ADVERTISEMENT

ಅಪ್ಪುರಖಾನೆ ಮಸೀದಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

 ಹನುಮಸಾಗರ: ನಮ್ಮ ನಾಡಿನಲ್ಲಿ ಹಲವಾರು ಧರ್ಮಗಳಿದ್ದರೂ ಎಲ್ಲರೂ ಸಮಾನ ಮನಸ್ಸಿನಿಂದ ಬಾಳುತ್ತೇವೆ ಎಂಬುದಕ್ಕೆ ಇಲ್ಲಿ ಹಿಂದೂ ಸಮಾಜದ ಮರಿಯಪ್ಪ ಗೋತಗಿ, ಇಸ್ಲಾಂ ಧರ್ಮದವರಿಗಾಗಿ ಮಸೀದಿ ನಿರ್ಮಿಸಿ ಕೊಟ್ಟಿರುವುದೇ ಸಾಕ್ಷಿ ಎಂದು ವಕ್ಫ್ ಮಂಡಳಿ ಮಾಜಿ ಸದಸ್ಯ ಮೈನುದ್ದೀನ್ ಖಾಜಿ ಹೇಳಿದರು.

ಬುಧವಾರ ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಅಪ್ಪುರಖಾನೆ ಮಸೀದಿ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಪರಸಪ್ಪ ನಂದಿಹಾಳ ಮಾತನಾಡಿ ಸಣ್ಣಪುಟ್ಟ ಕಾರಣಕ್ಕಾಗಿ ಧರ್ಮ ಧರ್ಮಗಳ ಮಧ್ಯೆ ಕೋಲಾಹಲ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಮತ್ತೊಂದು ಧರ್ಮಕ್ಕೆ ನೆರವಾಗುವುದರ ಮೂಲಕ ತಮ್ಮ ಧರ್ಮಕ್ಕೆ ಗೌರವ ತರುವಂತಹ ಕೆಲಸ ಇಲ್ಲಿ ನಡೆಯುತ್ತಿರುವುದು ಇಡೀ ದೇಶಕ್ಕೆ ಮಾದರಿಯಾದುದು ಎಂದು ಅಭಿಪ್ರಾಯಪಟ್ಟರು.

ಮರಿಯಪ್ಪ ಗೋತಗಿ ಮಾತನಾಡಿ, `ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ನಾನು ನಮ್ಮೂರಲ್ಲಿ ಉಳಿದೆಲ್ಲ ದೇವರ ಗುಡಿಗಳಿರುವಾಗ ಮಸೀದಿ ನಿರ್ಮಿಸಬೇಕೆಂಬ ಅಪೇಕ್ಷೆ ಹುಟ್ಟಿಕೊಂಡಿತು. ಭಗವಂತನ ಈ ಪ್ರೇರಣೆಯಿಂದ ಹಾಗೂ ಗ್ರಾಮಸ್ಥರ ಸಹಕಾರದಿಂದ ಇಂದು ಮಸೀದಿ ನಿರ್ಮಾಣವಾಗಲು ಕಾರಣವಾಗಿದೆ` ಎಂದರು.

ಮಸೀದಿಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಬಳಿಕ ಗ್ರಾಮಸ್ಥರ ಪರವಾಗಿ ಮರಿಯಪ್ಪ ಗೋತಗಿ ಅವರನ್ನು ಸತ್ಕರಿಸಲಾಯಿತು.

ದಸ್ತಗಿರಿಸಾಬ ಬಳಿಗಾರ, ತಾ.ಪಂ ಸದಸ್ಯೆ ಮಂಜುಳಾ ಗೋತಗಿ, ಗ್ರಾ.ಪಂ ಸದಸ್ಯ ದ್ಯಾಮಣ್ಣ ತುಗ್ಗಲಡೋಣಿ, ಹನುಮವ್ವ ಮಾದರ, ಫಕೀರಪ್ಪ ಮಾದರ ಮುಖಂಡರಾದ ರಂಗಪ್ಪ ಗೋತಗಿ, ಗುರಪ್ಪ ಶೆಲವಡಿ, ಇಮಾಮಸಾಬ ಮುಜಾವರ, ಯಮನಪ್ಪ ಗೋತಗಿ ಇತರರು ಇದ್ದರು. ಖಾಜಾಸಾಬ ಮುದಗಲ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.