ADVERTISEMENT

ಅದ್ದೂರಿಯ ಮೈಲಾಪುರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಯಾದಗಿರಿ: ತಾಲ್ಲೂಕಿನ ಸುಪ್ರಸಿದ್ಧ ಮೈಲಾಪುರದ ಮೈಲಾರಲಿಂಗೇಶ್ವರನ ಜಾತ್ರೆ ಲಕ್ಷಾಂತರ ಭಕ್ತರ ಸಡಗರ, ಸಂಭ್ರಮದ ಮಧ್ಯೆ ಶನಿವಾರ ಅದ್ದೂರಿಯಾಗಿ ನಡೆಯಿತು. ಜಿಲ್ಲಾಡಳಿತ ಕುರಿ ಹಾರಿಸುವಿಕೆಗೆ ನಿಷೇಧ ಹೇರಿದ ಕಾರಣ ಕುರಿಗಳ ಹಾರಿಸುವಿಕೆ ಗಣನೀಯ ಪ್ರಮಾಣದಲ್ಲಿ ತಗ್ಗಿದ್ದು ಈ ಬಾರಿಯ ವಿಶೇಷ.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು, ಭಂಡಾರ, ಕುರಿಗಳ ಉಣ್ಣೆ, ಜೋಳದ ದಂಟು ಹಾರಿಸುವ ಮೂಲಕ ಸಂತೃಪ್ತರಾದರು. ಬೆಳಿಗ್ಗೆ ಮೈಲಾರಲಿಂಗನಿಗೆ ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಲ್ಲಯ್ಯನನ್ನು ಗಂಗಾ ಸ್ನಾನಕ್ಕೆಂದು ಪವಿತ್ರ ಹೊನ್ನಕೆರೆಗೆ ಪಲ್ಲಕ್ಕಿ ಮೆರವಣಿಗೆ ಮೂಲಕ ಕರೆತರಲಾಯಿತು.

ಪಲ್ಲಕ್ಕಿ ಉತ್ಸವದ ಸಂಭ್ರಮವನ್ನು ನೋಡಲು ಭಕ್ತರು ಬೆಟ್ಟದ ಮೇಲೆ ಕಾದು ಕುಳಿತಿದ್ದರು. ಮಲ್ಲಯ್ಯನಿಗೆ ದಾರಿಯುದ್ದಕ್ಕೂ ಭಂಡಾರ, ಹಣ, ರೈತರು ಬೆಳೆದ ಫಸಲನ್ನು ಪಲ್ಲಕ್ಕಿ ಮೇಲೆ ಎಸೆದು ಏಳು ಕೋಟಿ ಏಳು ಕೋಟಿಗೆ ಎಂದು ಜಯಕಾರ ಹಾಕುವ ಮೂಲಕ ತಮ್ಮ ಭಕ್ತಿ ಭಾವ ಅರ್ಪಿಸಿದರು.

ಗಂಗಾ ಸ್ನಾನದ ಬಳಿಕ ದೇವಸ್ಥಾನ ಕೆಳಗಡೆ ಸರಪಳಿ ಹರಿಯುವ ಕಾರ್ಯಕ್ರಮವು ಗಮನ ಸೆಳೆಯಿತು. ಪೂಜಾರಿಗಳು ಸರಪಳಿ ಹರಿಯುತ್ತಿದ್ದಂತೆಯೇ ಕಿಕ್ಕಿರಿದು ಸೇರಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಪ್ರತಿ ವರ್ಷ ಮಲ್ಲಯ್ಯನ ಪಲ್ಲಕ್ಕಿ ಉತ್ಸವವು ಗಂಗಾ ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ಸಹಸ್ರಾರು ಕುರಿ ಮರಿಗಳನ್ನು ಎಸೆಯುತ್ತಿದ್ದರು. ಈ ಬಾರಿ ಜಿಲ್ಲಾಡಳಿತ ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದು, ಭಕ್ತರು ತಂದಿರುವ 1,200ಕ್ಕೂ ಹೆಚ್ಚು ಕುರಿ, ಆಡುಗಳನ್ನು ತಹಶೀಲ್ದಾರರು ವಶಪಡಿಸಿಕೊಂಡರು.

ಜಾತ್ರೆಯ ಸಂಭ್ರಮದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಲಕ್ಷಾಂತರ ಭಕ್ತರು ಆಗಮಿಸಿದ್ದು, ದೇವಸ್ಥಾನದಿಂದ ನಾಲ್ಕೈದು ಕಿ.ಮೀ. ವರೆಗೂ ಭಕ್ತರ ದಟ್ಟಣೆ ಇತ್ತು. ಇದರಿಂದಾಗಿ ದೇವಸ್ಥಾನಕ್ಕೆ ತೆರಳುವ ಭಕ್ತರು ಹರಸಾಹಸ ಮಾಡಬೇಕಾಯಿತು.

ಮಲ್ಲಯ್ಯನಿಗೆ ಹರಕೆ ತೀರಿಸಲು ಭಕ್ತರು ಕಾದು ಕುಳಿತಿದ್ದರೆ, ಇನ್ನೊಂದೆಡೆ ಮಕ್ಕಳು ಆಟಿಕೆ, ಬೆಂಡು-ಬೆತ್ತಾಸ ಖರೀದಿಯಲ್ಲಿ ಮಗ್ನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.