ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನಲ್ಲಿ ಮೇನಾದೇವಿ ಪ್ರಾರ್ಥನೆ

ಭಾಗ 284

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 24 ನವೆಂಬರ್ 2022, 19:30 IST
Last Updated 24 ನವೆಂಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ದೇವತೆಗಳು ಮತ್ತು ಮುನಿಗಳ ಪಾದಗಳನ್ನು ತೊಳೆದ ಪರ್ವತರಾಜ, ಅತಿಥಿಗಳಿಗೆಲ್ಲ ಕಾಣಿಕೆಗಳನ್ನು ಕೊಟ್ಟು ಸತ್ಕರಿಸಿದ. ಶಿವ-ಗೌರಿಯ ಕಲ್ಯಾಣ ಮಹೋತ್ಸವದ ನಾಲ್ಕನೆಯ ದಿನವೂ ಯಾವುದಕ್ಕೂ ಕೊರತೆಯಿಲ್ಲದಂತೆ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಿತು. ಐದನೇ ದಿನ ಪ್ರಾರಂಭವಾದಾಗ ದೇವತೆಗಳೆಲ್ಲರೂ ತಮ್ಮ ಊರುಗಳಿಗೆ ಹೊರಡಲು ಪರ್ವತರಾಜನನ್ನು ವಿಜ್ಞಾಪಿಸಿಕೊಂಡರು. ದೇವತೆಗಳ ಮಾತನ್ನು ಒಪ್ಪದ ಪರ್ವತರಾಜ, ‘ದೇವತೆಗಳಿರಾ, ದಯೆಯಿಟ್ಟು ಇನ್ನೂ ಕೆಲವು ದಿನ ಇಲ್ಲಿಯೇ ಇರಬೇಕು’ ಎಂದು ಮನವಿ ಮಾಡಿದ. ಒತ್ತಾಯಪೂರ್ವಕವಾಗಿ ಅತಿಥಿಗಳನ್ನು ಬಹಳ ದಿನಗಳವರೆಗೂ ಇರಿಸಿಕೊಂಡು ಆದರದಿಂದ ಸತ್ಕರಿಸಿದ.

ಎಲ್ಲರೂ ಬಹಳ ದಿನಗಳವರೆಗೂ ಇದ್ದರು. ನಂತರ ಹೊರಡಲು ಅನುಮತಿಸುವಂತೆ ಕೋರಿದರು. ಸಮ್ಮತಿಸಿದ ಹಿಮವಂತ ಇಷ್ಟದೇವತೆಯನ್ನು ಪೂಜಿಸಿದ ನಂತರ, ಪಟ್ಟಣದ ಪ್ರಮುಖರು ಮತ್ತು ತನ್ನ ಬಂಧುಗಳೊಡನೆ ದೇವತೆಗಳಿದ್ದ ಜನಾವಾಸಕ್ಕೆ ಬಂದ. ಅಲ್ಲಿ ಮಹೇಶ್ವರನನ್ನು ಪೂಜಿಸಿದ. ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳೊಡನೆ ಪರಮೇಶ್ವರನನ್ನು ಕಳುಹಿಸಿಕೊಟ್ಟ.

ಈ ಸಂದರ್ಭದಲ್ಲಿ ಮುನಿಗಳೂ ದೇವತೆಗಳೂ ಪರ್ವತರಾಜನನ್ನು ಉತ್ತಮವಾಗಿ ವಿವಾಹ ಕಾರ್ಯ ನಡೆಸಿಕೊಟ್ಟಿದ್ದಕ್ಕೆ ಹೊಗಳಿದರು.‘ನೀನೇ ಧನ್ಯ. ಪರಮಪ್ರಭುವಾದ ಶಿವ ನಿನ್ನ ಮನೆಯ ಬಾಗಿಲಿಗೆ ಬಂದು, ನಿನ್ನ ಮಗಳ ವಿವಾಹವಾದ. ಬ್ರಹ್ಮ, ವಿಷ್ಣು ಸಹ ನಿನ್ನ ಮನೆಗೆ ಬಂದಿರಬೇಕಾದರೆ ನಿನ್ನಂತಹ ಪುಣ್ಯವಂತ ಲೋಕದಲ್ಲಿ ಯಾರೂ ಇಲ್ಲ. ನೀನು ನಮಗೆ ಬಿಡಾರಮಾಡಿಕೊಟ್ಟಿರುವ ಜನವಾಸವಂತೂ ಅತಿರಮ್ಯವಾಗಿದೆ. ಬಂದವರೆಲ್ಲರಿಗೂ ಅಪೂರ್ವವಾದ ಭೋಜನವು ನಡೆಯಿತು. ಇಂತಹ ಪೂರ್ಣಾನಂದದಲ್ಲಿ ಭಾಗವಹಿಸಿದ ನಾವೆಲ್ಲರೂ ಧನ್ಯರು’ ಎಂದರು.

ADVERTISEMENT

ಶಿವನು ಪಾರ್ವತಿಯೊಡನೆ ಕೈಲಾಸಕ್ಕೆ ಹೊರಡುವಾಗ ಮೇನಾದೇವಿ ಅಳುತ್ತಾ ಹೇಳಿದಳು, ‘ಕರುಣಾನಿಧಿಯೇ, ಪಾರ್ವತಿಯಲ್ಲಿ ದಯೆ ಇಟ್ಟು ಕಾಪಾಡುತ್ತಿರು. ಒಂದು ವೇಳೆ ಅವಳಲ್ಲಿ ಅನೇಕ ದೋಷಗಳಿದ್ದರೂ, ಯಾವುದೇ ತಪ್ಪು ಮಾಡಿದರೂ ಕ್ಷಮಿಸು. ಅವಳು ನಿನ್ನ ಚರಣಕಮಲಗಳನ್ನೇ ನಂಬಿ ಬರುತ್ತಿದ್ದಾಳೆ. ಜನ್ಮಜನ್ಮದಲ್ಲಿಯೂ ನೀನೇ ಪತಿಯಾಗಬೇಕೆಂದು ತಪಸ್ಸು ಮಾಡಿ ಮದುವೆಯಾಗಿದ್ದಾಳೆ. ಕನಸಿನಲ್ಲಾಗಲಿ, ಜಾಗ್ರತಾವಸ್ಥೆಯಲ್ಲಾಗಲಿ, ನಿನ್ನನ್ನು ಬಿಟ್ಟು ಮತ್ತಾರನ್ನೂ ಅವಳು ಸ್ಮರಿಸಿಲ್ಲ. ನಿನ್ನ ಭಕ್ತಿಯುತವಾದ ಸ್ತೋತ್ರಗಳನ್ನು ಕೇಳಿದ ಮಾತ್ರದಿಂದ ಪಾರ್ವತಿಯು ಆನಂದಭಾಷ್ಪವನ್ನು ಸುರಿಸುತ್ತಾ, ರೋಮಾಂಚಿತಳಾಗುವಳು. ಇಂಥ ಪತಿಹಿತ ಬಯಸುವ ನನ್ನ ಮಗಳನ್ನು ಚೆನ್ನಾಗಿ ನೋಡಿಕೋ. ಅವಳೆಂದು ನೋವು ಪಡದಂತೆ ಜೋಪಾನವಾಗಿ ಬಾಳಿಸು’ ಎನ್ನುತ್ತಾ, ಪಾರ್ವತಿಯನ್ನು ಈಶ್ವರನಿಗೆ ಸಮರ್ಪಿಸಿದಳು.

ಮಗಳ ಅಗಲಿಕೆಯ ದುಃಖ ತಾಳಲಾರದ ಮೇನಾದೇವಿ ಮೂರ್ಛೆ ಹೋದಳು.ಮೇನಾದೇವಿಯನ್ನು ಮೇಲೆತ್ತಿ ಸಂತೈಸಿದ ಶಿವ, ಪತ್ನಿಯಾದ ಪಾರ್ವತಿಯನ್ನು ಪ್ರಾಣದಂತೆ ಜಾಗ್ರತೆಯಾಗಿ ನೋಡಿಕೊಳ್ಳುವುದಾಗಿ ಅಭಯ ನೀಡಿದ. ಸಮಾಧಾನಿತಳಾದ ಮೇನಾದೇವಿಯಿಂದ ಬೀಳ್ಕೊಂಡ ಸದಾಶಿವ ದೇವತೆಗಳೊಡನೆ ಹೊರಟ. ಈಶ್ವರನೊಂದಿಗೆ ಪರ್ವತರಾಜ ಮಾತನಾಡುತ್ತಾ ನಿಧಾನವಾಗಿ ಹಿಮವತ್ಪರ್ವತದ ಹೊರಗಡೆ ಇರುವ ಉದ್ಯಾನಕ್ಕೆ ಬಂದ. ಅಲ್ಲಿ ಈಶ್ವರನ ಆಗಮನಕ್ಕಾಗಿ ಅವನ ಪರಿವಾರ ಕಾಯುತ್ತಿತ್ತು. ಗಂಡನ ಮನೆಗೆ ಪಾರ್ವತಿಯನ್ನು ಕಳುಹಿಸುವಾಗ ಮೇನಾದೇವಿ ಸಂಪ್ರದಾಯದಂತೆ ಹಿರಿಯ ಮುತ್ತೈದೆಯರಿಂದ ಪತಿವ್ರತಾಧರ್ಮದ ಬೋಧನೆ ಮಾಡಿಸಿದಳು.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿಯ ಪಾರ್ವತೀಖಂಡದ ಐವತ್ತಮೂರನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.