ADVERTISEMENT

ಅಕ್ರಮ ಮದ್ಯ ಮಾರಾಟ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಕಡೂರು: ಗೆದ್ಲೆಹಳ್ಳಿ ಬೋವಿ ಕಾಲೊನಿಯಲ್ಲಿ  ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ಅಬಕಾರಿ ಅಧಿಕಾರಿ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಗ್ರಾಮಸ್ಥರು ತಂಗಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು. 

ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗಿ ತಾಲ್ಲೂಕು ಕಚೇರಿ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ  ಮನವಿ ಸಲ್ಲಿಸಿದರು.

ಗೆದ್ಲೆಹಳ್ಳಿಯಲ್ಲಿ ವಾಸಿಸುತ್ತಿರುವ ಬೋವಿ ಸಮುದಾಯ ಕೂಲಿ ಮಾಡಿ ಜೀವನ ಸಾಗಿಸುತ್ತಿದೆ. ಕೂಲಿ ಹಣವನ್ನು ಮದ್ಯ ಸೇವನೆಗೆ ಖರ್ಚು ಮಾಡುತ್ತಿರುವುದರಿಂದ ಸಂಸಾರ ನಿರ್ವಹಿಸಲು ಮಹಿಳೆಯರಿಗೆ ಕಷ್ಟಕರವಾಗಿದೆ. ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಒಂದು ವಾರದ ನಂತರ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಶಿವಕುಮಾರ್ ಅಬಕಾರಿ ಅಧಿಕಾರಿಗಳಿಗೆ ಎಚ್ಚರಿಸಿದರು.

ಬಳ್ಳೆಕೆರೆ ಗ್ರಾಮ ಪಂಚಾಯಿತಿ ಸದಸ್ಯೆ ವಿಮಲಮ್ಮ ಮಾತನಾಡಿ, ಗ್ರಾಮದಲ್ಲಿ ಸಂಜೆಯಾದರೆ ಮಹಿಳೆಯರು ಓಡಾಡುವುದೇ ಕಷ್ಟವಾಗಿದೆ. ರಸ್ತೆಯಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ನಿಂದಿಸುವುದು ಮಾತಿಗೆ ನಿಂತರೆ ಜಗಳ ಕಾಯುವ ಪ್ರವೃತ್ತಿ ಬೆಳೆಸಿಕೊಂಡಿರುವ ಮದ್ಯವ್ಯಸನಿಗಳು ಗ್ರಾಮದ ನೆಮ್ಮದಿಯ ವಾತಾವರಣ ಹಾಳುಗೆಡವಿದ್ದಾರೆ ಎಂದು ದೂರಿದರು.

ತಾಲ್ಲೂಕು ಅಬಕಾರಿ ಅಧಿಕಾರಿ ದಿನಕರ ಮನವಿ ಸ್ವೀಕರಿಸಿ, ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳೆಯರಿಗೆ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಜಿ.ಕೊಪ್ಪಲಿನ ಶೇಖರ್, ಕರಿಬಡ್ಡೆನಾಗರಾಜು, ಕುಪ್ಪಾಳು ನಾಗರಾಜು, ಗಂಗಪ್ಪ, ಗಿರಿಜಮ್ಮ, ಅಂಬಿಕಾ, ಗೌತಮಿ, ಕಲಾವತಿ, ಲೀಲಾವತಿ, ಬೋವಿ ಕಾಲೊನಿಯ ನಿವಾಸಿಗಳು ಪಾಲ್ಗೊಂಡಿದ್ದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.