ADVERTISEMENT

ಅಂತರರಾಷ್ಟ್ರೀಯ ಕೃಷಿ ಮೇಳ ಆಯೋಜನೆ : ಹಂಚಿನಾಳ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:00 IST
Last Updated 12 ಸೆಪ್ಟೆಂಬರ್ 2011, 19:00 IST

ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮುಂದಿನ ವರ್ಷ ~ಅಂತರರಾಷ್ಟ್ರೀಯ ಮಟ್ಟದ ಕೃಷಿ ಮೇಳ~ ಆಯೋಜಿಸಲಾಗುವುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಆರ್. ಹಂಚಿನಾಳ ಘೋಷಿಸಿದರು.

ಕೃಷಿ ವಿಶ್ವವಿದ್ಯಾಲಯದ ರೈತ ಮೇಳದಲ್ಲಿ ಸೋಮವಾರ `ರೈತರಿಂದ ರೈತರಿಗಾಗಿ~ ಕಾರ್ಯಕ್ರಮ ಹಾಗೂ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ದಕ್ಷಿಣ ಪ್ರಾಂತೀಯ ಸಮಾವೇಶವಾಗಿದ್ದ ಈ ಬಾರಿಯ ರೈತ ಮೇಳದಲ್ಲಿ ದಕ್ಷಿಣದ ರಾಜ್ಯಗಳ ಹೊರತಾಗಿ ಪಂಜಾಬ್, ಹರಿಯಾಣ, ಜಮ್ಮು-ಕಾಶ್ಮೀರ, ಪಶ್ಚಿಮಬಂಗಾಳದ ರೈತರು ಪಾಲ್ಗೊಂಡಿದ್ದು, ರಾಷ್ಟ್ರೀಯ ಮೇಳವಾಗಿ ಮಾರ್ಪಟ್ಟಿತು.

ಈ ಬಾರಿಯ ಮೇಳದಲ್ಲಿ ಸುಮಾರು 10 ಲಕ್ಷ ರೈತರು ಭಾಗವಹಿಸಿದ್ದರು. ಮೇಳದ ಈ ಯಶಸ್ಸಿನಿಂದ ಉತ್ತೇಜಿತವಾಗಿರುವ ವಿಶ್ವವಿದ್ಯಾಲಯ ಮುಂದಿನ ವರ್ಷ ಅಂತರರಾಷ್ಟ್ರೀಯ ಮೇಳ ಆಯೋಜಿಸಲು ನಿರ್ಧರಿಸಿದೆ ಎಂದರು. ಪ್ರತಿ ವರ್ಷ ವಿವಿ ಆಯೋಜಿಸುತ್ತಿರುವ ಕೃಷಿ ಮೇಳದಲ್ಲಿ ರೈತರಿಗೆ ಮುಂಗಾರು ಹಂಗಾಮಿನ ತಾಂತ್ರಿಕತೆಗಳನ್ನು ಮಾತ್ರ ಪರಿಚಯಿಸಲು ಸಾಧ್ಯವಾಗುತ್ತಿದೆ.

ಹಿಂಗಾರು ಹಂಗಾಮಿನ ತಾಂತ್ರಿಕತೆ ಹಾಗೂ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ತೋರಿಸಲು ಮುಂದಿನ ವರ್ಷದಿಂದ ಎರಡು ಕೃಷಿ ಮೇಳಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಜನವರಿ ಕೊನೆಯ ವಾರದಲ್ಲಿ ಹಿಂಗಾರು ಹಂಗಾಮಿನ ಕೃಷಿ ಮೇಳ ಹಮ್ಮಿಕೊಳ್ಳಲಾಗುವುದು ಎಂದರು.

ಕೃಷಿ ಮೇಳಗಳ ಸಂಘಟನೆಗೆ ಅನುಕೂಲವಾಗಲು ವಿವಿ ಆವರಣದಲ್ಲಿ ಶಾಶ್ವತ ವಸ್ತುಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದರು. ರೂ.65 ಲಕ್ಷ ಮೊತ್ತದ 1441 ಕ್ವಿಂಟಾಲ್ ಬಿತ್ತನೆ ಬೀಜ ಮಾರಾಟ ಮಾಡಲಾಗಿದೆ ಎಂದು ವಿವಿ ವಿಸ್ತರಣಾ ನಿರ್ದೇಶಕ ಡಾ.ಕೃಷ್ಣಾನಾಯಕ್ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.