ಎಚ್.ಡಿ.ಕೋಟೆ: ತಾಲ್ಲೂಕಿನ ಚನ್ನೇಗೌಡನಹುಂಡಿ ಸಮೀಪದ ಶಿಳ್ಳನಕಟ್ಟೆ ಹಾಡಿಯ ಬಳಿ ವಾಸವಾಗಿರುವ ಕೆಲವು ಜೇನುಕುರುಬ ಜನಾಂಗದ ಕುಟುಂಬಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ.
ತಾಲ್ಲೂಕು ಕೇಂದ್ರವಾದ ಎಚ್.ಡಿ. ಕೋಟೆಯಿಂದ ಕೇವಲ 5 ಕಿ.ಮೀ. ದೂರದಲ್ಲಿ ಈ ಹಾಡಿ ಇದೆ. ಇಲ್ಲಿನ ಯಾರಿಗೂ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಸರ್ಕಾರದ ಬಗೆಗಿನ ಮಾಹಿತಿ ಇಲ್ಲ. ಸರ್ಕಾರದಿಂದ ತಮ್ಮ ಜೀವನಮಟ್ಟ ಸುಧಾರಣೆಗೆ ಯಾವ ಯೋಜನೆ ಇವೆ, ಎಷ್ಟು ಹಣ ಬರುತ್ತದೆ ಎಂಬ ಬಗ್ಗೆ ಕಲ್ಪನೆಯೂ ಇಲ್ಲ.
ನೀರು, ಆಹಾರದ ತೀವ್ರ ಕೊರತೆ ಎದುರಿಸುತ್ತಿರುವ ಈ ಜನ ಅಪೌಷ್ಟಿಕತೆಯಿಂದ ಸೊರಗುತ್ತಿದ್ದಾರೆ. ಇವರ ಮಕ್ಕಳಂತೂ ಎದ್ದುನಿಲ್ಲಲು ಬಾರದಷ್ಟು ಅಶಕ್ತರಾಗಿವೆ. ಇಲ್ಲಿ ಸುಮಾರು 25 ಮಕ್ಕಳಿದ್ದು ಬಹುತೇಕ ಎಲ್ಲ ಮಕ್ಕಳೂ ಅಪೌಷ್ಟಿಕತೆಯಿಂದ ನರಳುತ್ತಿವೆ. 10 ಕುಟುಂಬಗಳು ಇಲ್ಲಿ ವಾಸ ಮಾಡಿವೆ.
ಈ ಮಕ್ಕಳೂ ಸಮೀಪದ ಅಂಗನವಾಡಿ ಕೇಂದ್ರಕ್ಕೂ ಹೋಗುವುದಿಲ್ಲ. ಮಕ್ಕಳನ್ನು ಚಪ್ಪರಗಳಲ್ಲಿ ಬೇಕಾಬಿಟ್ಟಿಯಾಗಿ ಕೂಡಿ ಹಾಕಿ ಮಹಿಳೆಯರು ಕೂಲಿಗೆ ಹೋಗುತ್ತಾರೆ. ಕೂಲಿ ಮುಗಿಸಿ ಸಂಜೆ ಮರಳುವವರೆಗೂ ಈ ಕಂದಮ್ಮಗಳ ಕಷ್ಟ ಕೇಳುವವರು ಯಾರೂ ಇಲ್ಲ. ಸ್ವಲ್ಪ ದೊಡ್ಡ ಮಕ್ಕಳೂ ಕೂಲಿಗೆ ಹೋಗುತ್ತವೆ.
ಇವರು ವಾಸಿಸುವ ತುಸು ದೂರದಲ್ಲಿ ಕೆರೆ ಇದ್ದು, ಬೇಸಿಗೆಯಲ್ಲಿ ಅದು ಒಣಗುತ್ತದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳ ಜನ ಬಹಿರ್ದೆಸೆಗೆ ಇದೇ ಕೆರೆಯನ್ನು ಆಶ್ರಯಿಸುತ್ತಾರೆ.
ಇಲ್ಲಿರುವ ಜೇನುಕುರುಬ ಜನ ಆ ಕೆರೆಯಲ್ಲಿರುವ ಅಳಿದುಳಿದ ನೀರನ್ನೇ ಕುಡಿಯುತ್ತಾರೆ. ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.