ADVERTISEMENT

ವೇದವ್ಯಾಸರ ಶಿವಪುರಾಣ ಸಾರ- 28: ಬ್ರಹ್ಮನ ಸುಳ್ಳಿಗೆ ಕೇದಗೆಹೂ ಸಾಕ್ಷಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 25 ಜನವರಿ 2022, 19:30 IST
Last Updated 25 ಜನವರಿ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಮೇಲಿನಿಂದ ಕೆಳಗೆ ಬೀಳುತ್ತಿದ್ದ ಕೇದಗೆಹೂವು ಶಿವನ ಶಿರಸ್ಸಿನ ಮೇಲೆ ಇತ್ತು. ಬ್ರಹ್ಮ-ವಿಷ್ಣು ಇಬ್ಬರೂ ಕಂಬದ ಆದಿ ಮತ್ತು ಕೊನೆಗಳನ್ನು ಹುಡುಕುತ್ತಾ ದಿಕ್ಕು ತಪ್ಪಿದ್ದನ್ನು ನೋಡಿದ ಸ್ತಂಭರೂಪೀ ಪರಮೇಶ್ವರ ನಕ್ಕಾಗ, ಅವನ ಶಿರಸ್ಸು ಸ್ವಲ್ಪ ಅಲುಗಿತು. ಆಗ ಶಿವನ ಶಿರಸ್ಸಿನಲ್ಲಿದ್ದ ಉತ್ತಮವಾದ ಕೇದಗೆ ಪುಷ್ಪವು ಬ್ರಹ್ಮ–ವಿಷ್ಣುಗಳ ಅನುಗ್ರಹಕ್ಕಾಗಿ ಕೆಳಗೆ ಬಿದ್ದಿತ್ತು. ಇದು ತಿಳಿಯದ ಬ್ರಹ್ಮ ‘ಪುಷ್ಪರಾಜನಾದ ಕೇದಗೆಯೆ! ನೀನು ಎಲ್ಲಿಂದ ಬೀಳುತ್ತಲಿರುವೆ?’ ಎಂದು ಕೇಳುತ್ತಾನೆ. ಅದಕ್ಕೆ ಕೇದಗೆಯು ‘ಚಕ್ಷುಸ್ಸೇ ಮೊದಲಾದ ಪ್ರಮಾಣಗಳಿಂದ ತಿಳಿಯಲು ಅಸಾಧ್ಯವಾದ ಈ ಕಂಬದ ಮಧ್ಯದಿಂದ ಬಹಳ ಕಾಲದಿಂದ ಬೀಳುತ್ತಲಿರುವೆ. ಆದರೆ, ಇದರ ನೆಲೆಯು ಇದುವರೆಗೂ ನನಗೇ ಕಾಣಿಸಲಿಲ್ಲ. ಆದುದುರಿಂದ ನೀನೂ ಈ ಸ್ತಂಭದ ಮೇಲ್ತುದಿಯನ್ನು ನೋಡುವ ಆಸೆಯನ್ನು ಬಿಡು’ ಎಂದು ಹೇಳಿತು. ಆಗ ಬ್ರಹ್ಮ ‘ಎಲೈ ಕೇದಗೆ! ಇನ್ನು ಮುಂದೆ ನೀನು ನನ್ನ ಸ್ನೇಹಿತನು. ಈ ಸ್ನೇಹಿತನಿಗಾಗಿ ನನಗೆ ಬೇಕಾದ ಒಂದು ಕಾರ್ಯವನ್ನು ನೀನು ನಡೆಸಿ ಕೊಡಬೇಕು’ ಅಂತ ಕೋರಿದ.

ಅದೇನೆಂದು ಕೇದಗೆ ಕೇಳಿದಾಗ, ಬ್ರಹ್ಮ ‘ನೀನು ನನ್ನೊಂದಿಗೆ ಬಂದು, ವಿಷ್ಣುವಿಗೆ ಒಂದು ಸುಳ್ಳು ಹೇಳಬೇಕು. ಈ ಸ್ತಂಭದ ಕೊನೆಯನ್ನು ಬ್ರಹ್ಮ ನೋಡಿರುವನು, ಇದಕ್ಕೇ ನಾನೇ ಸಾಕ್ಷಿ ಎಂದು ಹೇಳಬೇಕು’ ಎಂದ. ಬ್ರಹ್ಮ ಬೇಡಿಕೊಂಡಿದ್ದರಿಂದ ಕೇದಗೆಗೆ ಕನಿಕರವಾಯಿತು. ಆದರೆ ಸುಳ್ಳು ಹೇಳುವುದು ತಪ್ಪು ಅಂತ ಶಾಸ್ತ್ರ ಹೇಳಿದೆ; ಆದ್ದರಿಂದ ಸುಳ್ಳು ಹೇಳಲಾರೆ ಎಂದಿತು. ಆಗ ಬ್ರಹ್ಮ, ಅತ್ಯಂತ ಆಪತ್ತಿನಲ್ಲಿರುವವರನ್ನು ರಕ್ಷಿಸಲು ಸುಳ್ಳನ್ನು ಹೇಳಬಹುದು ಎಂದು ಶಾಸ್ತ್ರ ಹೇಳಿರುವುದನ್ನು ನೆನಪಿಸಿದ. ಒಲ್ಲದ ಮನಸ್ಸಿನಿಂದಲೇ ಕೇದಗೆಹೂವು ಸುಳ್ಳು ಹೇಳಲುಒಪ್ಪಿಕೊಂಡಿತು.

ಬ್ರಹ್ಮ ಕೇದಗೆಯೊಂದಿಗೆ, ಸ್ತಂಬದ ನೆಲೆ ತಿಳಿಯದೆ ಬಳಲಿ ಕೂತಿದ್ದ ವಿಷ್ಣುವಿನ ಬಳಿ ಬಂದ. ಬಾಡಿದ ವಿಷ್ಣುವಿನ ಮುಖ ನೋಡಿದ ಮತ್ತಷ್ಟು ಸಂತೋಷದಿಂದ ಹಿಗ್ಗಿದ; ವಿಷ್ಣುವನ್ನು ಲೇವಡಿ ಮಾಡಿ ಹಂಗಿಸಿದ. ‘ಎಲೈ ಹರಿಯೇ! ಸ್ತಂಭದ ಕೊನೆ ತುದಿಯನ್ನು ನಾನು ನೋಡಿಬಂದೆ. ಇದಕ್ಕೆ ಈ ಕೇದಗೆಯೇ ಸಾಕ್ಷಿ. ಬೇಕಿದ್ದರೆ ಕೇಳು’ ಅಂತ ಕೇದಗೆ ಪುಷ್ಪದತ್ತ ಕೈ ತೋರಿಸಿದ. ಆಗ ಕೇದಗೆಯೂ ಬ್ರಹ್ಮ ಕಂಬದ ತುದಿ ನೋಡಿದ್ದು ನಿಜವೆಂದು ವಿಷ್ಣುವಿಗೆ ಸುಳ್ಳು ಹೇಳಿತು. ಹರಿಯು ಬ್ರಹ್ಮ ಮತ್ತು ಕೇದಗೆಗಳ ಮಾತು ನಿಜವೆಂದು ನಂಬಿ, ಬ್ರಹ್ಮನಿಗೆ ಸೋತೆನೆಂದು ಒಪ್ಪಿಕೊಂಡ. ಇದರ ಕಾಣಿಕೆಯಾಗಿ, ಧ್ಯಾನ ಮತ್ತಿತರ ಹದಿನಾರು ಉಪಚಾರಗಳಿಂದ ಬ್ರಹ್ಮನನ್ನು ಪೂಜಿಸಿದ.

ADVERTISEMENT

ಇದನ್ನು ಕಂಡ ಶಿವ ಉರಿಗೋಪದಿಂದ ಅಗ್ನಿಮಯವಾದ ಕಂಬದಿಂದ ಆವಿರ್ಭಿಸಿ ಬಂದ. ಪ್ರತ್ಯಕ್ಷನಾದ ಈಶ್ವರನನ್ನು ನೋಡಿದ ವಿಷ್ಣುವು ಕೂಡಲೇ ಅವನ ಪಾದಗಳನ್ನು ಹಿಡಿದು, ಭಯದಿಂದ ನಡುಗುತ್ತಲಿದ್ದ ತನ್ನ ಕೈಗಳಿಂದ ನಮಸ್ಕರಿಸಿ, ‘ಓ ಪ್ರಭುವೇ! ನೀನು ಕೊನೆ ಮೊದಲಿಲ್ಲದಂತಹ ಸ್ವರೂಪವುಳ್ಳವನು. ಇಂತಹ ನಿನ್ನ ವಿಷಯದಲ್ಲಿ ನಾನೇ ದೊಡ್ಡವನೆಂಬ ದುರಹಂಕಾರಕ್ಕೆ ಒಳಗಾದೆ, ನನ್ನ ತಪ್ಪನ್ನು ಕ್ಷಮಿಸು’ ಅಂತ ವಿನೀತನಾಗಿ ಕೇಳಿಕೊಂಡ. ಆಗ ಪ್ರಸನ್ನಚಿತ್ತನಾದ ಈಶ್ವರ ‘ನೀನು ಈಶ್ವರನಾಗಬೇಕೆಂಬ ದುರಾಸೆಯುಳ್ಳವನಾದರೂ ಅಗ್ನಿಸ್ತಂಭದ ನೆಲೆಯ ವಿಷಯದಲ್ಲಿ ನಿಜವನ್ನೇ ಆಡಿರುವೆ. ಆದ ಕಾರಣ ಇನ್ನು ಮುಂದೆ ಜನಗಳಲ್ಲಿ ಸತ್ಯನಾರಾಯಣನಾಗಿ ನಿನಗೆ ನನ್ನಂತೆ ಗೌರವವೂ ಪೂಜೆಯೂ ಲಭಿಸುವುದು; ನನ್ನಂತೆಯೇ ನಿನಗೂ ಪುಣ್ಯಕ್ಷೇತ್ರಗಳಲ್ಲಿ ಮೂರ್ತಿಪ್ರತಿಷ್ಠೆ, ಉತ್ಸವ, ಪೂಜೆ ಮುಂತಾದವು ನಡೆಯುವುವು’ ಎಂದು ಹರಸಿದ.

ಹೀಗೆ ನಂದಿಕೇಶ್ವರ ಮಂದಾರಪರ್ವತದಲ್ಲಿ ತಪಸ್ಸಿಗೆ ಕುಳಿತ ಸನತ್ಕುಮಾರನಿಗೆ ಮಹಾಕಾಳೇಶ್ವರ ಸ್ತಂಭರೂಪದಲ್ಲಿ ಆವಿರ್ಭವಿಸಿದ ಕಥೆಯನ್ನು ಹೇಳಿದ ಎಂಬಲ್ಲಿಗೆ ಶ್ರೀಶಿವಪುರಾಣದ ವಿದ್ಯೇಶ್ವರಸಂಹಿತೆಯ ಏಳನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.