ವಿಜಯನಗರ ಸ್ಥಾಪನಾಚಾರ್ಯ ವಿದ್ಯಾರಣ್ಯ ಯತಿಗಳ ಆರಾಧನೆಯನ್ನು ಜೂನ್ 30ರಂದು ಆಚರಿಸಲಾಗುತ್ತದೆ. 14ನೇ ಶತಮಾನದಲ್ಲಿ ಹರಿಹರರಾಯ ಮತ್ತು ಬುಕ್ಕ ರಾಯರಿಂದ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಯಿತು. ಅದ್ವೈತ ಪಂಥದ ವಿದ್ಯಾರಣ್ಯರು ಹಾಗೂ ಶೃಂಗೇರಿ ಪೀಠದ 12ನೇಮಠಾಧೀಶರು. ಶಿಥಿಲವಾಗುತ್ತಿದ್ದ ಹಿಂದೂ ಧರ್ಮದ ಪುನರುತ್ಥಾನಕ್ಕೆ ಶಕ್ತಿಯುತ ಹಿಂದೂ ರಾಜ್ಯದ ಅವಶ್ಯಕತೆ ಇದೆ ಎಂದು ಗಮನಿಸಿದ ವಿದ್ಯಾರಣ್ಯರು, ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಪಂಪಾ ಕ್ಷೇತ್ರದಲ್ಲಿ ಒಂದು ಪಟ್ಟಣ ಕಟ್ಟಿ ಹರಿಹರ, ಬುಕ್ಕರನ್ನು ಪ್ರೋತ್ಸಾಹಿಸಿ ತಮ್ಮ ಗುರುಗಳ ಹೆಸರಿನಲ್ಲಿ 1336ರಲ್ಲಿ ವಿದ್ಯಾನಗರವೆಂದು ಹೆಸರಿಟ್ಟರು. ಮುಂದೆ ಅದೇ ವಿಜಯನಗರ ಸಾಮ್ರಾಜ್ಯವೆಂದು ಪ್ರಸಿದ್ಧವಾಯಿತು.
ಶೃಂಗೇರಿ ಮಠದ ಗುರುಪರಂಪರೆಯಲ್ಲಿ ವಿದ್ಯಾರಣ್ಯರು 1331ರಲ್ಲಿ ಸನ್ಯಾಸ ಸ್ವೀಕರಿಸಿ ತಮ್ಮ ಗುರುಗಳಾದ ಭಾರತಿ ತೀರ್ಥರ ನಂತರ 1377ರಿಂದ1381ರವರೆಗೆ ಪೀಠಾಧಿಪತಿಗಳಾಗಿದ್ದರು.ವಿಜಯನಗರ ಅರಸರು ಶೃಂಗೇರಿ ಮಠಕ್ಕೆ ವಿಶೇಷ ಗೌರವ ನೀಡುತ್ತಿದ್ದರು. 13ನೇಶತಮಾನದಲ್ಲಿ ಕಂಪ್ಲಿ ರಾಜ್ಯದ (ಬಳ್ಳಾರಿ) ರಾಜಕುಮಾರನಾದ ಕುಮಾರ ರಾಮನೆಂಬುವನು ಪರನಾರಿ ಸಹೋದರ ಖ್ಯಾತಿ ಹೊಂದಿ ಕನ್ನಡಿಗರಲ್ಲಿ ಅಗ್ರಗಣ್ಯನಾಗಿದ್ದನು. ಅವನ ಆಶಯದಂತೆಅವನ ಮಾವನ ಮಕ್ಕಳಾದ ಹಕ್ಕ,ಬುಕ್ಕರು ಏಪ್ರಿಲ್ 18ರಂದುವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದರು. ಬೇಡ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಈ ಸಹೋದರರನ್ನು ಪ್ರೇರೇಪಿಸಿ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸನ್ನು ಸಾಕಾರಗೊಳಿಸಿದ ಕೀರ್ತಿ ವಿದ್ಯಾರಣ್ಯರಿಗೆ ಸಲ್ಲುತ್ತದೆ.
ಆ ಕಾಲದಲ್ಲಿದ್ದ ಪ್ರಸಿದ್ಧ ಗ್ರಂಥಕಾರ ಮಾಧವ ಮತ್ತು ವಿದ್ಯಾರಣ್ಯ ಒಬ್ಬರೇ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂಬುದೂ ವಿವಾದದ ವಿಷಯವಾಗಿದೆ. ಕೆಲವು ವಿದ್ವಾಂಸರು ವಿದ್ಯಾರಣ್ಯರೇ ಮಾಧವರೆಂದು ಒಪ್ಪುತ್ತಾರೆ. ಸಂಪ್ರದಾಯದಲ್ಲಿ ಪ್ರಸಿದ್ಧರಾಗಿರುವ ವಿದ್ಯಾರಣ್ಯರು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಯಾಗಿದ್ದರು. ಶಂಕರಾಚಾರ್ಯರ ನಂತರ ಅದ್ವೈತ ವೇದಾಂತಕ್ಕೆ ಪುಷ್ಟಿ ದೊರೆತದ್ದೂ ಇವರಿಂದಲೇ. ಅದ್ವೈತ ಪರಂಪರೆಯನ್ನು ಸ್ಪಷ್ಟವಾಗಿ ನಿರೂಪಿಸಿ ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾದರು. ಪಂಚದಶೀ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶ, ದರ್ಶನ ಹಾಗೂ ಸಂಗೀತ ಇತ್ಯಾದಿಗಳ ಬಗ್ಗೆ ಮಹತ್ವದ ಕೃತಿ ರಚಿಸಿದ ಪ್ರತಿಭಾನ್ವಿತ ವಿದ್ವಾಂಸರು ಇವರು.
ಸಂಗೀತಸಾರವೆಂಬ ಸಂಗೀತ ಗ್ರಂಥವನ್ನು ರಚಿಸಿ ಇದರಲ್ಲಿ ರಾಗಗಳ ಜನ್ಯ, ಜನಕ ರೀತಿಗಳ ಮೊದಲನೇ ನಿರೂಪಣೆ ಕಂಡು ಬರುವುದರಿಂದ ಇವರು ನಿರೂಪಿಸಿದ ದಕ್ಷಿಣಾದಿ ಸಂಗೀತ ರೀತಿಗೆ ಕರ್ನಾಟಕ ಸಂಗೀತವೆಂಬ ಹೆಸರು ಬಂದಿದೆ. ಇವರೇ ರಚಿಸಿದ ವಿವರಣಾ ಪ್ರಮೇಯ ಸಂಗ್ರಹ ಕೃತಿ ಮಹತ್ವದ್ದಾಗಿದೆ. ಕುವೆಂಪುರವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ನಾಡಗೀತೆಯಲ್ಲಿ ವಿದ್ಯಾರಣ್ಯರ ಹೆಸರು ಪ್ರಸ್ತಾಪಿಸಲ್ಪಟ್ಟಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಹೆಸರು ಸಾರ್ಥಕತೆ ಪಡೆದಿದೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಕರ್ನಾಟಕಕ್ಕೆ ಕೊಡುಗೆ ನೀಡಿದ ವಿದ್ಯಾರಣ್ಯರು 1386ರಲ್ಲಿದೈವಾಧೀನರಾದರೆಂದು ತಿಳಿದುಬರುತ್ತದೆ.
-ಆರ್.ಡಿ.ಕುಲಕರ್ಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.