ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕಲ್ಯಾಣಕ್ಕೆ ಸಪ್ತರ್ಷಿಗಳ ರಾಯಭಾರ

ಭಾಗ 246

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 10 ಅಕ್ಟೋಬರ್ 2022, 19:30 IST
Last Updated 10 ಅಕ್ಟೋಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಬ್ರಾಹ್ಮಣ ವೇಷಧಾರಿ ಶಿವನ ಮಾತುಗಳನ್ನು ಕೇಳಿ ಮೇನಾದೇವಿಗೆ ಆತಂಕವಾಗುತ್ತದೆ. ಅವಳು ಗಂಡನಿಗೆ 'ಈ ಬ್ರಾಹ್ಮಣನಮಾತು ಕೇಳಿದರೆ ಭಯವಾಗುತ್ತಿದೆ. ಶಿವ ನಮ್ಮ ಮಗಳಿಗೆ ಯೋಗ್ಯನಾದ ವರನಲ್ಲ ಎಂದು ತಿಳಿದ ನಂತರವೂ ಮದುವೆ ಮಾಡಿಕೊಡುವುದು ಸರಿಯಲ್ಲ. ಇಷ್ಟೆಲ್ಲಾ ತಿಳಿದ ಮೇಲೂ ಕುರೂಪಿಯೂ ದುಶ್ಶೀಲನೂ ಆದಂತಹ ರುದ್ರನಿಗೆ ಸುಲಕ್ಷಣವತಿಯಾದ ಪುತ್ರಿಯನ್ನು ಹೇಗೆ ಕೊಡಲಿ? ನನ್ನ ಮಾತನ್ನು ನೀನು ಕೇಳದೇ ಹೋದರೆ, ಖಂಡಿತ ಪ್ರಾಣ ತ್ಯಾಗ ಮಾಡುವೆ’ ಎಂದು ಕೋಪದಿಂದ ಹೇಳಿದಳು.

ಪತ್ನಿಯ ಹಟ ಕಂಡು ಹಿಮವಂತ ಕಂಗಾಲಾದ. ಮೇನಾದೇವಿಯ ಮಾತು ಕೇಳಿದರೆ ಪಾರ್ವತಿ ಮುನಿಸಿಕೊಳ್ಳುತ್ತಾಳೆ, ಪಾರ್ವತಿ ಮಾತು ಕೇಳಿದರೆ ಮೇನಾದೇವಿ ಮುನಿಸಿಕೊಳ್ಳುತ್ತಾಳೆ – ಎಂದು ಉಭಯ ಸಂಕಟಕ್ಕೆ ಸಿಲುಕಿದ. ಅಂತಿಮವಾಗಿ ಪತ್ನಿಯ ಹಠದಲ್ಲಿ ಮಗಳು ಪಾರ್ವತಿಯ ಹಿತವಿದೆ ಎಂದು ಭಾವಿಸಿ, ಮದುವೆ ಕಾರ್ಯ ನಿಲ್ಲಿಸಿದ.

ಅತ್ತ ಶಿವ ಕೈಲಾಸಕ್ಕೆ ಹೋದ ನಂತರ ತನ್ನ ಕೃತ್ಯಕ್ಕೆ ವ್ಯಥಿಸಿದ. ದೇವತೆಗಳ ಕುಯುಕ್ತಿ ಗೊತ್ತಾಗಿಯೂ, ಅವರ ಮಾತಿನಂತೆ ಮಾರುವೇಷದಲ್ಲಿ ಹೋಗಿ ಹಿಮವಂತ ಮತ್ತು ಮೇನಾದೇವಿ ದಂಪತಿ ಮನಸ್ಸು ಕೆಡಿಸಿದೆ. ತಪ್ಪು ತಿಳಿವಳಿಕೆಯಿಂದ ಮದುವೆ ಕಾರ್ಯ ನಿಲ್ಲಿಸಿರುವ ಅವರಿಗೆ ನಿಜಸ್ಥಿತಿಯನ್ನು ತಿಳಿಸುವುದು ಹೇಗೆಂದು ಯೋಚಿಸಿದ. ಆಗ ಸಪ್ತರ್ಷಿಗಳ ನೆರವು ಪಡೆಯಲು ನಿರ್ಧರಿಸಿದ. ಸಪ್ತರ್ಷಿಗಳು ಶಂಕರನಲ್ಲಿಗೆ ಬಂದರು. ವಸಿಷ್ಠನೊಂದಿಗೆ ಪತ್ನಿ, ಅರುಂಧತಿಯೂ ಬಂದಳು.

ADVERTISEMENT

ಸಪ್ತರ್ಷಿಗಳು ‘ನಿನ್ನ ಸೇವಕರಾದ ನಮ್ಮನ್ನು ಕರೆಸಿದ ಕಾರಣವೇನು?‘ ಎಂದು ಕೇಳಿದರು. ಆಗ ಮಹೇಶ್ವರ ಹೇಳಿದ, ‘ಎಲೈ ಋಷಿಗಳಿರಾ, ನನ್ನ ಕಾರ್ಯವೆಲ್ಲವೂ ಲೋಕೋಪಕ್ಕಾರಕ್ಕಾಗಿ ಎಂಬುದು ನಿಮಗೆಲ್ಲ ತಿಳಿದಿದೆ. ನನ್ನ ಪ್ರಸಿದ್ಧವಾದ ಎಂಟು ಮೂರ್ತಿಗಳೂ ಪರೋಪಕ್ಕಾರಕ್ಕಾಗಿಯೇ ಇರುವುವು. ನನ್ನ ಸ್ವಾರ್ಥಕ್ಕಾಗಿ ಯಾವುದೂ ಇಲ್ಲ. ಪ್ರಸ್ತುತ ದುಷ್ಟನಾದ ತಾರಕಾಸುರನಿಂದ ದೇವತೆಗಳ ರಕ್ಷಿಸಲು ನಾನು ಪಾರ್ವತಿಯನ್ನು ಮದುವೆಯಾಗಲು ಇಚ್ಛಿಸಿದ್ದೇನೆ. ಆ ದೇವಿಯೂ ನನ್ನನ್ನೇ ಪತಿಯನ್ನಾಗಿ ಪಡೆಯಲು, ಮಹಾ ಮಹಾ ಮುನಿಗಳೂ ಮಾಡದಂತಹ ತಪವನ್ನು ಆಚರಿಸಿದ್ದಾಳೆ. ನನ್ನ ಆರಾಧಿಸುವ ಭಕ್ತರ ಇಷ್ಟಾರ್ಥ ನೆರವೇರಿಸುವುದು ನನ್ನ ಕರ್ತವ್ಯ. ಅದರಂತೆ ನಾನು ಪಾರ್ವತಿಯನ್ನು ಮದುವೆಯಾಗಲು ಒಪ್ಪಿದ್ದೆ. ಇದಕ್ಕೆ ಪಾರ್ವತಿಯ ಮಾತಾಪಿತೃಗಳಾದ ಮೇನಾದೇವಿ ಮತ್ತು ಹಿಮವಂತರು, ನನಗೆ ವೇದವಿಧಿಯಂತೆ ಮದುವೆಮಾಡಿಕೊಡಲು ಒಪ್ಪಿದ್ದರು. ಇದರ ಮಧ್ಯೆ ದೇವತೆಗಳ ಕೋರಿಕೆಯಂತೆ ಹಿಮವಂತನಿಗೆ ನನ್ನ ಮೇಲಿರುವ ಭಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿದೆ. ಇದಕ್ಕಾಗಿ ಬ್ರಾಹ್ಮಣನ ವೇಷದಿಂದ ಅವನ ಬಳಿಗೆ ಹೋಗಿ ಶಿವನಿಂದನೆ ಮಾಡಿದೆ. ಇದನ್ನು ಕೇಳಿದ ಮೇನಾದೇವಿ ಮತ್ತು ಹಿಮವಂತ ದಂಪತಿ ತುಂಬಾ ಹತಾಶರಾಗಿದ್ದಾರೆ. ಈಗ ಅವರು ತಮ್ಮ ಪುತ್ರಿಯನ್ನು ನನಗೆ ಮದುವೆ ಮಾಡಿಕೊಡಲು ಇಚ್ಛಿಸುತ್ತಿಲ್ಲ. ಆದುದರಿಂದ ನೀವು ಹಿಮವಂತನ ಮನೆಗೆ ಹೋಗಿ, ಮೇನಾದೇವಿ ಮತ್ತು ಹಿಮವಂತ ದಂಪತಿಗೆ ಸರಿಯಾದ ತಿಳಿವಳಿಕೆಯನ್ನ ನೀಡಿ. ವೇದಸಮಾನವಾದ ಮಾತಿನಿಂದ ಉಪದೇಶ ನೀಡಿ, ನಾನು ಪಾರ್ವತಿಯೊಂದಿಗೆ ವಿವಾಹವಾಗುವಂತೆ ಮಾಡಿ’ ಎಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.