ವಾಲ್ಮೀಕಿ
(ಪ್ರಾತಿನಿಧಿಕ ಚಿತ್ರ)
ರಾಮಾಯಣ ನಮಗೆ ಆದಿಕಾವ್ಯ. ಇಂದಿನ ಕವಿಗಳ ಕಾವ್ಯಗಳನ್ನು ಗಮನದಲ್ಲಿಟ್ಟುಕೊಂಡು ಆದಿಕಾವ್ಯವನ್ನು ಅರ್ಥಮಾಡಿಕೊಳ್ಳುವುದು ವಿಪರೀತ ಸಾಹಸವಾಗುತ್ತದೆ. ಆದಿಕಾವ್ಯದ ಹುಟ್ಟಿಗೆ ಕಾರಣವಿದೆ. ಅದಕ್ಕೂ, ಅದರ ಕವಿ ವಾಲ್ಮೀಕಿಗಳಿಗೂ ನೇರವಾದ ನಂಟೂ ಇದೆ. ಈ ಕಾರಣದ ಮೂಲ ವೈಯಕ್ತಿಕ ಸ್ತರದ್ದಾದರೂ, ಅದರ ಗುರಿ ಮಾತ್ರ ವೈಶ್ವಿಕ ಸ್ತರದ್ದು. ಇಂಥ ದಾರ್ಶನಿಕತೆಯ ನೆಲೆ ಇರುವುದರಿಂದಲೇ ವಾಲ್ಮೀಕಿ ಕೇವಲ ಕವಿ ಎನಿಸಿಕೊಳ್ಳಲಿಲ್ಲ, ಮಹರ್ಷಿಗಳೂ ಆದರು. ಅವರ ಕೃತಿ ಕೇವಲ ಕಾವ್ಯ ಎನಿಸಿಕೊಳ್ಳಲಿಲ್ಲ; ಆದಿಕಾವ್ಯ ಎನಿಸಿ, ವೇದಕ್ಕೆ ಸಮವಾಗಿ ಸ್ಥಿರವಾಯಿತು. ರಾಮಾಯಣವನ್ನೂ ವಾಲ್ಮೀಕಿಗಳನ್ನೂ ಸ್ತುತಿಸುವ ಹಲವು ಶ್ಲೋಕಗಳಲ್ಲಿ ಇದೂ ಒಂದು:
ವಾಲ್ಮೀಕಿಗಿರಿ ಸಂಭೂತಾ
ರಾಮಸಾಗರಗಾಮಿನೀ ।
ಪುನಾತಿ ಭುವನಂ ಪುಣ್ಯಾ
ರಾಮಾಯಣ ಮಹಾನದೀ ।।
‘ರಾಮಾಯಣ ಎಂಬುದು ಮಹಾನದಿ. ಇದರ ಉಗಮಸ್ಥಾನವೇ ವಾಲ್ಮೀಕಿ ಎಂಬ ಗಿರಿ. ಈ ನದಿಯು ಹರಿಯುತ್ತಿರುವುದು ರಾಮ ಎಂಬ ಸಾಗರವನ್ನು ಸೇರಲು. ಹೀಗೆ ಈ ನದಿ ಪ್ರವಹಿಸುತ್ತ ಇಡಿಯ ಲೋಕವನ್ನೆಲ್ಲ ಪವಿತ್ರ ಮಾಡುತ್ತಿದೆ.’
ಪ್ರಪಂಚದ ಬಹುಪಾಲು ಸಂಸ್ಕೃತಿಗಳು ಅರಳಿರುವುದು ನದಿಗಳ ದಡಗಳಲ್ಲಿಯೇ. ನದಿ, ಎಂದರೆ ನೀರಿಲ್ಲದೆ ನಮ್ಮ ಜೀವನವಿಲ್ಲ. ನಮ್ಮ ಜೀವನ ಅರಳಬೇಕಾದರೆ ‘ಜೀವನ’ದ ಸಾಮೀಪ್ಯ ಬೇಕೇ ಬೇಕು (ನೀರಿಗೆ ‘ಜೀವನ’ ಎಂದೂ ಹೆಸರಿದೆ). ರಾಮಾಯಣ ಎಂಬ ಮಹಾನದಿಯ ದಡಗಳಲ್ಲಿ ಸಂಸ್ಕೃತಿ ಮಾತ್ರವೇ ಅರಳಿಲ್ಲ, ಆ ಸಂಸ್ಕೃತಿಯನ್ನು ಪವಿತ್ರವನ್ನಾಗಿಯೂ ಮಾಡಿದೆ ಎಂಬುದು ಇಲ್ಲಿಯ ಇಂಗಿತ. ಹೀಗೆ ಸಂಸ್ಕೃತಿಪೋಷಕವಾದ ನದಿ ಹುಟ್ಟಿರುವುದು ವಾಲ್ಮೀಕಿ ಎಂಬ ಗಿರಿಯಲ್ಲಿ.
ರಾಮಾಯಣ ಎಂಬ ಮಹಾನದಿ ಯಾವುದೇ ಉದ್ದೇಶವಿಲ್ಲದೆಯೆ, ಹುಟ್ಟಿದ್ದಲ್ಲ. ಅದು ವಾಲ್ಮೀಕಿ ಎಂಬ ‘ಗಿರಿ’ಯಲ್ಲಿ ಹುಟ್ಟಿದ್ದು ದಿಟ. ಆದರೆ ವಾಲ್ಮೀಕಿ ಮಹರ್ಷಿಗಳು ತಪಸ್ಸಿನಲ್ಲಿದ್ದಾಗ, ಧರ್ಮದ ಹುಡುಕಾಟದಲ್ಲಿದ್ದಾಗ ತೋರಿಕೊಂಡದ್ದು ರಾಮಾಯಣ.
ಲೋಕವನ್ನು ಕಾಪಾಡಬಲ್ಲ ಧರ್ಮದ ಮೂರ್ತರೂಪವಾಗಿ ಶ್ರೀರಾಮನು ವಾಲ್ಮೀಕಿಗಳಿಗೆ ಒದಗಿದ. ಅವರಿಗೆ ರಾಮನ ವ್ಯಕ್ತಿತ್ವ ಪ್ರತಿಫಲವಾದದ್ದು ಕೂಡ ನೀರಿನಲ್ಲಿಯೇ! ನದಿಯ ಸ್ವಚ್ಛವಾದ ನೀರಿನಲ್ಲಿ ಅವರಿಗೆ ರಾಮನ ಚಾರಿತ್ರ್ಯದ ಮಹಾದರ್ಶನವಾಯಿತು. ‘ಸಜ್ಜನರ ಮನಸ್ಸಿನಂತೆ ನೀರು ತಿಳಿಯಾಗಿದೆ’ ಎಂದು ಉದ್ಗರಿಸಿದಾಗ ಅದು ರಾಮನ ಮನಸ್ಸಿನ ಲಕ್ಷಣವೂ ಆಗಿತ್ತು, ಧರ್ಮದ ಲಕ್ಷಣವೂ ಆಗಿತ್ತು; ಎರಡೂ ಕೂಡಿಕೊಂಡು ರಾಮಾಯಣ ಎಂಬ ಮಹಾನದಿಯು ವಾಲ್ಮೀಕಿಗಳಲ್ಲಿ ಪ್ರವಹಿಸಿತು!
ಹೀಗಾಗಿ ರಾಮಾಯಣದ ಅಂತಃಸ್ರೋತವೇ ಧರ್ಮವಾಯಿತು. ಇದರ ಉಗಮಕ್ಕೆ ಕಾರಣವಾದದ್ದು ವಾಲ್ಮೀಕಿಗಳ ತಪಸ್ಸು; ಜಗತ್ತಿಗೆ ಧರ್ಮದ ಬೆಳಕನ್ನು ಕಾಣಿಸಬೇಕೆಂಬ ತಪಸ್ಸು. ಈ ಕಾರಣದಿಂದಲೇ ರಾಮಾಯಣ ಕೇವಲ ಕಾವ್ಯವಾಗಿ ಒದಗಲಿಲ್ಲ; ಅದು ಧರ್ಮದ ನಡೆ–ನುಡಿಗಳ ಕಾಣ್ಕೆಯೂ ಆಯಿತು. ಧರ್ಮದ ಮೂರ್ತರೂಪವಾದ ರಾಮನ ನಡೆಯನ್ನು ಲೋಕಕ್ಕೆ ವಾಲ್ಮೀಕಿ ಮಹರ್ಷಿಗಳ ನುಡಿ ಕಂಡರಿಸಿಕೊಟ್ಟಿತು. ರಾಮಾಯಣದುದ್ದಕ್ಕೂ ನಾವು ಕಾಣುವುದು ‘ಮಾತು’ ಧರ್ಮವಾಗುವ ಬಗೆಯನ್ನೇ.
ಇಂದು ನಾವು ಮಾತನ್ನು ತುಂಬ ಅಪವ್ಯಯ ಮಾಡುತ್ತಿದ್ದೇವೆ. ನಮ್ಮ ಕಪಟಗಳನ್ನು ಮಾತಿನ ನೆರವಿನಿಂದ ಮುಚ್ಚಿಡಲು ಪ್ರಯತ್ನಿಸುತ್ತಿರುತ್ತೇವೆ; ಕಾವ್ಯದ ಹೆಸರಿನಲ್ಲಿ ಮಾತನ್ನು ಕೆಡಿಸುತ್ತಿದ್ದೇವೆ. ಮಾತಿಗೂ ಧರ್ಮಕ್ಕೂ ಇರುವ ನಂಟನ್ನು ರಾಮಾಯಣ ತುಂಬ ಸೊಗಸಾಗಿ ಸ್ಥಾಪಿಸುತ್ತದೆ. ಧರ್ಮವನ್ನು ಮಾತಿನಲ್ಲಿ ವಿವರಿಸುವುದು ಸುಲಭವಲ್ಲ. ಆದರೆ ವಾಲ್ಮೀಕಿಗಳು ರಾಮನ ಗುಣಗಳನ್ನು ವರ್ಣಿಸುತ್ತ ಧರ್ಮದ ವ್ಯಾಪ್ತಿಯನ್ನೂ ಲಕ್ಷಣವನ್ನೂ ಸೊಗಸನ್ನೂ ಕಾಣಿಸಿದ್ದಾರೆ. ಕಾವ್ಯವು ಮಾಡಬೇಕಾದ ಕೆಲಸ ಇದೇ; ಮಾತಿಗೆ ನಿಲುಕದ ಬೆಳಕಿನ ತಂಪನ್ನು ಹೃದಯಕ್ಕೆ ತಲಪಿಸುವುದು. ಅಂತೆಯೇ ಧರ್ಮದ ನೆಮ್ಮದಿಯನ್ನು ವಾಲ್ಮೀಕಿಗಳು ರಾಮಾಯಣದ ಮೂಲಕ ನಮಗೆ ಒದಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.