ಶ್ರೀರಂಗಪಟ್ಟಣ: ತಾಲ್ಲೂಕು ಪಂಚಾಯಿತಿ ಅಡಿಯಲ್ಲಿ ಬರುವ 21 ಇಲಾಖೆಗಳಲ್ಲಿಯೂ ಅಂಗವಿಕಲರಿಗೆ ಕಡ್ಡಾಯವಾಗಿ ಶೇ 3 ಅನುದಾನ ಮೀಸಲಿಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಿರ್ಮಿತಾ ಲೋಕೇಶ್ ತಾಕೀತು ಮಾಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಸೋಮವಾರ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಅಂಗವಿಕಲ ಮಕ್ಕಳಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2011-12ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಅಂಗವಿಕಲರಿಗೆ ಶೇ 3 ಅನುದಾನ ನೀಡಲಾಗಿದೆ. 2012- 13ನೇ ಸಾಲಿನಲ್ಲಿ ಕೂಡ ನೆರವು ಒದಗಿಸಲಾಗುತ್ತದೆ. ಗ್ರಾಮ ಪಂಚಾಯಿತಿಗಳು ಕೂಡ ಅಂಗವಿಕಲರಿಗೆ ಅನುದಾನ ಮೀಸಲಿಡಬೇಕು. ಸರ್ಕಾರದ ಸವಲತ್ತುಗಳನ್ನು ವಿತರಿಸುವಾಗ ಅಂಗವಿಕಲರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಶಿಬಿರದಲ್ಲಿ 150 ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು. ಬೆಂಗಳೂರಿನ ಸ್ಕಂದ ಸಂಸ್ಥೆಯ ವೈದ್ಯರು ತಪಾಸಣೆ ನಡೆಸಿ ಪೋಷಕರು ಹಾಗೂ ಶಿಕ್ಷಕರಿಗೆ ಸಲಹೆ ನೀಡಿದರು. 11 ಕಲಿಕಾ ಕಿಟ್, 4 ವೀಲ್‌ಚೇರ್, 7 ಶ್ರವಣ ಸಾಧನ, ಸಿಪಿ ಸ್ಟ್ಯಾಂಡ್, ಟ್ರೈಸೈಕಲ್ ಇತರ ಪರಿಕರಗಳನ್ನು ವಿತರಿಸಲಾಯಿತು.
ಶಿಕ್ಷಕ ಶಿಕ್ಷಕೇತರರ ಸಂಘದ ಅಧ್ಯಕ್ಷ ಎನ್.ಕೆ.ನಂಜಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಹದೇವಸ್ವಾಮಿ, ಸಿ.ಜೆ.ಶ್ರೀನಿವಾಸ್ ಮಾತನಾಡಿದರು.
ಸಿದ್ದಲಿಂಗು, ಶಿಕ್ಷಣ ಸಮನ್ವಯಾಧಿಕಾರಿ ಮಹೇಶ್, ಸಯ್ಯದ್‌ಖಾನ್‌ಬಾಬು, ಸಹದೇವಪ್ಪ, ತೋಟಪ್ಪ, ಉಮಾಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.