ADVERTISEMENT

ಆನೆ ದಾಳಿ; ಪರಿಹಾರಕ್ಕಾಗಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ಕನಕಪುರ: ಕಾಡಾನೆ ದಾಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಆಕ್ರೋಶಗೊಂಡ ರೈತರು ಅಧಿಕಾರಿಗಳು ಸೂಕ್ತ ಪರಿವಾರವನ್ನು ಸ್ಥಳದಲ್ಲಿಯೇ ತಕ್ಷಣ ಕೊಡಬೇಕೆಂದು ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟಿಸಿದ ಘಟನೆ ಕೋಡಿಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಕೆಬ್ಬಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ತಾಲ್ಲೂಕಿನ ಕಸಬಾ ಹೋಬಳಿಯ ಕೆಬ್ಬಳ್ಳಿ ಗ್ರಾಮದ ರೈತ ಕಾಶೀಗೌಡರ ಮಗ ಸಿದ್ದೇಗೌಡರ ಬಾಳೆ ತೋಟಕ್ಕೆ ಗುರುವಾರ ಮಧ್ಯರಾತ್ರಿ ಸುಮಾರು 14ಕ್ಕೂ ಹೆಚ್ಚು ಆನೆಗಳ ಹಿಂಡು ದಾಳಿ ಮಾಡಿವೆ. ದಾಳಿಯಿಂದ ಕಟಾವಿಗೆ ಬಂದಿದ್ದ 400ಕ್ಕೂ ಹೆಚ್ಚು ಬಾಳೆ ಕಾಯಿ ಗೊನೆಗಳಿಗೆ ಹಾನಿಯಾಗಿ ಸುಮಾರು 2 ಲಕ್ಷ ರೂ ನಷ್ಟವುಂಟಾಗಿದೆ ಈ ಕೂಡಲೇ ಪರಿಹಾರ ನೀಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ಇದೇ ರೀತಿ ಈ ಹಿಂದೆಯೂ ಕಾಡಾನೆಗಳು ದಾಳಿ ಮಾಡಿ ಬೆಳೆಗಳನ್ನು ನಾಶಮಾಡಿದ್ದವು. ಆನೆದಾಳಿ ತಡೆಗಟ್ಟಲು ಮತ್ತು ಸೂಕ್ತ ಪರಿಹಾರಕ್ಕಾಗಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ನೀಡಿದ ಭರವಸೆಗಳು ಇಂದಿಗೂ ಭರವಸೆಗಳಾಗಿಯೇ ಉಳಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆ ಸಂದರ್ಭದಲ್ಲಿದ್ದ ಉಪ-ಅರಣ್ಯ ಸಂರಕ್ಷಣಾಧಿಕಾರಿ ಬೆಳೆ ಹಾನಿ ಅನುಭವಿಸಿದ್ದ ರೈತರಿಗೂ 5 ಸಾವಿರ ಪರಿಹಾರ ಘೋಷಣೆ ಮಾಡಿದ್ದರು. ಆದರೆ ಪರಿಹಾರ ಘೋಷಿಸಿ ಹೋದವರು ಪರಿಹಾರವನ್ನೂ ನೀಡಿಲ್ಲ. ಅಲ್ಲದೆ ಇಲ್ಲಿಂದಲೇ ವರ್ಗಾವಣೆ ಮಾಡಿಸಿಕೊಂಡು ಹೋದರು. ಪ್ರತಿಬಾರಿಯಂತೆ ನಾವು ಈ ಬಾರಿ ಭರವಸೆಗಳ ವಂಚನೆಗೆ ಸಿಲುಕಲು ಸಿದ್ಧರಿಲ್ಲ. ಆದ್ದರಿಂದ ನಮಗೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು  ರೈತರು ಪಟ್ಟುಹಿಡಿದರು.

ಗ್ರಾಮಸ್ಥರನ್ನು ಮನವೊಲಿಸಲು ಬಂದ ಅಧಿಕಾರಿಗಳ ಪ್ರಯತ್ನ ಪ್ರಾರಂಭದಲ್ಲಿ ವಿಫಲವಾಯಿತು. ಆ ವೇಳೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ರೈತರು ಎರಡು ಗಂಟೆಗಳ ಕಾಲ ರಸ್ತೆ ತಡೆ  ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸ್ಥಳದಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ವಲಯಾಧಿಕಾರಿ ಎನ್.ಎಚ್.ಜಗನ್ನಾಥ್, ನಾನು ಕೂಡ ರೈತ ಕುಟುಂಬದಿಂದಲೇ ಬಂದವರು. ನಿಮ್ಮ ನೋವು ನನಗೂ ಅರ್ಥವಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿಯೇ ಕೆಲಸಮಾಡಬೇಕಿದೆ. ಸರ್ಕಾರದ ನಿಗದಿಯಂತೆ ರೂ 30 ಸಾವಿರ ಪಾರಿಹಾರ ಕೊಡಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿ ರೈತರನ್ನು ಸಮಾದಾನ ಪಡಿಸಿದರು.

ಕೋಡಿಹಳ್ಳಿ ಆರಕ್ಷಕ ಉಪ-ನಿರೀಕ್ಷಕ ಮೋಹನ್‌ರೆಡ್ಡಿ ಅರಣ್ಯ ಅಧಿಕಾರಿಗಳ ಮಾತಿಗೆ ಸಹಕರಿಸಲು ರೈತರಲ್ಲಿ ಮನವಿ ಮಾಡಿದರು. ಮನವಿಗೆ ಮಣಿದ ಪ್ರತಿಭಟನಾಕಾರರು ಕೂಡಲೇ ಪರಹಾರ ನೀಡುಂವತೆ ಶರತ್ತು ಹಾಕಿ ಪ್ರತಿಭಟನೆ ನಿಲ್ಲಿಸಿದರು. 

ಬೆಳಿಕಲ್‌ಬೆಟ್ಟ ಅರಣ್ಯ ಪ್ರದೇಶದ ಅಂಚಿನಲ್ಲಿರು ನಾರಾಯಣಪುರ, ಕೆಬ್ಬಳ್ಳಿ, ಬೆಟ್ಟಳ್ಳಿ, ಶ್ರೀನಿವಾಸನಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳ ನಿರಂತರವಾಗಿದೆ. ಆನೆಗಲು ಬೆಳೆ ನಾಶ ಮಾಡುವುದರ ಜೊತೆಗೆ ದಾಳಿ ಸಂದರ್ಭದಲ್ಲಿ ಸಾಕಷ್ಟು ರೈತರ ಪ್ರಾಣವನ್ನು ಬಲಿತೆಗೆದುಕೊಂಡಿವೆ. ಇಂತಹ ಅವಘಡಗಳು ಸಂಭವಿಸಿದಾಗ ಆಕ್ರೋಶಗೊಂಡ ರೈತರು-ಗ್ರಾಮಸ್ಥರು ರಸ್ತೆತಡೆದು ಪ್ರತಿಭಟನೆ ನಡೆಸುವುದು ಇಲ್ಲಿ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.