ADVERTISEMENT

ವೇದವ್ಯಾಸರ ಶಿವಪುರಾಣಸಾರ: ಜಗತ್ತಿನ ಸತ್ಯ ತಿಳಿಸಿದ ಜಗನ್ನಾಥ

ಭಾಗ 241

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 4 ಅಕ್ಟೋಬರ್ 2022, 0:00 IST
Last Updated 4 ಅಕ್ಟೋಬರ್ 2022, 0:00 IST
ವೇದವ್ಯಾಸರ ಶಿವಪುರಾಣಸಾರ: ಜಗತ್ತಿನ ಸತ್ಯ ತಿಳಿಸಿದ ಜಗನ್ನಾಥ
ವೇದವ್ಯಾಸರ ಶಿವಪುರಾಣಸಾರ: ಜಗತ್ತಿನ ಸತ್ಯ ತಿಳಿಸಿದ ಜಗನ್ನಾಥ   

ಗಿರಿಜೆ ಹೇಳಿದ್ದನ್ನು ಕೇಳಿದ ಸದಾಶಿವ ಪ್ರೀತಿಯಿಂದ ಹೇಳಿದ, ‘ಎಲೈ ಪಾರ್ವತೀದೇವಿ, ನಿನ್ನ ಮಾತಿನಂತೆ ವಿವಾಹಸಂಬಂಧವಾದ ಮಂಗಳ ಕಾರ್ಯಗಳೆಲ್ಲವೂ ವಿಧಿವತ್ತಾಗಿ ನಡೆಯುವಂತೆ ಮಾಡುತ್ತೇನೆ. ಆದರೆ, ಜಗತ್ತಿನ ಸತ್ಯ ನಿನ್ನ ಗಮನಕ್ಕೆ ತರುತ್ತೇನೆ ಕೇಳು. ಬ್ರಹ್ಮ ಸೇರಿದಂತೆ ಎಲ್ಲಾ ದೇವತೆಗಳು, ಮಾನವರು, ಪ್ರಾಣಿಗಳು ಜೀವರಹಿತವಾದ ಭೌತಿಕ ವಸ್ತುಗಳೆಲ್ಲವೂ ಅನಿತ್ಯವಾದವು, ಕಾಲಾನುಕಾಲಕ್ಕೆ ನಾಶವಾಗುವುವು.ಎಲೈ ದೇವಿ, ನಾನು ಓರ್ವನೇ ಪುರುಷನಾದರೂ, ಪ್ರಕೃತಿಯಾದ ನಿನ್ನ ಮಹಿಮೆಯಿಂದ ಅನೇಕ ರೂಪಗಳಿಂದ ಪ್ರಕಟವಾಗುತ್ತೇನೆ. ನಿರ್ಗುಣನಾದರೂ ಸಗುಣನಾದ ಪರಮೇಶ್ವರನಾಗಿದ್ದೇನೆ. ನಾನು ಸ್ವಪ್ರಕಾಶದಿಂದ ಬೆಳಗುವವನಾದರೂ, ಪರಪ್ರಕಾಶವುಳ್ಳವನಾಗಿದ್ದೇನೆ. ನಿನ್ನಿಂದ ನಾನು ಸ್ವತಂತ್ರನೂ ಪರತಂತ್ರನೂ ಆಗಿರುವೆ. ನೀನು ಜಗತ್ತಿನ ನಿರ್ಮಾಣಕಾರಳು, ಪರಿಣಾಮಕಾರಳು. ಆದಿಮಾಯೆಯಾದ ನಿನ್ನಿಂದಲೇ ಜಗತ್ತು ಜೀವವೈವಿಧ್ಯದಿಂದ ಸಾಗುತ್ತಿದೆ. ನಿನ್ನ ಕರ್ತೃತ್ವ ಶಕ್ತಿ ಈ ಜಗತ್ತನ್ನು ಪೊರೆಯುತ್ತಿದೆ.

‘ವಸ್ತುತಃ ಕಾಣುವ ಜಗತ್ತೆಲ್ಲವೂ ನಿಜವಲ್ಲ. ಮಾಯಾಮಯವಾದ ಈ ಜಗತ್ತು ಮಿಥ್ಯವಾದುದು. ಪರಮಾತ್ಮವಸ್ತುವೊಂದೇ ಸತ್ಯವಾದುದು. ಈ ಜಗತ್ತಿನ ಸತ್ಯವನ್ನು ಸಾಮಾನ್ಯರು ಅರ್ಥೈಸಲಾರರು. ಎಲ್ಲೆಲ್ಲೂ ಪರಮಾತ್ಮವಸ್ತುವನ್ನೇ ನೋಡುವಂತಹ ಅಸಾಮಾನ್ಯ ಜ್ಞಾನಿಗಳಷ್ಟೇ ತಿಳಿಯಬಲ್ಲರು. ಆದರೆ ಮಾಯಾಮಯವಾದ ಗುಣಗಳಿಂದ ಕೂಡಿದ ಆತ್ಮನು, ತನ್ನ ತಪೋಸಾಧನೆಯಿಂದ ಮಾತ್ರ ಮಾಯಾಭ್ರಮೆ ಕಳೆದುಕೊಳ್ಳುತ್ತಾನೆ. ಮಾಯೆಯಿಂದ ಹೊರಬಂದ ಸಾಮಾನ್ಯ ಆತ್ಮನೂ, ಪರಮಾತ್ಮನಾಗಿ, ಜಗತ್ಕಾರ್ಯಗಳನ್ನು ಮಾಡುತ್ತಾನೆ. ತಪೋಸಿದ್ಧಿಯಿಂದ ಮಾಯಾ ಭ್ರಮೆ ಕಳೆದುಕೊಂಡಿರುವ ನಮಗೆ ಗ್ರಹಗಳಾವುದು? ಅದರ ಗ್ರಹಗತಿ ದೋಷಗಳಾವುದು? ಅದರ ಪರಿಣಾಮಗಳು ನಮಗೆಲ್ಲಿ ತಟ್ಟುವುದು? ಮಂಗಳಾರ್ಥವಾಗಿ ನೀನು ಹೇಳಿದ ವಿಧಿಪೂರ್ವಕ ಮದುವೆ ಕಾರ್ಯವಾದರೂ ನಮಗೆಲ್ಲಿ ಅಂಟುವುದು? ನಾವೀರ್ವರೂ ಭಕ್ತರಿಗಾಗಿ ಗುಣಕರ್ಮಗಳ ಭೇದದಿಂದ ಬೇರೆಬೇರೆಯಾಗಿ ಈ ಜಗತ್ತಿನಲ್ಲಿ ಅವಿರ್ಭವಿಸಿರುವೆವು ಅಷ್ಟೆ. ನೀನು ಸೂಕ್ಷ್ಮಪ್ರಕೃತಿಯು. ನಿನ್ನಲ್ಲಿ ರಜಸ್ಸು, ತಮಸ್ಸು, ಸತ್ವ ಎಂಬ ಮೂರು ಗುಣಗಳಿರುವುವು. ಸದಾ ನೀನು ಕಾರ್ಯವನ್ನು ಮಾಡುತ್ತಿರುವೆ. ಸಗುಣರೂಪಳೂ ಮತ್ತು ನಿರ್ಗುಣರೂಪಳೂ ಆಗಿರುವೆ. ನಾನು ಎಲ್ಲಾ ಪ್ರಾಣಿಗಳಿಗೂ ಆತ್ಮನು. ಕಾಮ-ಕ್ರೋಧಗಳ ವಿಕಾರಗಳು ನನಗಿಲ್ಲ. ಭಕ್ತರಿಗಾಗಿ ಲೀಲಾವಿಗ್ರಹವನ್ನು ಧರಿಸಿರುವೆ.’

ಶಂಕರನ ಮಾತು ಕೇಳಿ ಗಿರಿಜೆ ಭಕ್ತಿಯಿಂದ ನಮಸ್ಕರಿಸುತ್ತಾ ಹೇಳಿದಳು, ‘‘ಓ ದೇವ, ನೀನು ಆತ್ಮನು. ನಾನು ಪ್ರಕೃತಿಯು. ಇದರಲ್ಲಿ ಸಂಶಯವಿಲ್ಲ. ನಾವು ಸ್ವತಂತ್ರರಾದರೂ ಭಕ್ತಪರಾಧೀನರು. ನಿರ್ಗುಣರಾದರೂ ಭಕ್ತರಿಗಾಗಿ ಸಗುಣರಾಗುವೆವು. ಆದ್ದರಿಂದ ಲೋಕಾರೂಢಿಯಂತೆ ನಮ್ಮ ವಿವಾಹಕಾರ್ಯ ನಡೆಯಬೇಕು. ಇದಕ್ಕಾಗಿ ಹಿಮವಂತನನ್ನು ನನಗಾಗಿ ನೀನು ಯಾಚಿಸಿ, ನಮ್ಮ ಮದುವೆಯ ಕಾರ್ಯ ಸುಗಮಗೊಳಿಸು’ ಎಂದು ಶಿವನಿಗೆ ಶಿರ ಬಾಗಿಸಿ ಪ್ರಾರ್ಥಿಸಿದಳು.

ADVERTISEMENT

ಮಹೇಶ್ವರ ನಸುನಗುತ್ತಾ, ‘ನಾವು ಲೋಕಕ್ಕೆ ಅತೀತರಾದರೂ ನಾವು ಲೋಕಾರೂಢಿಯಂತೆ ನಡೆಯುವುದು ಸರಿಯಾದ ಕ್ರಮ. ನಿನ್ನ ಮಾತಿನಂತೆಯೇ ಆಗಲಿ’ ಎಂದು ಸಂತೋಷದಿಂದ ಅಂಗೀಕರಿಸಿ, ಅಲ್ಲಿಂದ ಅಂತರ್ಧಾನನಾಗಿ ಕೈಲಾಸಕ್ಕೆ ಬಂದ. ಅಲ್ಲಿ ನಂದಿ ಮೊದಲಾದ ಗಣಗಳಿಗೆ ನಡೆದ ಸಮಾಚಾರವೆಲ್ಲವನ್ನೂ ತಿಳಿಸಿದ. ಶಿವ-ಪಾರ್ವತಿ ವಿವಾಹವಾಗುವುದನ್ನು ತಿಳಿದ ಭೈರವ ಮೊದಲಾದ ಗಣಗಳು ಹರ್ಷೋದ್ಗಾರ ಮಾಡಿದವು ಎಂಬಲ್ಲಿಗೆ ಪಾರ್ವತೀಖಂಡದ ಇಪ್ಪತ್ತೊಂಬತ್ತನೆಯ ಅಧ್ಯಾಯ ಮುಗಿಯುತ್ತದೆ.⇒l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.