ADVERTISEMENT

ವಚನಾಮೃತ: ಸಂಸ್ಕಾರವಿಲ್ಲದವರ ಬಾಳು ವ್ಯರ್ಥ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 13:10 IST
Last Updated 24 ಸೆಪ್ಟೆಂಬರ್ 2021, 13:10 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ಭಾರತವು ಸಂಸ್ಕೃತಿ, ಸಂಸ್ಕಾರ ಪ್ರಧಾನವಾದದ್ದು. ಮನುಷ್ಯತ್ವದಿಂದ ದೇವತ್ವಕ್ಕೆ ತಲುಪಬೇಕಿದ್ದರೆ ಪ್ರತಿ ಆತ್ಮಕ್ಕೆ ಸಹಾಯವಾಗುವ ಆಂತರಿಕ ಸಾಧನವೇ ಸಂಸ್ಕಾರ. ಯಾವುದೇ ವಸ್ತು ಅಪೇಕ್ಷಿತವಾದ ಮಟ್ಟಕ್ಕೆ ಮುಟ್ಟ ಬೇಕಿದ್ದರೆ ಅದಕ್ಕೆ ಸಂಸ್ಕಾರದ ಹಿನ್ನೆಲೆ ಅವಶ್ಯ.

ಸಂಸ್ಕಾರ ಸಂಪನ್ನತೆಯಿಂದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಒಂದು ವಿಶಿಷ್ಟವಾದ ಮೆರಗು ಬರುತ್ತದೆ. ಈ ಸಂಸ್ಕಾರ ಇಲ್ಲದಿದ್ದರೆ ಮನುಷ್ಯನ ಜೀವನ ಸಂಪತ್ತಿನಿಂದ ತುಂಬಿದ್ದರೂ ಸುಂದರವಾಗಿರುವುದಿಲ್ಲ. ಗಂಧವಿಲ್ಲದ ಹೂವಿನಂತೆ ಸಂಸ್ಕಾರವಿಲ್ಲದವರ ಬಾಳು ವ್ಯರ್ಥವಾಗುತ್ತದೆ.

ಜೀವಾತ್ಮ- ಪರಮಾತ್ಮನ ಅಂಶವಾದರೂ ಸಹ ಕೊನೆಗೆ ಆ ಪರಮಾತ್ಮನ ಶಕ್ತಿಯನ್ನು ಸೇರಲು ಜೀವನಿಗೆ ಸಂಸ್ಕಾರ ಬೇಕು. ಅಷ್ಟೇ ಏಕೆ? ಲೌಕಿಕವಾಗಿ ಸಹ ಒಂದು ಉತ್ತಮ ವಸ್ತುವನ್ನು ಪಡೆಯಬೇಕಿದ್ದರೆ ಇನ್ನೊಂದು ವಸ್ತುವಿಗೂ ಅದೇ ಪ್ರಮಾಣದ ಶುದ್ಧತೆ ಬೇಕಾಗುತ್ತದೆ.

ADVERTISEMENT

ಕಾಳಿ‌ದಾಸ ಮಹಾಕವಿ ಸಂಸ್ಕಾರ ಸಂಪನ್ನತೆಯನ್ನು ಈ ರೀತಿ ಆರಾಧಿಸಿದ್ದಾನೆ. ರತ್ನ -ಬಂಗಾರ ಸಂಯೋಗ ಸುಂದರವಾದದ್ದೇನೋ ನಿಜ. ಆದರೆ, ಶುದ್ಧ ಬಂಗಾರದ ಸಂಗಡ ಸೇರಬೇಕಿದ್ದರೆ ಅದೇ ಆಗ ಗಣಿಯಿಂದ ತೆಗೆದ ಹದ ಮಾಡದ ರತ್ನದಿಂದ ಸಾಧ್ಯವಿಲ್ಲ. ಆ ರತ್ನಕ್ಕೆ ಸಾಣೆಹಿಡಿದು, ಅದರ ಮಲಿನತೆಯನ್ನೆಲ್ಲ ತೆಗೆದು, ಅಪೇಕ್ಷಿತ ಆಕಾರ ಕೊಟ್ಟಾಗ ಅದು ಬೆಳಗುತ್ತದೆ, ಶುದ್ಧವಾಗುತ್ತದೆ. ಆಗ ಸಂಸ್ಕಾರ ಪಡೆದ ಆ ರತ್ನ ಶುದ್ಧ ಬಂಗಾರದ ಸಂಗಡ ಸೇರಲು ಅರ್ಹವಾಗುತ್ತದೆ.

ಸಂಸ್ಕಾರಗಳು ಅಂದರೆ, ಶುಚಿತ್ವ. ಶುದ್ಧಿ ಇಲ್ಲದೇ ಇದ್ದಾಗ ಜೀವನ ಅಸಂಸ್ಕೃತವಾಗುತ್ತದೆ. ಗೌರವಕ್ಕೆ ಪಾತ್ರವಾಗುವುದೇ ಇಲ್ಲ. ನಿಜವಾಗಿ ಲೋಕ ಪೂಜ್ಯತೆಯನ್ನು ತಂದುಕೊಡುವುದು ಸಂಸ್ಕಾರವೇ ಹೊರತು ಸಂಪತ್ತು, ಅಧಿಕಾರ ಯಾವುದೂ ಅಲ್ಲ. ‘ಜನ್ಮನಾ ಜಾಯತೇ ಶೂದ್ರ: ಸಂಸ್ಕಾರಾತ್ ದ್ವಿಜ ಉಚ್ಯತೇ’ ಎನ್ನುವ ಸೂಕ್ತಿಯೂ ಇದೇ ಅರ್ಥವನ್ನು ಕೊಡುತ್ತದೆ.

(ಲೇಖಕರುವಿಜಯಪುರದಕೃಪಾಮಯಿ ಶಾರದಾಶ್ರಮದಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.