ಕುಮಟಾ: ಮಾಜಿ ಸಚಿವ ಕುಮಾರ ಬಂಗಾರಪ್ಪ ಮಂಗಳವಾರ ಕುಮಟಾ ತಾಲ್ಲೂಕಿನ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಪರ ಕಾರ್ಯ ನೆರವೇರಿಸಿದರು.
ಮುಂಜಾನೆ 8 ಗಂಟೆಯ ಹೊತ್ತಿಗೆ ಸಮುದ್ರ ದರ್ಶನ ಮಾಡಿ ಬಂದ ಕುಮಾರ ಬಂಗಾರಪ್ಪ ಅವರು ಕೋಟಿ ತೀರ್ಥದಲ್ಲಿ ತಂದೆಯ ಅಪರ ಕಾರ್ಯಗಳನ್ನು ಆರಂಭಿಸಿದರು. ದಶವಿಧ ಸ್ನಾನ, ನಿತ್ಯವಿಧಿ ನಂತರ ಕೋಟಿತೀರ್ಥದ ದಡದಲ್ಲಿ ಕೇಶಮಂಡನ ಮಾಡಿಸಿಕೊಂಡರು. ನಂತರ ತಾಮ್ರ ಗಂಗೆಯಲ್ಲಿ ಚಿತಾಭಸ್ಮ ವಿಸರ್ಜಿಸಿದರು.
`ತಂದೆಯ ಆತ್ಮಕ್ಕೆ ಶಾಂತಿ ಬಯಸಿ ನಾನು ಕೈಕೊಂಡ ಅಪರ ಕಾರ್ಯಗಳ ಬಗ್ಗೆ ನನಗೆ ತೃಪ್ತಿ ಉಂಟಾಗಿದೆ~ ಎಂದು ಪತ್ರಕರ್ತರಿಗೆ ಅವರು ತಿಳಿಸಿದರು.
ಕುಮಾರ ಬಂಗಾರಪ್ಪ ಅವರೊಂದಿಗೆ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಡಾ. ನಾರಾಯಣಪ್ಪ, ಕುಮಟಾ ಮಾಜಿ ಶಾಸಕ ಕೆ.ಎಚ್. ಗೌಡ, ಮಾಜಿ ಶಾಸಕರುಗಳಾದ ವಿರೂಪಾಕ್ಷಪ್ಪ, ಸಿ.ವಿ. ಹುಲಿಮನೆ ಹಾಗೂ ಬಂಧುಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.