ADVERTISEMENT

ಯುಗಾದಿ ಜೀವನದ ವಿವೇಕ

ಎಸ್.ಸೂರ್ಯಪ್ರಕಾಶ ಪಂಡಿತ್
Published 1 ಏಪ್ರಿಲ್ 2022, 19:31 IST
Last Updated 1 ಏಪ್ರಿಲ್ 2022, 19:31 IST
ಮೈಸೂರಿನ ಜಲಪುರಿಯಲ್ಲಿ ನಯನಿತಾ, ಸಿಂಚನಾ ಹಾಗೂ ಪೂರ್ವಿತಾ ಅವರು ಯುಗಾದಿ ಹಬ್ಬದ ಮುನ್ನಾದಿನ ಬೇವು ಬೆಲ್ಲ ನೀಡಲು ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯ ಶುಕ್ರವಾರ ಕಂಡು ಬಂತು
ಮೈಸೂರಿನ ಜಲಪುರಿಯಲ್ಲಿ ನಯನಿತಾ, ಸಿಂಚನಾ ಹಾಗೂ ಪೂರ್ವಿತಾ ಅವರು ಯುಗಾದಿ ಹಬ್ಬದ ಮುನ್ನಾದಿನ ಬೇವು ಬೆಲ್ಲ ನೀಡಲು ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯ ಶುಕ್ರವಾರ ಕಂಡು ಬಂತು   

ಮತ್ತೊಮ್ಮೆ ಯುಗಾದಿ ಬಂದಿದೆ; ನೂತನ ಸಂವತ್ಸರ ಆರಂಭವಾಗಿದೆ. ಈ ಹೊಸ ವರ್ಷ ತನ್ನ ಹೆಸರಿನಲ್ಲೇ ಒಳಿತನ್ನಂತೂ ತುಂಬಿಕೊಂಡುಬರುತ್ತಿದೆ. ‘ಈ ವರ್ಷ ಸಂತೋಷವನ್ನು ತರಲಿ; ಧೈರ್ಯವಾಗಿ ರಸ್ತೆಗಳಲ್ಲಿ ಓಡಾಡುವಂತಾಗಲಿ; ಮಕ್ಕಳು ಹೊರಗೆ ಆಟ ಆಡುವಂತಾಗಲಿ; ಒಬ್ಬರ ಮನೆಗೆ ಇನ್ನೊಬ್ಬರು ಎಂದಿನಂತೆ ವಿಶ್ವಾಸದಿಂದ ಹೋಗಿ–ಬರುವಂತಾಗಲಿ; ಪರಸ್ಪರ ಸ್ನೇಹ–ಬಾಂಧವ್ಯಗಳ ಎಳೆ ಗಟ್ಟಿಯಾಗಲಿ’ – ಇವು, ಇಂಥವು ನಮ್ಮೆಲ್ಲರ ಆಶಯವೂ ಆಗಿದೆ. ಸುಮಾರು ಎರಡು ವರ್ಷಗಳಿಂದ ಒಂದು ವಿಧದ ‘ವಿಚಿತ್ರವೂ ವಿಭಿನ್ನವೂ’ ಎನಿಸಿದ ಆಘಾತಕ್ಕೆ ತುತ್ತಾಗಿರುವ ನಮ್ಮೆಲ್ಲರಿಗೂ ಈಗ ಸಾಂತ್ವನ, ನೆಮ್ಮದಿ, ಭರವಸೆ, ಸಂತೋಷ ಬೇಕಿದೆ; ಶುಭ ಎಂದರೆ ಇಂಥವೇ ಅಲ್ಲವೆ?

ಯುಗಾದಿ ಎಂದ ಕೂಡಲೇ ಬೇವು–ಬೆಲ್ಲ ಎನ್ನುತ್ತೇವೆ. ‘ಬೇವು–ಬೆಲ್ಲ’ ಎಂದರೆ ಸುಖ–ದುಃಖಗಳು ಎಂದು ವರ್ಗೀಕರಿಸುತ್ತೇವೆ. ಈ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬ ಆಶಯವೇ ಯುಗಾದಿಯ ಸಂದೇಶ ಎಂಬ ತತ್ತ್ವವನ್ನೂ ಹೊರಡಿಸುತ್ತೇವೆ. ಯುಗಾದಿಯ ಪರ್ವದಲ್ಲಿ ಸಮತೋಲನದ ಈ ಪಾಠ ಸೇರಿದೆಯೆ?

ಯುಗಾದಿಗೂ ಪ್ರಕೃತಿಗೂ ನೇರ ನಂಟಿದೆ. ಕಾಲದ ಅಳತೆಯೊಂದಿಗೆ ನಂಟನ್ನು ಹೊಂದಿರುವ ಹಬ್ಬ ಯುಗಾದಿ. ಯುಗದ ಆರಂಭವೇ ‘ಯುಗಾದಿ’. ‘ಯುಗ’ ಎಂದರೆ ವಿಸ್ತಾರವಾದ ಕಾಲದ ಎಣಿಕೆ ಎಂದು ಒಂದು ಅರ್ಥ; ನಾಲ್ಕು ಯುಗಗಳ ಚಕ್ರ, ಸೃಷ್ಟಿ–ಪ್ರಳಯ – ಇವು ಅದರೊಂದಿಗೆ ಸೇರಿಕೊಳ್ಳುತ್ತವೆ. ‘ಯುಗ’ ಎಂದರೆ ಜೋಡಿ ಎಂಬ ಅರ್ಥವೂ ಇದೆ; ಸುಖ–ದುಃಖ, ಒಳಿತು–ಕೆಡಕು ಎಂಬ ಭಾವಗಳೂ ಕತ್ತಲೆ–ಬೆಳಕು, ಹುಟ್ಟ–ಸಾವು ಎಂಬ ಜೋಡಿಗಳೂ ಸೃಷ್ಟಿನಿಯಮದ ಅನಿವಾರ್ಯ ತಥ್ಯಗಳು ಎಂಬುದನ್ನು ಈ ‘ಯುಗ’ದ ಕಲ್ಪನೆಯಲ್ಲಿ ಕಾಣಬಹುದು. ನೇಗಿಲಿನ ಮತ್ತು ಬಂಡಿಯ ನೊಗಕ್ಕೂ ‘ಯುಗ’ ಎಂದು ಹೆಸರು; ಇದು ಜೀವನಪಯಣವನ್ನೂ ಸಂಕೇತಿಸುತ್ತದೆ; ಜೀವನಾಧಾರವಾದ ಕೃಷಿಯನ್ನೂ ಸಂಕೇತಿಸುತ್ತದೆ. ಯುಗಗಳ ಕಲ್ಪನೆ, ಸೃಷ್ಟಿಚಕ್ರ, ಪ್ರಕೃತಿಯ ವಿನ್ಯಾಸ, ಕೃಷಿ – ಇವಾವುದೂ ಏಕಮುಖ ಸಂಚಾರವಲ್ಲ; ಇವೆಲ್ಲವೂ ಸುಖ–ದುಃಖ, ಹುಟ್ಟು–ಸಾವು, ರಾತ್ರಿ–ಹಗಲು – ಇಂಥ ಜೋಡಿಯ ಸಾಮರಸ್ಯದ ಕುಣಿತಗಳೇ ಹೌದು ಎಂಬುದು ಎದ್ದುಕಾಣುವ ವಿವರ. ಜೀವನಚಕ್ರದ ಓಟ ನಿರಂತರವಾಗಿರಬೇಕು; ಕತ್ತಲೆ–ಬೆಳಕುಗಳು ಈ ಓಟಕ್ಕೆ ಅಡ್ಡಿಗಳನ್ನಾಗಿಸಿಕೊಳ್ಳಬಾರದು ಎಂಬ ಪ್ರಕೃತಿಯ ಪಾಠವೇ ಯುಗಾದಿಯ ಸಂದೇಶವೂ ಆಗಿದೆ.

ADVERTISEMENT

ಬದಲಾವಣೆ ಜಗದ ನಿಯಮ. ಬದಲಾವಣೆ ಎಂದರೆ ಈಗಿರುವ ಸ್ಥಿತಿಗೆ ಒದಗುವ ಮಾರ್ಪಾಡು; ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುವ ಸಹಜಯಾನ. ಪ್ರಕೃತಿಯಲ್ಲಿ ಉಂಟಾಗುವ ಇಂಥ ಸುಂದರವಾದ ಬದಲಾವಣೆಯ ಸಮಯವನ್ನೇ ನಮ್ಮ ಪೂರ್ವಜರು ಸೃಷ್ಟಿಯ ಮೊದಲ ಕ್ಷಣ, ನಮ್ಮ ಜೀವನದ ಪ್ರಥಮ ಮುಹೂರ್ತ, ಕಾಲಚಕ್ರದ ಆರಂಭ ಗತಿ ಎಂದರು. ಇದೇ ‘ಯುಗಾದಿ’.

ಬದಲಾವಣೆ ಎಂದರೆ ಹೊಸತು; ಹೊಸತು ಎಂದರೆ ಉಲ್ಲಾಸ; ಉಲ್ಲಾಸ ಎಂದರೆ ಬದುಕು. ಬದುಕು ಎಂದರೆ ಬದಲಾವಣೆ. ಇದು ಯುಗಾದಿಯ ಸಂದೇಶವೂ ಹೌದು, ಸಂತೋಷವೂ ಹೌದು.

ಬೀಜ ಮೊಳಕೆಯಾಗಿ ಒಡೆಯುತ್ತದೆ; ಗಿಡವಾಗುತ್ತದೆ; ಮರವಾಗಿ ಬೆಳೆಯುತ್ತದೆ; ಮರದಲ್ಲಿ ಹೂವು ಅರಳುತ್ತದೆ; ಅರಳಿದ ಹೂವು ಕಾಯಾಗಿ ಕಸುವನ್ನು ಪಡೆಯುತ್ತದೆ; ಹಣ್ಣಾಗುತ್ತದೆ. ಹಣ್ಣು ಮರದ ಕೊನೆಯ ಸ್ಥಿತಿಯಲ್ಲ – ಅದರ ಪುನರ್ಜನ್ಮದ ಮೊದಲ ಹಂತ. ಹಣ್ಣಿನಲ್ಲಿರುವ ಬೀಜ ಮುಂದಿನ ಮರದ ಸೂಕ್ಷ್ಮರೂಪ. ಬೀಜವೊಂದು ಮರವಾಗಿ ಬೆಳೆಯುವ ಹಂತಗಳು ಒಂದು ಇನ್ನೊಂದಕ್ಕೆ ಪೂರಕ; ಯಾವುದೇ ಹಂತವೂ ತನ್ನಷ್ಟಕ್ಕೆ ತಾನೇ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಎಲ್ಲ ಹಂತಗಳೂ ಸುಂದರವಾದಂಥವು; ಅನಿವಾರ್ಯವಾದಂಥವು; ಪರಿಪೂರ್ಣವಾದಂಥವು. ಪ್ರಕೃತಿಯ ಈ ಬದಲಾವಣೆಯ ಸೊಗಸಿನ ಸಂದರ್ಭಗಳೇ ಋತುಗಳು. ವಸಂತಋತು ಎಂದರೆ ಪ್ರಕೃತಿಯು ಹಸಿರಿನಿಂದ ಸಜ್ಜಾಗುವ ಸುಂದರಸಮಯ. ಈ ಋತುವಿನ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಚಿಗುರೊಂದು ಮುಂದೆ ಹಣ್ಣಾಗಿ ಪೂರ್ಣತೆಯನ್ನು ಪಡೆಯಲು ಸಾಧ್ಯವಾಗಿಸುವಂಥ ಆರಂಭದ ಕ್ಷಣವಿದು. ಉದುರುವಿಕೆ; ಅರಳುವಿಕೆ; ಅಗಲುವಿಕೆ; ಚಿಗುರುವಿಕೆ – ಇವು ಸಮಗ್ರವೂ ಪರಿಪೂರ್ಣವೂ ಆದ ಕಾರ್ಯಚಕ್ರದ ಬೇರೆ ಬೇರೆ ಗತಿಗಳಷ್ಟೆ. ಇಂಥ ಸಂದೇಶವನ್ನು ನಮಗೆ ಪ್ರಕೃತಿ ನೀಡುತ್ತಿದೆ.

ಸುಖ–ದುಃಖಗಳನ್ನು ಹೀಗೆ ನಾವು ಸ್ವೀಕರಿಸಿದ್ದೇವೆ ಎಂಬುದರ ಸಾಂಕೇತಿಕತೆಯನ್ನು ಬೇವು–ಬೆಲ್ಲಗಳ ಮಿಶ್ರಣವನ್ನು ತಿನ್ನುವುದರಲ್ಲಿ ಕಾಣಬಹುದಾಗಿದೆ. ಯುಗದ ಆದಿಯಲ್ಲಿಯೇ ಬದುಕನ್ನು ಧೈರ್ಯವಾಗಿಯೂ ಸಂತಸವಾಗಿಯೂ ಸ್ವೀಕರಿಸುವಂಥ ವಿವೇಕವೇ ಯುಗಾದಿಹಬ್ಬದ ಮೂಲತತ್ತ್ವ. ಇದೇ ನಮಗಿಂದು ಬೇಕಾಗಿರುವ ಅಂತರಂಗದ ಸತ್ತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.