ADVERTISEMENT

ಇಂದು ಉತ್ಥಾನ ದ್ವಾದಶಿ: ವಿಷ್ಣು ತುಳಸಿ ಮದುವೆಯ ದಿನ

ಎಸ್.ಸೂರ್ಯಪ್ರಕಾಶ ಪಂಡಿತ್
Published 15 ನವೆಂಬರ್ 2021, 20:00 IST
Last Updated 15 ನವೆಂಬರ್ 2021, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಆಡುಮಾತಿನಲ್ಲಿ ‘ಕಿರುದೀಪಾವಳಿ’ ಮತ್ತು ‘ತುಳಸೀವಿವಾಹ’ ಎಂದು ಪ್ರಸಿದ್ಧವಾಗಿರುವ ಹಬ್ಬವೇ ಉತ್ಥಾನದ್ವಾದಶೀ.

ಮಹಾವಿಷ್ಣುವು ನಿದ್ರಾಮುದ್ರೆಯಿಂದ ಏಳುವ ದಿನವಾದ್ದರಿಂದ ಈ ದಿನವನ್ನು ಉತ್ಥಾನದ್ವಾದಶೀ ಎಂದೂ ಕರೆಯಲಾಗಿದೆ. ಮಹಾವಿಷ್ಣುವು ನಾಲ್ಕು ತಿಂಗಳು ಕ್ಷೀರಸಾಗರದಲ್ಲಿ ನಿದ್ರಾಮುದ್ರೆಯಲ್ಲಿರುತ್ತಾನೆ. ಹೀಗೆ ಮಲಗಿರುವ ಅವನನ್ನು ನಾವು ಎಚ್ಚರಿಸಬೇಕು; ಸೃಷ್ಟಿ ಸ್ಥಿತಿ ಲಯಗಳಲ್ಲಿ ಅವನನ್ನು ತೊಡಗಿಸಬೇಕು ಎಂಬುದು ಈ ದಿನದ ಆಶಯ. ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ. ಇಡಿಯ ಸೃಷ್ಟಿಯನ್ನು ಸೃಷ್ಟಿಸಿ, ಪೋಷಿಸಿ, ಕಾಪಾಡುತ್ತಿರುವ ದೇವರೇ ನಿದ್ರೆಗೆ ಶರಣಾದರೆ ಆಗ ಒಟ್ಟು ಸೃಷ್ಟಿಯ ಪಾಡೇನು?

ನಾವು ರೂಪಿಸಿಕೊಳ್ಳುವ ಸಿದ್ಧಾಂತಗಳೂ ತತ್ತ್ವಗಳೂ ಕಥನಗಳೂ ನಮ್ಮ ಬುದ್ಧಿಸಾಮರ್ಥ್ಯಕ್ಕೆ ಅನುಗುಣವಾಗಿಯೇ ಇರುತ್ತವೆಯಷ್ಟೆ. ಹೀಗಾಗಿ ನಮ್ಮ ‘ಕಲ್ಪನೆ’ಯ ದೇವರನ್ನು ನಾವು ನಮ್ಮತನದ ವ್ಯಾಪ್ತಿಯಲ್ಲಿಯೇ ಕಂಡರಿಸಿಕೊಳ್ಳುತ್ತೇವೆ. ನಮ್ಮ ಅಸ್ತಿತ್ವವು ಕೇವಲ ಎಚ್ಚರದ ಸ್ಥಿತಿಯನ್ನು ಮಾತ್ರವೇ ಅವಲಂಬಿಸಿಲ್ಲ, ನಿದ್ರೆಯನ್ನೂ ಅವಲಂಬಿಸಿದೆ; ಅಲ್ಲಿಯ ಕನಸನ್ನೂ ಆಶ್ರಯಿಸಿದೆ. ಈ ಕಾರಣದಿಂದ ನಾವು ನಮ್ಮ ದೇವರಿಗೂ ನಿದ್ರೆಯ ಅಲಂಕಾರವನ್ನು ಒದಗಿಸಿದ್ದೇವೆ. ಆದರೆ ಇಲ್ಲಿರುವ ವಿಶೇಷತೆಯನ್ನೂ ಗಮನಿಸಬೇಕು. ನಮ್ಮ ಮಿತಿಯ ಒಳಗೆ ನಾವು ನಮ್ಮ ದೇವರನ್ನು ನಿರ್ಮಿಸಿಕೊಂಡಿದ್ದೇವೆ, ದಿಟ; ಆದರೆ ಈ ಮಿತಿಯನ್ನು ಮೀರುವ ಹಂಬಲವೂ ನಮ್ಮಲ್ಲಿದೆ. ಮಹಾವಿಷ್ಣುವಿನ ನಿದ್ರೆಯನ್ನು ನಮ್ಮ ನಿದ್ರೆಯೊಂದಿಗೆ ಹೋಲಿಸಿಕೊಂಡಿದ್ದೇವೆ; ಹೌದು. ಆದರೆ ಅವನ ನಿದ್ರೆಯನ್ನು ನಾವು ಒಂದು ‘ಮುದ್ರೆ’ಯನ್ನಾಗಿಯೇ ಸ್ವೀಕರಿಸಿದ್ದೇವೆ. ಎಂದರೆ ದೇವರ ನಿದ್ರೆ ನಮ್ಮ ನಿದ್ರೆಯಂತೆ ಮೈ ಮರೆಯುವ ನಿದ್ರೆಯಲ್ಲ, ಅದು ಸದಾ ಎಚ್ಚರವಾಗಿರುವ ನಿದ್ರೆಯ ಮುದ್ರೆ. ಉದಾಹರಣೆಗೆ ಹೇಳುವುದಾದರೆ, ನರ್ತನದಲ್ಲಿ ನಿದ್ರೆಯನ್ನು ಅಭಿನಯಿಸಿ ತೋರಿಸಬೇಕಾದರೆ ನರ್ತಕನು ವೇದಿಕೆಯ ಮೇಲೆ ನಿಜವಾಗಿಯೂ ನಿದ್ರೆಯನ್ನೇ ಮಾಡುವುದಿಲ್ಲವಷ್ಟೆ; ನಿದ್ರೆಯನ್ನು ಆಂಗಿಕದ ಮೂಲಕ, ಮುದ್ರೆಯ ಮೂಲಕ ತೋರಿಸುತ್ತಾನೆ; ಹೀಗೆ ತೋರಿಸುವಾಗ ಅವನು ತುಂಬ ಎಚ್ಚರವಾಗಿರುತ್ತಾನೆ; ಪ್ರೇಕ್ಷಕರಿಗೆ ಅದು ನಿದ್ರೆಯೇ ಹೌದು ಎಂಬ ರಸಾನುಭವವನ್ನು ದಾಟಿಸಲು ಮೈಯೆಲ್ಲ ಕಣ್ಣಾಗಿಸಿಕೊಂಡು ನಟಿಸುತ್ತಾನೆ. ಇದೇ ಕ್ರೀಡೆ, ಲೀಲೆ. ಇದರ ತಾತ್ಪರ್ಯ: ಸೃಷ್ಟಿ ಎಂಬುದು ದೇವರ ಪಾಲಿಗೆ ಒಂದು ಲೀಲೆ.

ADVERTISEMENT

ಹೀಗೆ ನಮ್ಮ ಹಬ್ಬ–ವ್ರತ–ಪರ್ವಗಳ ಸಾಂಕೇತಿಕತೆ ತುಂಬು ಧ್ವನಿಪೂರ್ಣ ವಾಗಿರುವಂಥದ್ದು ಮಾತ್ರವಲ್ಲ, ಇದಕ್ಕೆ ಹಲವು ಆಯಾಮಗಳ ಅರ್ಥಪರಂಪರೆಯೇ ಇರುವುದುಂಟು.

ಉತ್ಥಾನದ್ವಾದಶಿಯ ಇನ್ನೊಂದು ಆಯಾಮವನ್ನೂ ಇಲ್ಲಿ ನೋಡಬಹುದು. ಮಹಾವಿಷ್ಣು ‘ಎಚ್ಚರ’ಗೊಂಡ ಕೂಡಲೇ ಅವನಿಗೆ ತುಳಸಿಯೊಂದಿಗೆ ವಿವಾಹ ನಡೆಯುತ್ತದೆ. ವಿವಾಹ ಎನ್ನುವುದು ಕೂಡ ಇಲ್ಲೊಂದು ಸಂಕೇತ; ಸೃಷ್ಟಿಯ ನಿರಂತರತೆಗೂ ಜೀವನದ ಸುಖ–ಸಮೃದ್ಧಿಗೂ ಶಿವ–ಶಕ್ತಿಯರ ಅಖಂಡತೆಗೂ ಇದು ಸಂಕೇತ. ಆದರೆ ನಾವು ಈ ಸಂಕೇತಗಳನ್ನು, ಪುರಾಣದ ಪ್ರತಿಮೆಗಳನ್ನು ನಮ್ಮ ಜೀವನದ ನಿತ್ಯದ ಆಗುಹೋಗುಗಳಿಗೂ ‘ವಾಸ್ತವ’ದ ತಥ್ಯಗಳಿಗೂ ಸಮೀಕರಣ ಮಾಡಿಕೊಂಡರೆ ಇವು ಅರ್ಥವನ್ನು ಕಳೆದುಕೊಳ್ಳುತ್ತವೆ; ಜೊತೆಗೆ ನಮ್ಮ ಬಾಲಿಶ ಬುದ್ಧಿಯ ಮಿತಿಯೂ ಅನಾವರಣಗೊಳ್ಳುತ್ತದೆ, ಅಷ್ಟೆ. ಕೀರ್ತಿನಾಥ ಕುರ್ತಕೋಟಿ ಅವರ ಮಾತುಗಳು ಇಲ್ಲಿ ಮನನೀಯ:

‘ಲೋಕದ ಬಾಳಿಗೆ ಅರ್ಥ ಬರುವುದು ಪುರಾಣಪ್ರಜ್ಞೆಯಿಂದ. ಪುರಾಣವೆಂದರೆ ಕೇವಲ ಹಳೆಯದಲ್ಲ; ಅದು ನಿತ್ಯವೂ ನಡೆಯುತ್ತಿರುವ ಘಟನೆ. ಪ್ರತಿ ವರ್ಷ ನಾವು ಆಚರಿಸುವ ತುಳಸಿಯ ಮದುವೆ ಲೌಕಿಕ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ಮದುವೆಗಳ ಹಿಂದಿನ ಕಾರಣಪ್ರತಿಮೆಯಾಗಿದೆ. ಈ ದೈವಿಕವಾದ ಮದುವೆ ತನ್ನಷ್ಟೆಕ್ಕೆ ತಾನು ಪೂರ್ಣವಾದದ್ದು. ಅದು ಒಂದು ಸ್ಥಿತಿಯೇ ಹೊರತು ಅದಕ್ಕೆ ಬೆಳವಣಿಗೆ ಮತ್ತು ಗತಿ ಇರುವುದಿಲ್ಲ. ನಮ್ಮ ಲೌಕಿಕ ಜೀವನದ ಗುರಿ ಇರುವುದು ಇಲ್ಲಿ. ಆದರೆ ಇಹ ಮತ್ತು ಪರಗಳು ಒಂದಕ್ಕೊಂದು ವಿರುದ್ಧವಾದವುಗಳಲ್ಲ; ಅವುಗಳಿಗೆ ಗಾಢವಾದ ಸಂಬಂಧವಿದೆ. ಆದ್ದರಿಂದಲೇ ಇತಿಹಾಸ ಪುರಾಣವಾಗಲು ಹಾತೊರೆಯುತ್ತಿರುತ್ತದೆ.’

ಲೌಕಿಕ ಜೀವನದಲ್ಲಿರುವ ಅಲೌಕಿಕ ಆನಂದವನ್ನು ದಕ್ಕಿಸಿಕೊಳ್ಳಲು ನಮ್ಮ ಪುರಾಣ ಪ್ರತಿಮೆಗಳು ಕಾರಣಪ್ರತಿಮೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.