ADVERTISEMENT

ಅನ್ನದಾತ ಮೊದಲು ಸುಖವಾಗಿರಬೇಕು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 16:30 IST
Last Updated 2 ಫೆಬ್ರುವರಿ 2011, 16:30 IST
ಅನ್ನದಾತ ಮೊದಲು ಸುಖವಾಗಿರಬೇಕು
ಅನ್ನದಾತ ಮೊದಲು ಸುಖವಾಗಿರಬೇಕು   

ಗದಗ: ‘ದೇಶಕ್ಕೆಲ್ಲ ಅನ್ನ ಕೊಡುವ ರೈತ ಮೊದಲು ಸುಖವಾಗಿರಬೇಕು. ಆಗ ಮಾತ್ರ ನಾಡಿಗೆ ನಾಡೇ ಸಮೃದ್ಧವಾಗಿರುತ್ತದೆ’ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಆಶಯ ವ್ಯಕ್ತಪಡಿಸಿದರು.

ಗದಗ ತಾಲ್ಲೂಕಿನ ಹರ್ತಿಯಲ್ಲಿ ಬುಧವಾರ ಋಷಿ ಕೃಷಿ ವಿದ್ಯಾಲಯವನ್ನು ಉದ್ಘಾಟಿಸಿ ಗುರೂಜಿ ಮಾತನಾಡಿದರು.

‘ರೈತನು ಸುಖವಾಗಿರಬೇಕು ಎಂದರೆ ನೆಲ-ಜಲ, ವಾತಾವರಣ ಚೆನ್ನಾಗಿದ್ದು, ವಿಷಮುಕ್ತವಾಗಿರಬೇಕು. ಆದರೆ ಇಂದು ಅತಿಯಾದ ರಾಸಾಯನಿಕ ವಸ್ತುಗಳ ಬಳಕೆಯಿಂದ ಎಲ್ಲವೂ ವಿಷಯುಕ್ತವಾಗುತ್ತಿವೆ. ಒಂದೆರಡು ವರ್ಷ ಉತ್ತಮ ಫಸಲು ಬಂದು, ನಂತರ ಇಳುವರಿ ಕಡಿಮೆಯಾಗುತ್ತದೆ. ಬಂಡವಾಳ ಹೆಚ್ಚಾಗಿ ಹೂಡಬೇಕಾಗುತ್ತದೆ. ಈ ಕಾರಣದಿಂದಾಗಿ ರೈತನ ಸ್ಥಿತಿ ಬರುಬರುತ್ತಾ ಅಧೋಗತಿಗೆ ಇಳಿಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಪ್ರಸ್ತುತ ದಿನಮಾನದಲ್ಲಿ ಎಲ್ಲ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಕೃಷಿ ಭೂಮಿಯಲ್ಲಿ ಫಸಲು ತೆಗೆಯಲು ಹೆಚ್ಚು ಬಂಡಾವಳ ಬೇಕಾಗಿರುವುದರಿಂದ ಪದಾರ್ಥಗಳಿಗೆ ದೊರೆಯುವ ಬೆಲೆ ರೈತನ ಕೈಗೆ ದಕ್ಕುತ್ತಿಲ್ಲ. ಅತ್ತ ರೈತನನ್ನು ನಂಬಿಕೊಂಡಿರುವ ಗ್ರಾಹಕರಿಗೂ ಉತ್ತಮ ಪದಾರ್ಥ ಸಿಗುತ್ತಿಲ್ಲ. ಇದಕ್ಕಾಗಿ ಪ್ರಾಚೀನ ಕಾಲದಿಂದಲೂ ಆಚರಣೆ ಮಾಡಿಕೊಂಡು ಬಂದಿರುವ ಋಷಿ ಕೃಷಿಯನ್ನು ರೂಢಿಸಿಕೊಳ್ಳಬೇಕು’ ಎಂದು  ಹೇಳಿದರು.

ಕಪ್ಪತ್ತಗಿರಿಯ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಶಾಸಕ ಶ್ರೀಶೈಲಪ್ಪ ಬಿದರೂರ, ಮಾಜಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.