ADVERTISEMENT

ತತ್ವಶಾಸ್ತ್ರದಿಂದ ಏನು ಪ್ರಯೋಜನ?

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:30 IST
Last Updated 18 ಅಕ್ಟೋಬರ್ 2019, 19:30 IST
   

ಪ್ರತಿಯೊಂದನ್ನು ಲಾಭದ ದೃಷ್ಟಿಯಿಂದ ನೋಡುವುದೇ ಇಂದಿನ ಮಾನಸಿಕತೆ. ನಮಗೆ ಲಾಭವಾಗದ ಯಾವುದೂ ಕೂಡ ನಮಗೆ ಬೇಡವಾಗಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ತತ್ವಶಾಸ್ತ್ರದ (ಫಿಲಾಸಫಿ) ಕಲಿಕೆ ಹೆಚ್ಚು ಕಡಿಮೆ ಮರೆಯಾಗಿದೆ. ಇದಕ್ಕೆ ಕಾರಣ – ತತ್ವಶಾಸ್ತ್ರದ ಕಲಿಕೆಯಿಂದ ನಮಗೆ ಏನು ಪ್ರಯೋಜನ – ಎಂಬ ಧೋರಣೆ ಸಮಾಜದಲ್ಲಿ ದಟ್ಟವಾಗಿ ಬೆಳದಿರುವುದು. ತತ್ವಶಾಸ್ತ್ರದ ಸಿದ್ಧಾಂತಗಳನ್ನು ನಮ್ಮ ಹೊಟ್ಟೆಯನ್ನಾಗಲೀ ಜೇಬನ್ನಾಗಲೀ ತುಂಬದು; ಅದು ಕೇವಲ ಗಾಳಿಯಲ್ಲಿ ತೇಲಾಡುವ ರಮ್ಯಕಲ್ಪನೆಯಷ್ಟೆ ಎಂಬ ಮಾನಸಿಕತೆ ಪ್ರಬಲವಾಗಿದೆ. ಹೀಗಾಗಿ ಪ್ರಪಂಚದ ಹಳೆಯ ವಿದ್ಯಾಶಾಖೆಯೊಂದು ಇಂದು ವಿದ್ಯಾರ್ಥಿಗಳಿಲ್ಲದೆ ಕೊರಗುತ್ತಿದೆ. ಆದರೆ ಎಲ್ಲ ವಿದ್ಯಾಶಾಖೆಗಳಿಗೂ ಮೂಲಭೂತವಾಗಿ ಬೇಕಾಗಿರುವಂಥಧ್ದು ‘ಫಿಲಾಸಫಿ’ಯೇ. ನಮ್ಮ ದೇಶದಲ್ಲಂತೂ ಇದನ್ನು ‘ದರ್ಶನ’ ಎಂದು ಕರೆದರು. ನಮ್ಮನ್ನು ನಾವು ಚೆನ್ನಾಗಿ ನೋಡಿಕೊಂಡಾಗಲೇ ನಮ್ಮ ಸುಖ–ದುಃಖ್ಳ ಮೂಲವನ್ನು ತಿಳಿಯಲು ಸಾಧ್ಯವಲ್ಲವೆ? ಹೀಗೆ ನಮ್ಮತನವನ್ನು ನಾವು ಕಂಡುಕೊಳ್ಳಲು ನೆರವಾಗುವುದೇ ತತ್ವಶಾಸ್ತ್ರ.

ಜಿ.ಕೆ. ಚಸ್ಟರ್ಟನ್ ’ಹಲ್ಲುನೋವಿಗೆ ತತ್ವಶಾಸ್ತ್ರ ಮದ್ದಲ್ಲ’ ಎಂದಿದ್ದರು. ಹಾಗೆಯೇ ‘Philosophy does not boil cabbage’ ಎನ್ನುವ ಮಾತೂ ಉಂಟು. ಎಂದರೆ ನಮ್ಮ ನಿತ್ಯಜೀವನಕ್ಕೆ ಫಿಲಾಸಫಿಯಿಂದ ಏನೂ ಪ್ರಯೋಜನ ಇಲ್ಲ ಎನ್ನುವುದು ಈ ಮಾತಿನ ಇಂಗಿತ. ನಮ್ಮ ಕಾಲದಲ್ಲಂತೂ ಯಾವುದೇ ವಿಷಯ ಇರಲಿ, ‘ಇದರಿಂದ ಏನು ಪ್ರಯೋಜನ’ ಎಂದು ಕೇಳುವುದು ಸಹಜವೇ ಆಗಿದೆ. ಇದಕ್ಕೂ ಹೆಚ್ಚಾಗಿ ‘ನನಗೇನು ಪ್ರಯೋಜನ’ ಎಂಬುದು ಇನ್ನೂ ಹೆಚ್ಚು ಕೇಳಿ ಬರುವ ಮಾತು.

ತತ್ವಶಾಸ್ತ್ರವೆನ್ನುವುದು ಅರಿವಿನ ತುಮುಲ ಎಂದು ಗ್ರೀಕರು ಗ್ರಹಿಸಿದ್ದು. ನಮ್ಮಲ್ಲಿ ತತ್ವವೆನ್ನುವುದು ಓದಿನ, ಕಲಿಕೆಯ ಅಥವಾ ಪಾಂಡಿತ್ಯದ ವಿಷಯವಷ್ಟೇ ಎಂದು ಪರಿಗಣಿಸಿಲ್ಲ. ಉಪನಿಷತ್ತಿನಲ್ಲಿ ಬರುವಂತೆ ನಾರದರು ಮುನಿ ಸನತ್ಕುಮಾರರಲ್ಲಿ ವಿದ್ಯೆಗಳನ್ನು ಕಲಿಯಲು ಬಂದು ವಿನಂತಿಸುವುದು ಹೀಗೆ: ’ಸಕಲ ವೇದಗಳನ್ನೂ ಬಲ್ಲೆ... ಆದರೆ, ನನ್ನ ನಾ ಅರೆಯೆನು’. ಹೀಗಾಗಿ ತನ್ನನ್ನು ತಾನು ತಿಳಿಯುವುದು ತತ್ವಶಾಸ್ತ್ರದ ತುತ್ತ ತುದಿಯಾಗಿ ಕಂಡುಬರುತ್ತದೆ.

ADVERTISEMENT

ಇದನ್ನೇ ಸಾಕ್ರೆಟೀಸ್ ಕೂಡ ’know thyself’ – ‘ನಿನ್ನನ್ನು ನೀನು ತಿಳಿ’ ಎಂದದ್ದು. ಶಂಕರಾಚಾರ್ಯರ ಶಿಷ್ಯರಾದ ಸುರೇಶ್ವರಾಚಾರ್ಯರು ’ ನಿಜವಾದ ಜ್ಞಾನವನ್ನು ಸತ್ಯವನ್ನು ತಿಳಿದವನು ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ, ಕಾರಣ ಅವು ಅರಿವಿನ ಪ್ರತಿಫಲಗಳೇ ಆಗಿರುತ್ತವೆ’ ಎಂದಿದ್ದಾರೆ. ನಮ್ಮ ಹೆಚ್ಚಿನ ದುಃಖ–ದುಮ್ಮಾನಗಳು ಅಜ್ಞಾನ ಅಥವಾ ಅನ್ಯಥಾಜ್ಞಾನದ ಕೂಸೇ ವಿನಾ ಅವುಗಳಿಗೆ ನೈಜ ಕಾರ್ಯ–ಕಾರಣ ಸಂಬಂಧವೋ ಅಥವಾ ಸ್ವತಃ ಭದ್ರಬುನಾದಿಯೋ ಇರುವಂಥವಲ್ಲ. ಅಲ್ಲಮಪ್ರಭುಗಳು ತಮ್ಮ ಬೆಡಗಿನ ವಚನದಲ್ಲಿ ಹೀಗೆ ಹೇಳುತ್ತಾರೆ:

ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು!
ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
ಮಾಬುದು ಗುಹೇಶ್ವರಾ.

ಇದರ ಅರ್ಥ: ಕಚ್ಚದೇ ಇರುವ ಚೇಳಿನ ನೋವಿನಿಂದ ನರಳುತ್ತಿರುವ ಮೂರು ಲೋಕಕ್ಕೆ, ಹುಟ್ಟದೇ ಇರುವ ಗಿಡದ ಎಲೆಯನ್ನು ಮುಟ್ಟದೆ ಹಚ್ಚಲು ಮಾಯುತ್ತದೆ.ಅಂದರೆ, ಕಾಲ್ಪನಿಕ ಕಾಯಿಲೆಗೆ ಇಲ್ಲದ ಮದ್ದೇ ರಾಮಬಾಣ!

ಗೌತಮಬುದ್ಧ ಕೂಡ ಜಗತ್ತಿನ ನಿತ್ಯ ನೋವು, ನಿರಂತರ ನರಕಕ್ಕೆ ಅರಿವಿನ ನಿವಾರಣೆಯನ್ನೇ ಸೂಚಿಸಿದ್ದು. ಇದು ಜೀವನದ ಅನುಭವದಿಂದಲೇ ಗೋಚರವಾಗುವಂಥದ್ದು. ಇದೊಂದು ಕಾಣ್ಕೆ. ಆನಂದವೆನ್ನುವುದು ಆದರ್ಶಕಾಲದಲ್ಲಿ ಉಂಟಾಗುವುದಲ್ಲ. ಬದುಕಿನ ಗೋಳು–ಜಂಜಾಟಗಳ ನಡುವೆಯೇ ಕಂಡುಕೊಳ್ಳು ವಂಥದ್ದು. ಎಳಯ ತೆಂಗಿನಕಾಯಿಯಲ್ಲಿ ತಿರುಳು ಚಿಪ್ಪಿಗೆ ಅಂಟಿಕೊಂಡಿರುತ್ತದೆ. ಆದರೆ, ಕೊಬ್ಬರಿಯಾದ ಮೇಲೆ ಚಿಪ್ಪಿನ ಒಳಗಿದ್ದರೂ ಬಿಡುಗಡೆಯಾಗಿರುತ್ತದೆ. ಹಾಗೆಯೇ ಈ ಜಗತ್ತಿನ ಪಾರಮಾರ್ಥಿಕ ಸತ್ಯವನ್ನು ತಿಳಿದ ಮೇಲೆ, ಇಲ್ಲಿಯೇ ಇಂದೇ ಸ್ವತಂತ್ರರಾಗಿ ನೈಜವಾದ ಬಿಡುಗಡೆ, ಆನಂದವನ್ನು ಪಡೆಯಲು ಸಾಧ್ಯವಾಗುವುದು. It is also said that you can be free the moment you want – ನಮಗೆ ಯಾವಾಗ ಬೇಕೋ ಆ ಕ್ಷಣವೇ ನಾವು ಬಿಡುಗಡೆಯನ್ನು ಪಡೆಯಬಹುದು. ಏಕೆಂದರೆ, ವಾಸ್ತವದಲ್ಲಿ ನಾವು ಬಂಧಿತರೇ ಅಲ್ಲ!

ಹೀಗಾಗಿ ತತ್ವಶಾಸ್ತ್ರದಿಂದ ನಾವು ನಮ್ಮ ಬದುಕಿನಲ್ಲಿ ಭಯ, ಮೋಹ, ಶೋಕದಿಂದ ಬಿಡುಗಡೆಯಾಗುವುದೇ ಪರಮ ಪ್ರಯೋಜನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.