ADVERTISEMENT

ವೈಕುಂಠ ಏಕಾದಶಿ

ಆಚಾರ–ವಿಚಾರ

ಘನಶ್ಯಾಮ ಡಿ.ಎಂ.
Published 5 ಜನವರಿ 2020, 5:17 IST
Last Updated 5 ಜನವರಿ 2020, 5:17 IST
   

ವೆಂಕಟೇಶ್ವರ. ಇವನೊಬ್ಬನೇ ಕಲಿಯುಗದ ದೈವ ಎಂಬ ಮಾತು ಇದೆ; ಅವನು ನೆಲೆಸಿರುವ ತಾಣ ತಿರುಪತಿಯೇ ಭೂವೈಕುಂಠ. ಅವನ ಈ ಆಲಯವನ್ನು ಸಂದರ್ಶಿಸುವುದು ಎಂದರೆ ಸಾಕ್ಷಾತ್‌ ವೈಕುಂಠಲೋಕಕ್ಕೆ ಹೋಗಿಬಂದಂತೆಯೇ ಹೌದು ಎಂಬ ಶ್ರದ್ಧೆಯಲ್ಲಿ ಮೂಡಿಕೊಂಡ ಪರ್ವದಿನವೇ ವೈಕುಂಠ ಏಕಾದಶಿ.

‘ನಿನ್ನ ಚಿತ್ತಕೆ ಬಂದುದು ಎನ್ನ ಚಿತ್ತಕೆ ಬರಲಿ, ಅನ್ಯಥಾ ಬಯಕೆಯ ಕೊಡದಿರು’ ಎನ್ನುವುದು ಶ್ರೀದವಿಠ್ಠಲದಾಸರ ಪ್ರಸಿದ್ಧ ಕೃತಿ ‘ಸ್ತುತಿರತ್ನಮಾಲಾ’ದ ಜನಪ್ರಿಯ ಸಾಲುಗಳು. ಅದೇ ರೀತಿ ‘ಭಾವಶುದ್ಧಿ ಧರಿಸಿರ್ಪ ಗುರು’ ಎನ್ನುವುದು ರಾಘವೇಂದ್ರಸ್ವಾಮಿಗಳ ವ್ಯಕ್ತಿತ್ವ ವಿವರಿಸುವ ಕೀರ್ತನೆಯೊಂದರ ಸಾಲು.

ಚಿತ್ತಶುದ್ಧಿ, ಭಾವಶುದ್ಧಿ ಅಧ್ಯಾತ್ಮದ ಹಾದಿಯ ಮೊದಲ ಹೆಜ್ಜೆ. ನಮ್ಮ ಸಂಕಲ್ಪ, ಮಾತು ಮತ್ತು ಕೆಲಸಗಳಲ್ಲಿ ವ್ಯತ್ಯಾಸವಿಲ್ಲದ ಇಂಥದ್ದೊಂದು ಸ್ಥಿತಿ ಮುಟ್ಟಲು ಏಕಾದಶಿ ಉಪವಾಸ ಸುಲಭದ ಮಾರ್ಗ ಎಂದು ನಮ್ಮ ಹಿರಿಯರು ಗುರುತಿಸಿದ್ದಾರೆ. ನೀರನ್ನೂ ಸೇವಿಸದ ನಿಟ್ಟುಪವಾಸ, ನಮ್ಮೊಳಗೆ ಸಂವಾದ ನಡೆದು ವಿಚಾರಗಳು ಮಥನಗೊಳ್ಳಲು ಅವಕಾಶ ಕೊಡುವ ಮೌನದ ಆಚರಣೆಯಿಂದ ಮನಸ್ಸು ಮೃದುವಾಗಿ ಒಳ ಹೊರಗೆ ತುಂಬಿಕೊಂಡಿರುವ 'ನಾರಾಯಣ'ನನ್ನು ಅನುಭವಿಸಲು ಇದು ಸಾಧನ.

ADVERTISEMENT

ಏಕಾದಶ ಎಂದರೆ 11 ಎಂದರ್ಥ ಪ್ರತಿ ಮಾಸದಲ್ಲಿ (ತಿಂಗಳು) ಎರಡು ಏಕಾದಶಿಗಳು ಬರುತ್ತವೆ. ಆದರೆ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯು ವೈಕುಂಠ ಏಕಾದಶಿ ಎಂದೇ ಪ್ರಸಿದ್ಧಿ. ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಪ್ರತೀತಿ. ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಿರುತ್ತಾರೆ. ವೈಕುಂಠ ಏಕಾದಶಿಯೇ ಅಲ್ಲ, ಎಲ್ಲ ಏಕಾದಶಿಗಳೂ ಉಪವಾಸ ವ್ರತಕ್ಕೆ ಶ್ರೇಷ್ಠವಾದವು. ಆದರೆ ವೈಕುಂಠ ಏಕಾದಶಿಯಂದು ಉಪವಾಸದ ಫಲ ನೂರ್ಮಡಿ. ಅಂದು ನಿಟ್ಟುಪಾಸವೇ ಶ್ರೇಷ್ಠ. ಶಕ್ತಿಯಿಲ್ಲದವರು ದ್ರವಾಹಾರ ಅಥವಾ ಫಲಾಹಾರ ಸೇವಿಸಿ ಉಪವಾಸದ ಆಶಯ ಈಡೇರಿಸಿಕೊಳ್ಳುತ್ತಾರೆ.

ಹಸಿವಾದ ತಕ್ಷಣ ಉಣ್ಣುವುದನ್ನು, ಅನ್ನಿಸಿದ ತಕ್ಷಣ ಮಾತಾಡುವುದನ್ನು ಕಲಿತ ಮನಸ್ಸು ಮತ್ತು ದೇಹಗಳು ಒಂದು ದಿನದ ಮಟ್ಟಿಗಾದರೂ ದೇವರನ್ನು ನೆನೆಯುತ್ತಾ,, ಅವನ ಚಿಂತನೆಯಲ್ಲಿ ಮುಳುಗಬೇಕು ಎನ್ನುವುದೇ ನಮ್ಮ ಹಿರಿಯರು ಕಟ್ಟಿಕೊಟ್ಟ ಏಕಾದಶಿಯ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.