ಚಿಕ್ಕಬಳ್ಳಾಪುರ: ನಾಪತ್ತೆಯಾಗಿದ್ದ ಎರಡು ಸೀಮೆ ಹಸುಗಳನ್ನು ವಶಪಡಿಸಿಕೊಳ್ಳಲು ಜಿಲ್ಲೆಗೆ ಬಂದಿದ್ದ ಆಂಧ್ರಪ್ರದೇಶದ ಮೂವರು ಪೊಲೀಸರನ್ನು ಮತ್ತು ಗೃಹ ರಕ್ಷಕ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ ಘಟನೆ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಬಳಿ ಭಾನುವಾರ ನಡೆದಿದೆ.
ಗ್ರಾಮಸ್ಥರ ಹಲ್ಲೆಯಿಂದ ಭಯಗೊಂಡ ನಾಲ್ವರು ಸಿಬ್ಬಂದಿ ಪರಾರಿಯಾಗಿದ್ದಾರೆ. ಆಂಧ್ರಪ್ರದೇಶದ ಕೋರಮಗೊಂಡ ಗ್ರಾಮದಲ್ಲಿ ಸಹೋದರರಾದ ನಾಗನಲ್ಲಪ್ಪ ಮತ್ತು ಗಂಗುಲಪ್ಪ ಅವರ ಎರಡು ಸೀಮೆ ಹಸು ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದವು.
ಚಿಂತಾಮಣಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಎತ್ತುಗಳ ಸಂತೆಯಲ್ಲಿ ತಮ್ಮ ಹಸುಗಳು ಇರುವುದನ್ನು ಪತ್ತೆ ಮಾಡಿ ಇವರು ಕೋರಮಗೊಂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಕೋರಮಗೊಂಡದಿಂದ ಬಂದ ಮೂವರು ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ಹಸುಗಳನ್ನು ಹೊಂದಿದ್ದ ಶಿಡ್ಲಘಟ್ಟದ ನಾಸೀರ್ ಮತ್ತು ಮಳ್ಳೂರಿನ ಶ್ರೀನಿವಾಸ ಎಂಬುವವರನ್ನು ವಿಚಾರಣೆಗೆ ಒಳಪಡಿಸಿ ತಮ್ಮ ವಾಹನದಲ್ಲಿ ಗೋರಂಟ್ಲ ಕಡೆ ಕರೆದುಕೊಂಡು ಹೋಗುತ್ತಿದ್ದಾಗ ಹೊಸಹುಡ್ಯ ಮೂಲಕ ಹಾದು ಹೋಗುವಾಗ ಶ್ರೀನಿವಾಸ್ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ತಾರಕಕ್ಕೇರಿದಾಗ ಇಬ್ಬರೂ ತಮ್ಮ ಮೊಬೈಲ್ ಫೋನ್ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ, `ಪೊಲೀಸರು ನಮ್ಮನ್ನು ಬಂಧಿಸಿಕೊಂಡು ಹೋಗುತ್ತಿದ್ದಾರೆ. ಹಣ ಕೇಳುತ್ತಿದ್ದಾರೆ~ ಎಂದು ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಗುಂಪುಗೂಡಿದ ಗ್ರಾಮಸ್ಥರು ಹೊಸಹುಡ್ಯದ ಬಳಿ ವಾಹನವನ್ನು ತಡೆದು ಪೊಲೀಸರನ್ನು ಮನ ಬಂದಂತೆ ಥಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.