ADVERTISEMENT

ಅಪಾಯಕ್ಕೆ ಕಾದಿರುವ ವಿದ್ಯುತ್ ಕಂಬ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 19:15 IST
Last Updated 5 ಫೆಬ್ರುವರಿ 2011, 19:15 IST

ಶಿಡ್ಲಘಟ್ಟ: ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ವಿದ್ಯುತ್ ಕಂಬ ಶಿಥಿಲಗೊಂಡಿದ್ದು, ಯಾವುದೇ ಕ್ಷಣ ನೆಲಕ್ಕುರುಳುವ ಸ್ಥಿತಿಯಲ್ಲಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶಿಥಿಲ ಕಂಬವನ್ನು ತೆರವುಗೊಳಿಸಿ, ಹೊಸ ಕಂಬ ಅಳವಡಿಸುವಂತೆ ಮನವಿ ಮಾಡಿದ್ದಾರೆ.

 ಸಿಮೆಂಟಿನ ಕಂಬ ಹಳೆಯದಾಗಿದ್ದು, ಅಲ್ಲಲ್ಲಿ ಸಿಮೆಂಟ್ ಉದುರಿಹೋಗಿದೆ. ಒಳಗಿನ ತುಕ್ಕು ಹಿಡಿದಿರುವ ಕಬ್ಬಿಣದ ಕಂಬಿಗಳು ಹೊರಚಾಚಿವೆ. ವಿದ್ಯುತ್ ಪ್ರವಹಿಸುವ ತಂತಿಗಳು ಈ ಕಂಬದಿಂದ ಹಾದು ಹೋಗಿದ್ದು, ಕಂಬ ಬಿದ್ದರೆ ಅಪಾಯ ಸಂಭವಿಸುವುದು ನಿಶ್ಚಿತ. ಅಡಿಯಲ್ಲಿಯೂ ಕಂಬ ಭದ್ರವಾಗಿಲ್ಲ. ಸಿಮೆಂಟ್ ಕಿತ್ತು ಹೋಗಿದ್ದು ಬಿರುಕುಗಳು ಮೂಡಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

 ಸುತ್ತ ಅನೇಕ ಮನೆಗಳಿವೆ. ಶಾಲೆಗೆ ಹೋಗುವ ಮಕ್ಕಳು ಅಲ್ಲೇ ಓಡಾಡಬೇಕು. ದನಕರುಗಳು ಹತ್ತಿರದಲ್ಲೇ ಇರುತ್ತವೆ. ದಾರಿಯಲ್ಲಿ ಜನರು ಓಡಾಡುತ್ತಿರುತ್ತಾರೆ. ಕಂಬ ಉರುಳಿದರೆ ಅಪಾಯ ತಪ್ಪಿದ್ದಲ್ಲ. ‘ಶಿಥಿಲ ಕಂಬದ ಬಗ್ಗೆ ಆರು ತಿಂಗಳ ಹಿಂದೆ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದೇವೆ, ಅರ್ಜಿ ಸಲ್ಲಿಸಿದ್ದೇವೆ. ಆದರೆ ಅಧಿಕಾರಿಗಳು ಒಂದಿಲ್ಲೊಂದು ಸಬೂಬು ಹೇಳುತ್ತಿದ್ದಾರೆ. ಒಂದು ವೇಳೆ ಕಂಬ ಉರುಳಿಬಿದ್ದು, ಅನಾಹುತ ಸಂಭವಿಸಿದ್ದಲ್ಲಿ ಯಾರು ಹೊಣೆ’ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.