ADVERTISEMENT

ಅಂತ್ಯಸಂಸ್ಕಾರಕ್ಕೆ ಹೊರಟವರ ಸಾವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಜನವಾಡ/ಬೀದರ್: ನಿಂತ ಟೆಂಪೋಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಇಬ್ಬರು ಮೃತಪಟ್ಟು 38 ಜನ ಗಾಯಗೊಂಡ ಹೃದಯ ವಿದ್ರಾವಕ ಘಟನೆ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ಸೋಮವಾರ ನಡೆದಿದೆ.

ಔರಾದ್ ತಾಲ್ಲೂಕಿನ ಮದನೂರು ಗ್ರಾಮದ ಶಿವರಾಜ ಹಾವಗಿರಾವ್ ಬಿರಾದಾರ (58) ಮತ್ತು ಟೆಂಪೋ ಚಾಲಕ ಶಿವಕುಮಾರ ನಾಗನಾಥ ಸಾಂಗವಿ (40) ಮೃತಪಟ್ಟವರು.

ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಔರಾದ್ ತಾಲ್ಲೂಕಿನ ಮದನೂರು ಗ್ರಾಮದ ಅವರ ಸಂಬಂಧಿಕರು ಹಾಗೂ ಆಪ್ತರು ಟೆಂಪೋದಲ್ಲಿ ಬೀದರ್‌ಗೆ ಹೊರಟಿದ್ದರು. ಮಾರ್ಗಮಧ್ಯದ ಹೊನ್ನಿಕೇರಿ ಕ್ರಾಸ್ ಹತ್ತಿರ ಮೂತ್ರ ವಿಸರ್ಜನೆಗಾಗಿ ಟೆಂಪೋ ನಿಲ್ಲಿಸಿದ್ದಾಗ ಘಟನೆ ಜರುಗಿದೆ.

ಬೀದರ್‌ನಿಂದ ಭಾಲ್ಕಿ ಕಡೆಗೆ ಹೊರಟಿದ್ದ ಲಾರಿ ನಿಂತ ಟೆಂಪೋಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದರಿಂದ ಟೆಂಪೋ ಎರಡು ಬಾರಿ ಮಗುಚಿ ತಲೆ ಕೆಳಗಾಗಿ ಬಿದ್ದಿತು. ಟೆಂಪೋದ ಎದುರುಗಡೆ ನಿಂತಿದ್ದ ಚಾಲಕ ಹಾಗೂ ಮತ್ತೊಬ್ಬರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಟೆಂಪೋದಲ್ಲಿ ಸುಮಾರು 40 ಜನ ಇದ್ದರು. ಘಟನೆಯಲ್ಲಿ 38 ಜನರಿಗೆ ಗಾಯಗಳಾಗಿವೆ. ಈ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದೆ. ಕೆಲವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಒಬ್ಬನ ಕಾಲು ಕತ್ತರಿಸಿದೆ ಎಂದು ಹೇಳಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳು ಬಿದ್ದಿದ್ದವು. ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸುತ್ತಲಿನ ಜನ ಗಾಯಾಳುಗಳ ನೆರವಿಗೆ ಧಾವಿಸಿದರು. ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಬೀದರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಕ್ರೇನ್ ಸಹಾಯದಿಂದ ಟೆಂಪೋವನ್ನು ಮೇಲಕ್ಕೆ ಎತ್ತಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಮರ್ತೂರಕರ್, ಬೀದರ್ ಗ್ರಾಮೀಣ ಠಾಣೆಯ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಬಸವರಾಜ ತೇಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.