ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–12

ಡಾ.ಬಸವರಾಜ ಸಾದರ
Published 5 ಅಕ್ಟೋಬರ್ 2020, 3:46 IST
Last Updated 5 ಅಕ್ಟೋಬರ್ 2020, 3:46 IST
ವಚನವಾಣಿ
ವಚನವಾಣಿ    

ಮಡದಿ ಎನಲಾಗದು ಬಸವಂಗೆ ಎನ್ನನು.
ಪುರುಷನೆನಲಾಗದು ಬಸವನ ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು, ಬಸವನೆನ್ನ ಶಿಶುವಾದನು.
ಪ್ರಮಥರು ಪುರಾತರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ.
-ನೀಲಮ್ಮ

ಸಮಾನತೆ, ಸಮನ್ವಯ ಮತ್ತು ಹೊಂದಾಣ ಕೆ ಇವನ್ನೆಲ್ಲ ಸಾಮಾಜಿಕ ಮೌಲ್ಯಗಳನ್ನಾಗಿ ಅಳವಡಿಸಿಕೊಳ್ಳುವ ಮೊದಲೇ ಶರಣರು ಅವುಗಳನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಧಿಸಿಕೊಂಡಿದ್ದರು. ಸನ್ಯಾಸವನ್ನು ತಿರಸ್ಕರಿಸಿ, ದಾಂಪತ್ಯ ಜೀವನಕ್ಕೆ ಆದ್ಯತೆ ಕೊಟ್ಟಿದ್ದ ಅವರು, ಕೌಟುಂಬಿಕ ಸಾಮರಸ್ಯಕ್ಕೂ ಮಾದರಿಯಾದವರು. ಸತಿ-ಪತಿಗಳು ಒಂದಾಗಿ ಮಾಡುವ ಕೆಲಸಗಳೆಲ್ಲ ಪೂರ್ಣ ಫಲಕಾರಿಯಾಗುತ್ತವೆ ಎಂಬ ಸತ್ಯವನ್ನು ಅನುಭವದಿಂದ ಅರಿತಿದ್ದ ಶರಣರು, ಮಡಕೆಯ ಭಾಂಡ ಮತ್ತು ಭಾಜನಗಳ ಗುಣ ಒಂದೇ ತೆರನಾದಾಗಲೇ ಅದು ಶುದ್ಧವಾಗುವ ಹಾಗೆ, ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರೆ ಮಾತ್ರ ಸುಖೀ ದಾಂಪತ್ಯ ಸಾಧ್ಯವೆಂದು ನಂಬಿದ್ದರು. ಅಲ್ಲಿಯೂ, ಗಂಡ ಮತ್ತು ಹೆಂಡತಿ ಎಂಬ ಭಿನ್ನಭಾವವಿಲ್ಲದೇ ಬದುಕಿದ ಅವರ ದಾರಿ ಜಗತ್ತಿಗೇ ಮಾರ್ಗದರ್ಶಿಯಾಗಿದೆ. ಶರಣರ ಇಂಥ ಅನ್ಯೋನ್ಯ ಕೌಟುಂಬಿಕ ಜೀವನದ ಪ್ರತಿಬಿಂಬ ನೀಲಮ್ಮನ ಪ್ರಸ್ತುತ ವಚನ.

ನೀಲಮ್ಮ ಇಲ್ಲಿ ತನ್ನ ಮತ್ತು ಬಸವಣ್ಣನ ದಾಂಪತ್ಯ ಸಂಬಂಧದ ರೀತಿ-ನೀತಿ ಮತ್ತು ಸ್ವರೂಪವನ್ನು ಯಥಾವತ್ತಾಗಿ ಕಟ್ಟಿಕೊಡುತ್ತಾಳೆ. ನನ್ನನ್ನು ಬಸವಣ್ಣನ ಮಡದಿಯೆಂದು ಕರೆಯಲಾಗದು ಮತ್ತು ಬಸವಣ್ಣನನ್ನು ನನ್ನ ಪುರುಷ ಎಂದು ಹೇಳಲಾಗದು ಎನ್ನುವ ಅವಳ ಮಾತು ಅವರಿಬ್ಬರಲ್ಲಿದ್ದ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಂತಿದೆ. ಗಂಡ ಮತ್ತು ಹೆಂಡತಿ ಎಂದು ಕರೆಯಲಾಗದು ಎಂದಷ್ಟೇ ಹೇಳಿ ಅಲ್ಲಿಗೇ ನಿಲ್ಲಿಸದ ನೀಲಮ್ಮ, ನಮ್ಮ ಸಂಬಂಧವು ಅಂಥ ಉಭಯ ಕುಳವನ್ನು ಅಂದರೆ, ದ್ವೆತಭಾವವನ್ನು ಹರಿದೊಗೆದಿದೆಯಷ್ಟೇ ಅಲ್ಲ, ಅದಕ್ಕೂ ಮುಂದೆ ಹೋಗಿ ನಾನು ಬಸವಣ್ಣನ ಶಿಶುವಾಗಿದ್ದೇನೆ, ಬಸವಣ್ಣ ನನ್ನ ಶಿಶುವಾಗಿದ್ದಾನೆ ಎಂದೂ ಹೇಳುತ್ತಾಳೆ. ಅವರಿಬ್ಬರ ನಡುವೆ ಇದ್ದ ಮಾತೃವಾತ್ಸಲ್ಯದ ಸಂಬಂಧ ಈ ಮಾತುಗಳಲ್ಲಿ ಎದ್ದು ಕಾಣುತ್ತದೆ, ಇದು ಹೃದಯ ತಟ್ಟುವ ಸಂವೇದನೆ ಮಾತ್ರವಲ್ಲ, ಎಲ್ಲ ಕುಟುಂಬಸ್ಥರೂ ಅನುಸರಿಸಬೇಕಾದ ನಿಲುವು ಕೂಡ.

ತಮ್ಮ ಈ ಬಗೆಯ ಸಾಂಸಾರಿಕ ಅದ್ವೆತಿಕೆ ಮತ್ತು ಅಭಿನ್ನತೆಗೆ ಕಾರಣವಾದ ಮುಖ್ಯ ಸಂಗತಿಗಳ ಬಗ್ಗೆ ನೀಲಮ್ಮ ವಚನದ ಕೊನೆಯ ಎರಡು ಪಂಕ್ತಿಗಳಲ್ಲಿ ದಾಖಲೆ ಒದಗಿಸುತ್ತಾಳೆ. ಅದರಲ್ಲಿ ಮೊದಲನೆಯದು ಕೂಡಲಸಂಗಯ್ಯ ಅವಳಿಂದ ಮಾಡಿಸಿದ ದಾಂಪತ್ಯದ ಪ್ರಮಾಣ, ಮತ್ತು ಎರಡನೆಯದು ಇಂಥ ಪ್ರಮಾಣ ಮಾಡುವಾಗ ಅದಕ್ಕೆ ಸಾಕ್ಷಿಯಾದವರು ಪ್ರಮಥರು ಮತ್ತು ಪುರಾತರು ಎಂಬುದು. ಇಂಥ ಪ್ರಮಾಣ ಮತ್ತು ಅದಕ್ಕೆ ಸಾಕ್ಷಿಯಾದವರ ಹಿರಿತನ, ಇವುಗಳನ್ನು ಮೀರದೇ ನಾನು ಬಸವಣ್ಣನಲ್ಲೇ ಅಡಗಿಬಿಟ್ಟಿದ್ದೇನೆ ಎನ್ನುತ್ತಾಳೆ ನೀಲಮ್ಮ. ಅವಳ ಈ ಮಾತಿನಲ್ಲಿ ಹೆಣ್ಣೇ ಈ ಎಲ್ಲ ಬಗೆಯ ನಿರ್ಧಾರ ಕೈಕೊಳ್ಳುವವಳು ಎಂಬ ಸ್ಪಷ್ಟ ಧ್ವನಿ ಇದೆ. ಇಡೀ ವಚನದಲ್ಲಿ ನೀಲಮ್ಮ ತನ್ನನ್ನೇ ಕೇಂದ್ರಸ್ಥಾನದಲ್ಲಿಟ್ಟುಕೊಂಡು ಮಾತಾಡಿದ್ದೇ ಇದಕ್ಕೆ ಸಾಕ್ಷಿ.

ವಚನ ಒಟ್ಟಾರೆ, ಸ್ಥಿರ ಅಸ್ಮಿತೆಯನ್ನು ಪ್ರತಿಪಾದಿಸುತ್ತಲೇ, ಸಾಂಸಾರಿಕ ಬದುಕಿನಲ್ಲಿ ಮಹಿಳೆಯ ನಿರ್ಧಾರವೇ ಮುಖ್ಯ ಎಂಬುದನ್ನು ಧ್ವನಿಸುತ್ತದೆ. ಜೊತೆಗೆ ದಾಂಪತ್ಯದ ಸಮನ್ವಯಕ್ಕೆ ಆತ್ಮಸಾಕ್ಷಿ ಒಪ್ಪುವ ಪ್ರಮಾಣ ಮತ್ತು ಅದನ್ನು ಗಟ್ಟಿಗೊಳಿಸಲು ಹಿರಿಯರ ಸಾಕ್ಷಿ ಅಗತ್ಯವೆಂದೂ ಅದು ಸಾರುತ್ತದೆ. ವರ್ತಮಾನದ ಜಗತ್ತಿನಲ್ಲಿ ಇಂಥ ಮೌಲ್ಯಗಳಿಲ್ಲದ ಕಾರಣಕ್ಕಾಗಿಯೇ ಕೌಟುಂಬಿಕ ವಿಘಟನೆ-ವಿಚ್ಛೇದನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವಕ್ಕೆಲ್ಲ ಸಮರ್ಥ ಪರಿಹಾರವಿದೆ ನೀಲಮ್ಮನ ಈ ವಚನದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.