ, ತನ್ನನ್ನಲ್ಲದೆ ಮತ್ತಾರನ್ನೂ ಶ್ರೀಮತಿ ವರಿಸಲಾರಳು – ಎಂದು ಆಲೋಚಿಸುತ್ತಾ, ರಾಜಸಭೆಯಲ್ಲಿ ಕುಳಿತುಕೊಳ್ಳುತ್ತಾನೆ. ಸ್ವಯಂವರದಲ್ಲಿ ಸೇರಿದ್ದ ರಾಜಕುಮಾರರು ಸೇರಿದಂತೆ ಯಾರಿಗೂ ನಾರದನಲ್ಲಿ ಆಗಿರುವ ವ್ಯತ್ಯಾಸ ಗೊತ್ತಾಗಲಿಲ್ಲ. ಆದರೆ, ಶಿವನ ಧ್ಯಾನಿಸಿ ತಪಸ್ಸು ಮಾಡಿದ್ದ ನಾರದನನ್ನು ಅಪಮಾನದಿಂದ ಕಾಪಾಡಬೇಕೆಂದು ಬ್ರಾಹ್ಮಣರ ವೇಷ ಧರಿಸಿ ಬಂದಿದ್ದ ಶಿವಗಣಗಳಿಬ್ಬರಿಗೆ ಗೊತ್ತಾಯಿತು. ನಾರದನನ್ನು ಎಚ್ಚರಿಸಲು ಗಣಗಳಿಬ್ಬರೂ ಅವನ ಬಳಿ ಬಂದು ‘ನಿನಗೆ ವಿಷ್ಣುವಿನಂತೆ ದೇಹವಿದೆ. ಆದರೆ ಮುಖ ಮಾತ್ರ ಕೋತಿಯಂತಿದೆ” ಎಂದು ಹಾಸ್ಯಮಾಡಿದರು.

ಮನ್ಮಥವಿಕಾರಗಳಿಗೆ ಸಿಲುಕಿ ಮೈ ಮರೆತಿದ್ದ ನಾರದನಿಗೆ ವೇಷಧಾರಿ ಶಿವಗಣಗಳ ಮಾತು ಕೇಳಿಸಲೇ ಇಲ್ಲ. ಮೋಹಾವಿಷ್ಟನಾದ ನಾರದ ರಾಜಕುಮಾರಿ ಶ್ರೀಮತಿ ಬರುವುದನ್ನೇ ಕಾಯುತ್ತಿದ್ದ. ವಿಷ್ಣುವಿನಂತೆ ಸುಂದರವಾಗಿರುವ ತನ್ನನ್ನು ನೋಡಿದ ಕ್ಷಣವೇ ರಾಜಕುಮಾರಿ ಮಾಲೆ ಹಾಕುತ್ತಾಳೆ; ವಿವಾಹವಾಗಿ ಸುಖಸಂಸಾರ ನಡೆಸಬಹುದೆಂದು ಯೋಚಿಸುತ್ತಿದ್ದ. ಸ್ವಯಂವರ ಸ್ಥಳಕ್ಕೆ ಲಕ್ಷ್ಮಿಯಂತೆ ಶೋಭಿಸುತ್ತಿದ್ದ ಶ್ರೀಮತಿ ಮಾಲೆಯನ್ನು ಕೈಯ್ಯಲ್ಲಿ ಹಿಡಿದು ಒಂದು ಸುತ್ತು ಬಂದಳು. ಕಪಿಮುಖ ಹೊತ್ತು ವಿಷ್ಣುವಿನ ಶರೀರ ಹೊಂದಿದ್ದ ನಾರದಮುನಿಯನ್ನು ನೋಡಿ ಕೋಪಗೊಂಡಳು. ಅಲ್ಲದೆ, ತನ್ನ ಮನಸ್ಸಿಗೆ ಒಪ್ಪಿದ ವರನೊಬ್ಬನನ್ನೂ ಕಾಣದೆ ಸಭೆಯ ನಡುವೆಯೇ ನಿಂತುಬಿಟ್ಟಳು. ಆಗ ರಾಜವೇಷವನ್ನು ಧರಿಸಿ ಬಂದ ವಿಷ್ಣು ರಾಜಕುಮಾರಿ ಶ್ರೀಮತಿಯೊಬ್ಬಳಿಗೆ ಮಾತ್ರ ಕಾಣಿಸಿದ. ಶ್ರೀಮತಿ ಸಂತೋಷದಿಂದ ವಿಷ್ಣುವಿನ ಕೊರಳಿಗೆ ಮಾಲೆ ಹಾಕಿದಳು. ವಿಷ್ಣು ತನಗೆ ಮಾಲೆ ಹಾಕಿದ ಶ್ರೀಮತಿಯೊಡನೆ ಅಂತರ್ಧನನಾದ.

ADVERTISEMENT

ಇದರಿಂದ ಅಲ್ಲಿ ಸೇರಿದ್ದ ರಾಜಕುಮಾರರೆಲ್ಲ ನಿರಾಶರಾದರೆ, ಕಾಮಪೀಡಿತನಾದ ನಾರದಮುನಿ ಬಹಳ ಸಂಕಟಪಟ್ಟ. ಮನ್ಮಥನ ಮೋಹಪಾಶಕ್ಕೆ ಸಿಲುಕಿ ತತ್ತರಿಸುತ್ತಿರುವ ನಾರದನ ದುರವಸ್ಥೆ ನೋಡಿ ಬ್ರಾಹ್ಮಣ ವೇಷಧಾರಿಗಳಾದ ಶಿವನ ಗಣಗಳಿಬ್ಬರು ‘ನಾರದಮುನಿಯೇ, ನೀನು ಮನ್ಮಥನಿಂದ ಮೋಹಿತನಾಗಿ, ವ್ಯರ್ಥವಾಗಿ ಶ್ರೀಮತಿಯನ್ನು ಕಾಮಿಸಿ ಸಂಕಟಪಡುತ್ತಿರುವೆ. ಈಗಲಾದರೂ ನಿನ್ನ ಮುಖವನ್ನು ನೋಡಿಕೋ’ ಎನ್ನುತ್ತಾರೆ. ಶಿವಗಣರಿಬ್ಬರ ಮಾತನ್ನು ಕೇಳಿದ ನಾರದ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡ. ಕಪಿಯಂತಿರುವ ತನ್ನ ಮುಖವನ್ನು ಕಂಡು ನಾರದ ಕುಪಿತನಾದ. ಮೋಹದಿಂದ ಮುಂದುಗಾಣದ ನಾರದ ತನ್ನನ್ನು ಎಚ್ಚರಿಸಿದ ಗಣಗಳಿಬ್ಬರಿಗೂ ‘ನೀವಿಬ್ಬರೂ ಬ್ರಾಹ್ಮಣನಾದ ನನ್ನನ್ನು ಅಪಹಾಸ್ಯಮಾಡಿದ್ದರಿಂದ ಬ್ರಾಹ್ಮಣನಿಗೆ ನೀವು ಮಕ್ಕಳಾಗಿ ಹುಟ್ಟಿದರೂ, ರಾಕ್ಷಸರಾಗಿಹೋಗಿ’ ಎಂದು ಶಪಿಸಿದ.

ಮಹಾಜ್ಞಾನಿಗಳಾದ ಶಿವಗಣಗಳಿಬ್ಬರೂ ನಾರದ ತಮಗೆ ಕೊಟ್ಟ ಶಾಪವನ್ನು ಕೇಳಿದರೂ, ಏನೊಂದೂ ಮಾತನಾಡದೆ, ‘ಎಲ್ಲವೂ ಶಿವನ ಇಚ್ಛೆ’ ಎಂದು ಭಾವಿಸಿ ಶಿವನನ್ನು ಸ್ತೋತ್ರಮಾಡುತ್ತಾ ಅಲ್ಲಿಂದ ತೆರಳಿದರು ಎಂಬಲ್ಲಿಗೆ ಶ್ರೀ ಶಿವಮಹಾಪುರಾಣದ ಎರಡನೆ ಸಂಹಿತೆಯಾದ ರುದ್ರಸಂಹಿತೆಯ ಮೊದಲನೆ ಖಂಡವಾದ ಸೃಷ್ಟಿಖಂಡದಲ್ಲಿ ‘ನಾರದ ಮೋಹವರ್ಣನ’ ಎಂಬ ಮೂರನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.