ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮೇನಾದೇವಿಯನು ಓಲೈಸಿದ ಅರುಂಧತಿ

ಭಾಗ 248

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 12 ಅಕ್ಟೋಬರ್ 2022, 19:30 IST
Last Updated 12 ಅಕ್ಟೋಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಸಪ್ತರ್ಷಿಗಳು ಹಿಮವಂತನಿಗೆ ‘ನಿನ್ನ ಪುತ್ರಿಯನ್ನು ಶಂಕರನಿಗೆ ಕೊಡಬೇಕು’ ಎಂದರು.

ಮುನಿಗಳು ಹೇಳಿದ ಮಾತನ್ನು ಕೇಳಿ ಹಿಮವಂತ ‘ಮುನಿಗಳೇ, ನೀವು ಹೇಳಿದಂತೆಯೇ ಹಿಂದೆ ನಾನು ಮದುವೆ ಮಾಡಿಕೊಡಲು ಉದ್ದೇಶಿಸಿದ್ದೆ. ಆದರೆ ಓರ್ವ ಬ್ರಾಹ್ಮಣ ಬಂದು ಶಿವನ ವಿಚಾರ ತಿಳಿಸಿ, ಬಹಳ ನಿಂದನೆ ಮಾಡಿದ. ಅವನ ಮಾತು ಕೇಳಿ ಮೇನಾದೇವಿ ಮನಸ್ಸು ಬದಲಾಯಿಸಿದಳು. ನನ್ನ ಮನಸ್ಸಿಗೂ ಬೇಸರವಾಗಿ ಮೇನಾದೇವಿಯ ಮಾತಿನಂತೆ ನಡೆಯುವುದೇ ಯುಕ್ತವೆಂದು ಅನ್ನಿಸಿತು. ಆದುದರಿಂದ ಭಿಕ್ಷುಕನಾದ ಆ ರುದ್ರನಿಗೆ ಪುತ್ರಿಯನ್ನು ಕೊಡಲಾರೆ’ ಎಂದ.

ಆಗ ಸಪ್ತರ್ಷಿಗಳಲ್ಲಿ ಒಬ್ಬರಾದ ವಸಿಷ್ಠ ತನ್ನ ಪತ್ನಿ ಅರುಂಧತಿಯನ್ನು ಮೇನಾದೇವಿಯನ್ನು ಮನವೊಲಿಸಲು ಕಳುಹಿಸಿದ. ಮೇನಾದೇವಿ ಮತ್ತು ಪಾರ್ವತಿ ಇರುವಲ್ಲಿಗೆ ಬಂದಳು ಅರುಂಧತಿ. ದುಃಖಿತರಾಗಿ ಮಲಗಿದ್ದ ಮೇನಾದೇವಿಗೆ ‘ಎಲೈ, ಪತಿವ್ರತೆಯಾದ ಮೇನಾದೇವಿ. ಎದ್ದೇಳು. ದಯಾಳುಗಳಾದ ಸಪ್ತರ್ಷಿಗಳು ಬಂದಿರುವರು’ ಎಂದಳು.

ADVERTISEMENT

ಅರುಂಧತಿಯ ಸ್ವರವನ್ನು ಕೇಳಿದೊಡನೆಯೇ ಮೇನಾದೇವಿ ಮೇಲೆದ್ದಳು. ಲಕ್ಷ್ಮಿಯಂತೆ ತೇಜಸ್ವಿನಿಯಾದ ಅರುಂಧತಿಗೆ ನಮಸ್ಕರಿಸಿ, ‘ಇದೇನಾಶ್ಚರ್ಯ? ಜಗತ್ಕರ್ತನ ಸೊಸೆ ಹಾಗೂ ವಸಿಷ್ಠನ ಪತ್ನಿಯಾದ ನೀನು ನಮ್ಮ ಮನೆಗೆ ಬಂದಿರುವೆ. ನಮ್ಮ ಪುಣ್ಯಕ್ಕೆ ಎಣೆಯುಂಟೇ? ಓ ದೇವಿ, ನಮ್ಮಲ್ಲಿಗೆ ನೀನು ಬಂದಿರುವ ಕಾರಣವೇನು? ನಮ್ಮಲ್ಲಿ ಅನುಗ್ರಹವಿಟ್ಟು ಹೇಳು’ ಎಂದಳು.

ಆಗ ಅರುಂಧತಿಯು ಮೇನಾದೇವಿಗೆ ಹಿತೋಪದೇಶ ನೀಡಿ ಮನಃಪರಿವರ್ತನೆ ಮಾಡಿದಳು. ನಂತರ ಅವಳನ್ನು ಸಪ್ತರ್ಷಿಗಳ ಬಳಿಗೆ ಕರೆತಂದಳು.

ಸಪ್ತರ್ಷಿಗಳು ಹಿಮವಂತ–ಮೇನಾದೇವಿ ದಂಪತಿಯನ್ನು ಕೂರಿಸಿಕೊಂಡು ಹೇಳಿದರು, ‘ಮಂಗಳಕರವಾದ ನಮ್ಮ ವಾಕ್ಯವನ್ನು ಕೇಳಿ. ಶಿವನಿಗೆ ಪಾರ್ವತಿಯನ್ನು ಮದುವೆ ಮಾಡಿಕೊಡಿ. ಆದಿಪುರುಷ ಶಂಕರನ ಅತ್ತೆ-ಮಾವನಾಗಿ, ಲೋಕಪೂಜ್ಯರಾಗುವಿರಿ. ಪರಮೇಶ್ವರನಿಗೆ ಮದುವೆ ಇಷ್ಟವಿರಲಿಲ್ಲ. ತಾರಕಾಸುರನ ವಧೆಗಾಗಿ ಮದುವೆ ಮಾಡಿಕೊಳ್ಳುವಂತೆ ಬ್ರಹ್ಮ ಪ್ರಾರ್ಥಿಸಿದ್ದರಿಂದ ನಿಮ್ಮ ಮಗಳನ್ನು ಮದುವೆಯಾಗಲು ಬಯಸಿದ್ದಾನೆ. ಪಾರ್ವತಿ ಸಹ ಶಿವನೇ ತನ್ನ ಪತಿಯಾಗಬೇಕೆಂದು ಇಚ್ಛಿಸಿ ತಪಸ್ಸನ್ನ ಆಚರಿಸಿದ್ದಾಳೆ. ಅವಳ ತಪಸ್ಸಿಗೆ ಪ್ರಸನ್ನನಾದ ಪರಮೇಶ್ವರ ಅವಳನ್ನು ಮದುವೆಯಾಗುವ ಮಾತು ಕೊಟ್ಟಿದ್ದಾನೆ’ ಎಂದರು.

ಋಷಿಗಳ ಮಾತನ್ನು ಕೇಳಿ ಹಿಮವಂತ ವಿನಯದಿಂದ ಹೇಳಿದ, ‘ಕ್ಷಮಿಸಿ ಮುನಿವರ್ಯರೇ, ಮಹಾವಿರಕ್ತನಾದ ಶಿವನಿಗೆ ಪುತ್ರಿಯನ್ನು ಕೊಡಲು ನನಗೆ ಇಚ್ಛೆಯಿಲ್ಲ. ನೀವು ವೇದವಿಧಾರ್ತೃವಾದ ಬ್ರಹ್ಮನ ಪುತ್ರರು. ಯಾವ ರೀತಿಯಲ್ಲಿ ಶಿವ ಉತ್ತಮವೆಂದು ಹೇಳುವಿರಿ. ಅವನಿಗೆ ಯಾವ ರಾಜಪರಿಕರವೂ ಇಲ್ಲ. ಅವನಿಗೊಂದು ಆಶ್ರಯವೂ ಇಲ್ಲ. ಐಶ್ವರ್ಯವಿಲ್ಲ, ಸ್ವಜನರು, ಬಂಧುಗಳು, ಯಾರೂ ಇಲ್ಲ. ಕಾಮದಿಂದಾಗಲೀ ಮೋಹದಿಂದಾಗಲೀ ಭಯದಿಂದಾಗಲೀ ಲೋಭದಿಂದಾಗಲೀ ಪುತ್ರಿಯನ್ನು ಅನುರೂಪನಲ್ಲದ ವರನಿಗೆ ಕೊಟ್ಟರೆ ನರಕ ಪ್ರಾಪ್ತಿಯಾಗುತ್ತದೆ. ಆದಕಾರಣ ಶಂಕರನಿಗೆ ಮಗಳನ್ನು ಕೊಡಲು ನನಗಿಷ್ಟವಿಲ್ಲ. ಈ ವಿಷಯದಲ್ಲಿ ನಮ್ಮನ್ನು ಬಲವಂತಪಡಿಸಬೇಡಿ’ ಎಂದ.

ಹಿಮವಂತನ ಮಾತನ್ನು ಕೇಳಿ, ಸಪ್ತರ್ಷಿಗಳಲ್ಲಿ ಉತ್ತಮ ವಾಗ್ಮಿಯಾದ ವಸಿಷ್ಠಮುನಿ ಸಾವಧಾನದಿಂದ ಹಿಮವಂತ ದಂಪತಿಗಳ ಮನವೊಲಿಸಲು ಮುಂದಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.