ADVERTISEMENT

ವೇದವ್ಯಾಸರ ಶಿವಪುರಾಣಸಾರ: ದೇವತೆಗಳಿಗೆ ಭರ್ಜರಿ ಭೋಜನ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 22 ನವೆಂಬರ್ 2022, 19:04 IST
Last Updated 22 ನವೆಂಬರ್ 2022, 19:04 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಹಿಮವಂತನು ಪಾರ್ವತೀವಿವಾಹದ ಅಂಗವಾಗಿ ಸಂತೋಷ ಸಮಾರಂಭ ಏರ್ಪಡಿಸಿದ್ದ. ಅದರಲ್ಲಿ ಅತಿಥಿಗಳ ಭೋಜನ ಕೂಟಕ್ಕಾಗಿ ಒಂದು ದೊಡ್ಡ ಅಂಗಳವನ್ನು ಸಿದ್ಧಪಡಿಸಿದ್ದ. ಭೋಜನದ ಮಹಾಂಗಣವನ್ನು ತನ್ನ ಸೇವಕರಿಂದ ಸಾರಿಸಿ ಗುಡಿಸಿ, ಪನ್ನೀರಿನಿಂದ ಚಿಮುಕಿಸಿ ವಾತಾವರಣ ಘಮಘಮಿಸುವಂತೆ ಮಾಡಿದ್ದ. ತನ್ನ ಪುತ್ರರ ಮೂಲಕ ಪರ್ವತ ರಾಜರುಗಳು, ಪರ್ವತ ನಗರದ ಅನೇಕ ಶ್ರೀಮಂತ ಗಣ್ಯರು ಮತ್ತು ಪಂಡಿತರಿಗೆ ಭೋಜನ ಸಮಾರಂಭಕ್ಕೆ ಆಹ್ವಾನ ನೀಡಿದ್ದ. ಹಿಮವಂತನ ಆಹ್ವಾನವನ್ನು ಮನ್ನಿಸಿ ಶಿವ, ಬ್ರಹ್ಮ, ವಿಷ್ಣು, ಇಂದ್ರ ಮೊದಲಾದ ದೇವತೆಗಳು, ವಸಿಷ್ಠ, ಭೃಗು ಮತ್ತಿತರ ಋಷಿಗಳು, ಸಿದ್ಧರು ಅಲ್ಲಿಗೆ ದಯಮಾಡಿಸಿದ್ದರು. ಶಿವನ ಪರಿವಾರ ಮತ್ತು ಹಿಮವಂತನ ಪರಿವಾರದಿಂದ ಭೋಜನಾಂಗಣ ತುಂಬಿ ಹೋಗಿತ್ತು.

ಎಲ್ಲರನ್ನೂ ಕರೆದುಕೊಂಡು ಹೋಗಿ ಅವರಿಗೆ ಉಚಿತವಾದ ಪೀಠಗಳಲ್ಲಿ ಕುಳ್ಳಿರಿಸಿದ. ಎಲ್ಲಾ ವರ್ಗಕ್ಕೂ ಪ್ರತ್ಯೇಕ ಪಂಕ್ತಿ ಸಾಲುಗಳಿದ್ದವು. ದೇವತೆಗಳಿಗೇ ಒಂದು ಸಾಲು ಇದ್ದರೆ, ಋಷಿ-ಮುನಿಗಳಿಗೆ, ಸಿದ್ಧ ಪುರುಷರಿಗೆ, ಶಿವನ ಗಣಗಳಿಗೆ, ಚಂಡಿಯ ಗಣಗಳಿಗೆ, ಪರ್ವತರಾಜರಿಗೆ, ಹಿಮವಂತನ ರಾಜಧಾನಿಯ ಶ್ರೀಮಂತರು, ಪಂಡಿತರು, ಜನಸಾಮಾನ್ಯರಿಗೆ ಪಂಕ್ತಿ ಸಾಲುಗಳಿದ್ದವು.

ಆಗಮಿಸಿದ ಎಲ್ಲಾ ಅತಿಥಿ ಮಹೋದಯರಿಗೂ ರುಚಿಕರವಾದ ಭಕ್ಷ್ಯಭೋಜ್ಯಗಳನ್ನು ಬಡಿಸಿದ ನಂತರ, ಹಿಮವಂತ ಕೈಮುಗಿದುಕೊಂಡು ಎಲ್ಲರೂ ಊಟಮಾಡುವಂತೆ ಪ್ರಾರ್ಥಿಸಿಕೊಂಡ. ಶಿವ ಮೊದಲಿಗೆ ಊಟ ಮಾಡಲು ಪ್ರಾರಂಭಿಸಿದ ನಂತರ ಎಲ್ಲರೂ ಊಟ ಮಾಡಲು ಆರಂಭಿಸಿದರು. ಆಹ್ವಾನಿತ ಗಣ್ಯರೆಲ್ಲರೂ ಪಂಕ್ತಿಯಲ್ಲಿ ಕುಳಿತು ಆನಂದದಿಂದ, ವಿನೋದವಾಗಿ ಮಾತನಾಡುತ್ತಾ ಭೋಜನ ಮಾಡಿದರು. ಶಿವನ ದೇವ ಪರಿವಾರವಲ್ಲದೆ, ಅವನ ಗಣ ಪರಿವಾರವಾದ ನಂದಿ, ಭೃಂಗಿ, ವೀರಭದ್ರ, ಭೈರವ ಮತ್ತಿತರ ಗಣಗಳು ಸಹ ಆಗಮಿಸಿ ಮಹಾಭೋಜನ ಸ್ವೀಕರಿಸಿದರು. ವಿಷ್ಣು, ಬ್ರಹ್ಮ, ಪರಮೇಶ್ವರ, ಇಂದ್ರಾದಿ ದೇವತೆಗಳ, ಲೋಕಪಾಲಕರೂ ಅನೇಕ ವಿಧವಾದ ವೇಷಭೂಷಣಗಳಿಂದ ಅಲಂಕೃತರಾಗಿ ಬಂದು, ಹಾಸ್ಯವಾದ ಮಾತುಗಳನ್ನಾಡುತ್ತಾ ಊಟಮಾಡಿದರು. ವಸಿಷ್ಠ, ಭೃಗು ಮೊದಲಾದ ಮುನಿಗಳೆಲ್ಲರೂ ತಮ್ಮ ಎಂದಿನ ಪಥ್ಯಾಹಾರವನ್ನು ಮರೆತು, ಪುಷ್ಕಳವಾದ ಭಕ್ಷ್ಯಭೋಜ್ಯಗಳನ್ನು ಸಂತೋಷದಿಂದ ಸ್ವೀಕರಿಸಿದರು. ಚಂಡಿಯ ಗಣದವರು ಸಹ ತಮ್ಮ ಉಗ್ರಭಾವ ತೊರೆದು, ಉಲ್ಲಾಸಕರ ಭಾವದಲ್ಲಿ ನಾನಾ ವಿಧವಾದ ಹಾಸ್ಯ ಸಲ್ಲಾಪಗಳ ಮಾತನಾಡುತ್ತಾ ಊಟಮಾಡಿದರು.

ADVERTISEMENT

ನಂತರ ಎಲ್ಲರೂ ವಿಶ್ರಾಂತಿಯನ್ನು ಪಡೆಯಲು ತಮಗಾಗಿ ನಿರ್ಮಿಸಿದ್ದ ಬಿಡಾರಗಳಿಗೆ ಆನಂದದಿಂದ ತೆರಳಿದರು. ಭೋಜನ ಕೂಟದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪಂಕ್ತಿ ಇತ್ತು. ಆಗಮಿಸಿದ ಸ್ತ್ರೀಯರೆಲ್ಲರು ತೃಪ್ತಿಯಿಂದ ಊಟ ಮಾಡಿದ ನಂತರ ಮೇನಾದೇವಿಯ ಅನುಜ್ಞೆ ಪಡೆದು, ಅವರಿಗಾಗಿ ನಿರ್ಮಿಸಿದ್ದ ಆವಾಸ ಎಂಬ ಮನೆಗೆ ತೆರಳಿ ವಿಶ್ರಮಿಸಿದರು.

ಶಿವನು ಸಹ ಊಟವಾದ ನಂತರ ಪಾರ್ವತೀ ತಾಯಿ ಮೇನಾದೇವಿ ಆಣತಿಯಂತೆ ಅರಮನೆ ಸಖಿಯರು ಸಿದ್ಧಪಡಿಸಿದ್ದ ವಾಸಮಂದಿರಕ್ಕೆ ಬಂದ. ಅಲ್ಲಿದ್ದ ರತ್ನಸಿಂಹಾಸನದಲ್ಲಿ ಕುಳಿತು ಆ ವಾಸಮಂದಿರವನ್ನು ಅತ್ಯಾನಂದಭರಿತನಾಗಿ ನೋಡಿದ. ವಾಸಮಂದಿರದ ಪ್ರತಿ ಕಂಬಗಳಲ್ಲು ರತ್ನದಿಂದ ಮಾಡಿದ್ದ ದೀಪಗಳು ಉರಿಯುತ್ತಿದ್ದವು. ಅದರ ಬೆಳಕಿನಿಂದ ಮಂದಿರವು ಜಗಮಗಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.