ADVERTISEMENT

ವೇದವ್ಯಾಸರ ಶಿವಪುರಾಣಸಾರ | ದಾನದಿಂದಾಗುವ ಫಲಗಳು

ಭಾಗ-44

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 13 ಫೆಬ್ರುವರಿ 2022, 20:15 IST
Last Updated 13 ಫೆಬ್ರುವರಿ 2022, 20:15 IST
   

ಯಾಚಕನು ಕೇಳಿದಮೇಲೆ ದಾನಮಾಡಿದರೆ ಅರ್ಧಫಲ ಸಿಗುತ್ತೆ. ಸೇವಕನಿಗೆ ದಾನಮಾಡಿದರೆ ಕಾಲುಭಾಗದ ಫಲ ಲಭಿಸುತ್ತೆ ಅಂತ ಸೂತಮುನಿ ದಾನದ ಫಲಗಳ ವಿವರವನ್ನು ತಿಳಿಸುತ್ತಾನೆ. ಜಿತೇಂದ್ರಿಯನೂ, ಸದುಪದೇಶವನ್ನು ಮಾಡುವ ಶ್ರೇಷ್ಠ ವ್ಯಕ್ತಿಯನ್ನು ಯೋಗ್ಯವಾದ ಕಾಲದಲ್ಲಿ ಕರೆದು ಅವನು ಅಪೇಕ್ಷಿಸುವ ವಸ್ತುವನ್ನು ದಾನಮಾಡಿದರೆ ಸಂಪೂರ್ಣವಾದ ಫಲವು ಲಭಿಸುವುದು. ದೀನವಾದ ವೃತ್ತಿಯಿಂದ ದರಿದ್ರನಾದವನಿಗೆ ಧನವನ್ನು ಕೊಟ್ಟು, ಹತ್ತು ವರ್ಷ ಪರ್ಯಂತ ಜೀವನವನ್ನು ಕಲ್ಪಿಸಿದರೆ ಭೂಲೋಕದಲ್ಲಿ ಸುಖವಾದ ಭೋಗವು ಲಭಿಸುವುದು ಎನ್ನುತ್ತಾನೆ ಸೂತಮುನಿ.

ವೇದಾಧ್ಯಯಿಗೆ ಹತ್ತು ವರ್ಷ ಜೀವನವನ್ನು ಕಲ್ಪಿಸಿದರೆ ಭೋಗ ಲಭಿಸುತ್ತದೆ. ಗಾಯತ್ರೀಜಪವನ್ನು ಮಾಡುವವನಿಗೆ ದಾನಮಾಡಿದರೆ, ಸತ್ಯಲೋಕದಲ್ಲಿ ಭೋಗ ಸಿಗುತ್ತದೆ. ವಿಷ್ಣುಭಕ್ತನಾದವನಿಗೆ ದಾನಮಾಡಿದರೆ ವೈಕುಂಠಲೋಕವೂ, ಶಿವಭಕ್ತನಾದವನಿಗೆ ದಾನಮಾಡಿದರೆ ಕೈಲಾಸವೂ ದೊರೆಯುತ್ತೆ. ಎಲ್ಲಾ ಲೋಕಗಳಲ್ಲೂ ಭೋಗವನ್ನ ಅನುಭವಿಸಬೇಕಾದರೆ ಎಲ್ಲಾ ದೇವರ ಆರಾಧಕರಿಗೆ ದಾನಮಾಡಬೇಕು. ಭಾನುವಾರದಂದು ಹತ್ತು ಅಂಗಗಳೊಡನೆ ಅನ್ನವನ್ನು ದಾನಮಾಡಿದರೆ, ಮುಂದಿನ ಜನ್ಮದಲ್ಲಿ ಹತ್ತು ವರ್ಷಗಳವರೆಗೆ ಆರೋಗ್ಯ ಲಭಿಸುವುದು. ಈ ಅಂಗಗಳು – ಅತಿಥಿಗಳಿಗೆ ಗೌರವ ಬಹುಮಾನ ಕೊಡುವುದು. ಅಭ್ಯಂಜನ ಮಾಡಿಸುವುದು. ಪಾದಸೇವೆ ಮಾಡುವುದು. ವಾಸವನ್ನು ಕಲ್ಪಿಸುವುದು. ಗಂಧಾದಿಗಳಿಂದ ಅರ್ಚಿಸುವುದು. ತುಪ್ಪ-ಭಕ್ಷ್ಯಗಳೊಡನೆ ಷಡ್ರಸಮಯವಾದ ವ್ಯಂಜನವನ್ನು ಬಡಿಸಿ ಊಟ ಮಾಡಿಸುವುದು. ದಕ್ಷಿಣೆ, ತಾಂಬೂಲ, ನಮಸ್ಕಾರ, ಬೀಳ್ಕೊಟ್ಟು ಕಳುಹಿಸಿಕೊಡುವುದು.

ಸೋಮವಾರ ಮುಂತಾದ ವಾರಗಳಲ್ಲಿ ಅನ್ನದಾನ ಮಾಡಿದರೆ ಪ್ರತಿ ಜನ್ಮದಲ್ಲಿ ಇಚ್ಛಾಫಲವನ್ನು ಪಡೆವರು. ಏಳು ವಾರಗಳಲ್ಲಿಯೂ ಹತ್ತು ಜನ ಅತಿಥಿಗಳಿಗೆ ಹತ್ತು ಅಂಗಗಳೊಡನೆ ಅನ್ನದಾನವನ್ನು ಮಾಡಿದರೆ, ನೂರು ವರ್ಷಗಳವರೆಗೆ ಆರೋಗ್ಯಫಲ ಪಡೆಯುವರು. ಭಾನುವಾರದಂದು ನೂರು ಜನರಿಗೆ ಅನ್ನದಾನವನ್ನು ಮಾಡಿದರೆ ಶಿವಲೋಕದಲ್ಲಿ ಸಾವಿರ ವರ್ಷಗಳವರೆಗೆ ವಾಸವಾಗಿರುವ ಫಲ ದೊರೆಯುವುದು; ಗಾಯತ್ರೀಜಪದಿಂದ ಪರಿಶುದ್ಧರಾದ ಸಾವಿರ ಜನರಿಗೆ ಅನ್ನದಾನ ಮಾಡಿದರೆ ಸತ್ಯಲೋಕದಲ್ಲಿ ಆರೋಗ್ಯ ಮೊದಲಾದ ಫಲಗಳನ್ನು ಪಡೆಯಬಹುದು.

ವಿದ್ಯೆಯನ್ನಪೇಕ್ಷಿಸುವವರು ಬ್ರಹ್ಮಬುದ್ಧಿಯಿಂದ ಬಾಲಕರಿಗೆ ಅನ್ನವನ್ನೂ, ಪುತ್ರ ಮತ್ತು ಕಾಮವನ್ನಪೇಕ್ಷಿಸುವವರು ಯುವಕರಿಗೆ ವಿಷ್ಣುಬುದ್ಧಿಯಿಂದ ಅನ್ನವನ್ನೂ ದಾನಮಾಡಬೇಕು. ಜ್ಞಾನವನ್ನಪೇಕ್ಷಿಸುವವರು ರುದ್ರಬುದ್ಧಿಯಿಂದ ವೃದ್ಧರಿಗೆ ಅನ್ನದಾನ ಮಾಡಬೇಕು. ಸದ್ಬುದ್ಧಿಯನ್ನು ಅಪೇಕ್ಷಿಸುವವರು ಸರಸ್ವತೀಬುದ್ಧಿಯಿಂದ ಕನ್ಯೆಯರಿಗೆ ಅನ್ನದಾನ ಮಾಡಬೇಕು. ಭೋಗವನ್ನಪೇಕ್ಷಿಸುವವರು ಲಕ್ಷ್ಮೀ ಬುದ್ಧಿಯಿಂದ ತರುಣಿಯರಿಗೆ ಅನ್ನದಾನ ಮಾಡಬೇಕು. ಆತ್ಮಸ್ವರೂಪವನ್ನ ಅಪೇಕ್ಷಿಸುವವರು ಪಾರ್ವತೀಬುದ್ಧಿಯಿಂದ ವೃದ್ಧ ಸುಮಂಗಲಿಯರಿಗೆ ಅನ್ನದಾನ ಮಾಡಬೇಕು.

ಶಿಲಾವೃತ್ತಿ, ಉಪಾದಾನ ಅಂದರೆ, ನಿತ್ಯಯಾತ್ರೆ, ಗುರುದಕ್ಷಿಣೆ ಇವುಗಳಿಂದ ಸಂಪಾದಿಸಿದ ಧನವು ಪರಿಶುದ್ಧವಾದುದು. ಅದು ಸಂಪೂರ್ಣ ಫಲವನ್ನುಂಟುಮಾಡುವುದು. ದಾನವನ್ನು ತೆಗೆದುಕೊಂಡು ಸಂಪಾದಿಸಿದ ದ್ರವ್ಯವು ಮಧ್ಯಮವಾದುದು. ವ್ಯವಸಾಯದ ವ್ಯಾಪಾರದಿಂದ ಸಂಪಾದಿಸಿದ ಧನವು ಅಧಮವಾದುದು. ಕ್ಷತ್ರಿಯರು ಪರಾಕ್ರಮದಿಂದ, ವ್ಯಾಪಾರಿಯೂ ವ್ಯಾಪಾರದಿಂದ, ಶ್ರಮಿಕ ಕೂಲಿಯಿಂದ ಸಂಪಾದಿಸಿದ ಧನವೂ ಉತ್ತಮವಾದುದು.

ADVERTISEMENT

ಹನ್ನೆರಡು ವಸ್ತುಗಳನ್ನು ಎಲ್ಲಾ ಹನ್ನೆರಡು ಮಾಸಗಳಲ್ಲಿ ದಾನ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುವುದು. ಈ ಹನ್ನೆರಡು ದಾನಗಳನ್ನೂ ಒಟ್ಟಿಗೆ ಮಾಡಬಹುದು. ಆ ಹನ್ನೆರಡು ದಾನದ ವಸ್ತುಗಳೆಂದರೆ ಹಸು, ಭೂಮಿ, ಎಳ್ಳು, ಸುವರ್ಣ, ತುಪ್ಪ, ವಸ್ತ್ರ, ಧಾನ್ಯ, ಬೆಲ್ಲ, ಬೆಳ್ಳಿ, ಉಪ್ಪು, ಕುಂಬಳಕಾಯಿ, ಗೋದಾನ. ದಾನಮಾಡಿದ ಹಸುಗಳ ಹಾಲು, ಮೊಸರು, ತುಪ್ಪದಿಂದ ಕಾಯಿಕ, ವಾಚಿಕ, ಮಾನಸಿಕ ಪಾಪಗಳು ನಾಶವಾಗುವುವು. ಹಾಲು, ಮೊಸರು, ತುಪ್ಪಗಳು ದಾತೃವಿನ ಮನೆಯಲ್ಲಿ ಅಭಿವೃದ್ಧಿಗೊಳ್ಳುವುದು. ಭೂದಾನದಿಂದ ಇಹಪರಜನ್ಮಗಳಲ್ಲಿ ಪ್ರತಿಷ್ಠೆಯು ಲಭಿಸುವುದು. ತಿಲದಾನದಿಂದ ಬಲವು ಬರುವುದು. ಅಪಮೃತ್ಯುವು ನಾಶವಾಗುವುದು. ಸುವರ್ಣದಾನದಿಂದ ಜಾಠರಾಗ್ನಿಗೆ ವೃದ್ಧಿಯೂ, ವೀರ್ಯಸಾಮರ್ಥ್ಯವೂ ಹೆಚ್ಚುವುದು. ಆಜ್ಯದಾನದಿಂದ ಪುಷ್ಟಿಯೂ, ವಸ್ತ್ರದಾನದಿಂದ ಆಯುಷ್ಯವೂ ಹೆಚ್ಚುವುದು. ಧಾನ್ಯದಾನದಿಂದ ಅನ್ನ ಸಮೃದ್ಧಿಯಾಗುವುದು. ಬೆಲ್ಲವನ್ನು ದಾನಮಾಡಿದರೆ ಮಧುರವಾದ ಆಹಾರವು ಲಭಿಸುವುದು. ಬೆಳ್ಳಿಯ ದಾನದಿಂದ ತೇಜಸ್ಸು ಅಭಿವೃದ್ಧಿಯಾಗುವುದು. ಲವಣದಾನದಿಂದ ಷಡ್ರಸಗಳು ವೃದ್ಧಿಗೊಳ್ಳುವುವು ಅಂತ ಸೂತಮುನಿಯು ಹೇಳುವುದರೊಂದಿಗೆ ಹದಿನೈದನೇ ಅಧ್ಯಾಯ ಮುಕ್ತಾಯಗೊಳ್ಳುತ್ತೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.