ADVERTISEMENT

ವೈಕುಂಠ ಏಕಾದಶಿ: ದೈವತ್ವದ ಬಾಗಿಲು

ಎಸ್.ಸೂರ್ಯಪ್ರಕಾಶ ಪಂಡಿತ್
Published 9 ಜನವರಿ 2025, 23:34 IST
Last Updated 9 ಜನವರಿ 2025, 23:34 IST
   

ಸಾಧಕನೊಬ್ಬನು ಬಯಸಬಹುದಾದ ದೊಡ್ಡ ಪದವಿ ಎಂದರೆ ದೇವರ ಸಾಮೀಪ್ಯ. ಧಾರ್ಮಿಕನೊಬ್ಬನಿಗೆ ಇರಬಹುದಾದ ಈ ಸಹಜ ಬಯಕೆಯ ಕಲ್ಪನೆಯಲ್ಲಿ ಅರಳಿರುವ ಪರ್ವದಿನವೇ ‘ವೈಕುಂಠ ಏಕಾದಶಿ’.

ವೈಕುಂಠ ಎನ್ನುವುದು ಮಹಾವಿಷ್ಣುವಿನ ನೆಲೆ. ವರ್ಷದಲ್ಲಿ ಒಂದು ದಿನ, ಎಂದರೆ ವೈಕುಂಠ ಏಕಾದಶಿಯಂದು ವಿಷ್ಣುವಿನ ಈ ‘ಮನೆ’ಯ ಬಾಗಿಲು ಮುಕ್ತವಾಗಿ ಎಲ್ಲರಿಗೂ ತೆರೆದಿರುತ್ತದೆಯಂತೆ. ವಿಷ್ಣುವಿನ ಧಾಮವನ್ನು ನಮ್ಮ ಮನೆಯನ್ನಾಗಿಸಿಕೊಳ್ಳಬಲ್ಲಂಥ ಅವಕಾಶ ಒದಗುವ ಪುಣ್ಯದಿನವಿದು.

ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದಾನೆ ವಿಷ್ಣು. ಎಲ್ಲೆಲ್ಲೂ ವ್ಯಾಪಕನಾಗಿರುವವನೇ ವಿಷ್ಣು. ಎಲ್ಲೆಲ್ಲೂ ಇದ್ದಾನೆ ಎಂದರೆ ವೈಕುಂಠವನ್ನು ಮಾತ್ರವೇ ಅವನು ತಾಣ ಎಂದು ಏಕಾದರೂ ಹೇಳಲಾಗಿದೆ? ‘ವೈಕುಂಠ’ ಎಂದರೆ ಯಾವುದೇ ಓರೆಕೋರೆಗಳಿ ಲ್ಲದ್ದು, ತೊಂದರೆ–ತಾಪತ್ರಯಗಳು ಇಲ್ಲದ್ದು ಎಂದು. ಆಗ ವೈಕುಂಠ ಎನ್ನುವುದು ಯಾವುದೋ ಒಂದು ನಿರ್ದಿಷ್ಟ ಸ್ಥಳವಲ್ಲ, ಎಲ್ಲೂ ಎಲ್ಲೆಲ್ಲೂ ಇರಬಹುದಾದ ಸ್ಥಳ ಎಂದಾಗುತ್ತದೆ. ಎಲ್ಲಿ ನಮಗೆ ನೆಮ್ಮದಿ, ಸುಖ, ಸಂತೋಷಗಳು ಪ್ರಾಪ್ತಿಯಾಗುತ್ತವೆಯೋ ಅದೇ ವೈಕುಂಠವಾಗಬಲ್ಲದು; ವಿಷ್ಣು ಎಲ್ಲೆಲ್ಲೂ ಇದ್ದಾನಷ್ಟೆ!

ADVERTISEMENT

ಭಾರತೀಯ ಹಬ್ಬ–ಹರಿದಿನಗಳ ಉದ್ದೇಶ ನಮ್ಮ ಜೀವನವನ್ನು ಸುಖಮಯಗೊಳಿಸುವ, ಸುಂದರಗೊಳಿಸುವ ಕಡೆಗೆ ನಮ್ಮ ಭಾವ–ಬುದ್ಧಿಗಳನ್ನು ಸಿದ್ಧಗೊಳಿಸುವುದು. ಈ ತಾತ್ವಿಕತೆಯನ್ನು ‘ವೈಕುಂಠ ಏಕಾದಶಿ’ಯ ಆಚರಣೆಯಲ್ಲೂ ಕಾಣಬಹುದು. ನಾವು ಎಲ್ಲಿ ಸುಖವಾಗಿರಬಲ್ಲೆವು? ಎಲ್ಲಿ ಯಾವುದೇ ವಿಧದ ತೊಂದರೆಗಳು ಇಲ್ಲವೋ ಅಲ್ಲಿ ತಾನೆ? ವೈಕುಂಠ ಅಂಥ ಸ್ಥಾನ. ಅಲ್ಲಿ ಏಕಾದರೂ ಇಂಥ ಸುಖ ನೆಲಸಿದೆ ಎಂದರೆ ಅಲ್ಲಿ ವಿಷ್ಣು ಇದ್ದಾನೆ; ಎಂದರೆ ಅದು ದೈವದ ನೆಲೆ ಎಂಬ ಕಾರಣದಿಂದ. ದೈವತ್ವ ಎನ್ನುವುದು ಕೂಡ ನಮ್ಮ ಅಂತರಂಗದ ಬೆಳಕು ತಾನೆ? ಎಲ್ಲಿ ಜಡತೆ, ಸೋಮಾರಿತನ, ಕೆಟ್ಟತನದಂಥ ರಾಕ್ಷಸಪ್ರವೃತ್ತಿಗಳು ಇಲ್ಲವೋ ಅಲ್ಲಿ ಸಹಜವಾಗಿ ದೈವತ್ವ ನೆಲಸಿದೆ ಎಂದೇ ಅರ್ಥ. ಕತ್ತಲನ್ನು ಓಡಿಸಲು ಬೆಳಕನ್ನು ಅಲ್ಲಿಗೆ ತಂದರೆ ಸಾಕು, ಇನ್ನೊಂದು ಪ್ರತ್ಯೇಕ ಸಾಧನ ಬೇಕಿಲ್ಲವಷ್ಟೆ. ದೈವತ್ವದ ಗುಣವೇ ಬೆಳಕು. ನಮ್ಮ ಅಂತರಂಗದಲ್ಲಿ ನೆಮ್ಮದಿಯ ಬೆಳಕನ್ನು ತುಂಬಿಕೊಂಡಾಗ, ಒಡಲಲ್ಲಿ ಒಳಿತಿಗೆ ನೆಲೆ ಕಲ್ಪಿಸಿದಾಗ, ಬದುಕಿಗೆ ಕ್ರಿಯಾಶೀಲತೆ ಯನ್ನು ಕಲಿಸಿದಾಗ ನಮ್ಮಲ್ಲಿ ದೈವತ್ವ ನೆಲಸಿತು ಎಂದೇ ಅರ್ಥ. ಎಲ್ಲೆಲ್ಲೂ ಇರುವ ವಿಷ್ಣು ಈಗ ನಮ್ಮಲ್ಲೂ ಇದ್ದಾನೆ ಎಂಬ ಅರಿವು ನಮ್ಮಲ್ಲಿ ಆಗ ಮೂಡುವುದು. ವಿಷ್ಣು ಇದ್ದಾನೆ ಎಂದರೆ ಅದು ವೈಕುಂಠ ಆಗಿರಲೇ ಬೇಕಲ್ಲವೆ? ನಮ್ಮ ಈ ಜಗತ್ತೇ, ನಾವಿರುವ ತಾಣವೇ ಆ ಕ್ಷಣ ನಮಗೆ ವೈಕುಂಠವಾಗಿ ಒದಗಿರುತ್ತದೆ. ಇಂಥ ಅರಿವನ್ನು ನೆನಪಿಸುತ್ತದೆ, ‘ವೈಕುಂಠ ಏಕಾದಶಿ’.

ವೈಕುಂಠ ಏಕಾದಶಿಯಂದು ಶ್ರದ್ಧಾಳುಗಳು ವೆಂಕಟೇಶ್ವರನ ದೇವಾಲಯಕ್ಕೆ ಹೋಗಿಬರುವುದು ವಾಡಿಕೆ. ಈ ದೇವಾಲಯಗಳಲ್ಲಿ ‘ವೈಕುಂಠದ್ವಾರ’ವನ್ನು ಸಿದ್ಧಪಡಿಸಿರುತ್ತಾರೆ. ವೆಂಕಟೇಶ್ವರ ಕಲಿಯುಗದ ದಿಟವಾದ ದೈವ; ವಿಷ್ಣುವಿನ ಅವತಾರ; ಅವನು ಶ್ರೀ–ನಿವಾಸ ಕೂಡ. ‘ಶ್ರೀ’ ಎಂದರೆ ಲಕ್ಷ್ಮಿ; ಅವಳು ವಿಷ್ಣುವಿನ ಮಡದಿ. ಹೀಗೆ ವಿಷ್ಣುವಿಗೂ ಕಲಿಯುಗದ ದೈವ ಶ್ರೀನಿವಾಸನಿಗೂ ನಂಟು. ಆದುದರಿಂದ ಶ್ರೀನಿವಾಸನ ಆಲಯ ಎಂದರೆ ಅದು ವಿಷ್ಣುಸಾನ್ನಿಧ್ಯವೇ ಹೌದು. ‘ವೇಂಕಟ’ ಎಂದರೆ ತೊಂದರೆಗಳನ್ನು ಸುಡುವವನು ಎಂದು ಅರ್ಥ. ಹೀಗಾಗಿ ಜೀವನದಲ್ಲಿ ನಮಗೆ ಒದಗಿರುವ ಸಂಕಟಗಳನ್ನು ದೂರಮಾಡಿಕೊಂಡು, ನೆಮ್ಮದಿಯ ಬೆಳಕನ್ನು ತುಂಬಿಕೊಳ್ಳಬೇಕೆಂಬ ತುಡಿತದಲ್ಲಿ ಸಿದ್ಧಗೊಂಡ ಆರಾಧನೆಯ ಸಂಕೇತವೇ ವೈಕುಂಠ ಏಕಾದಶಿಯ ಆಚರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.