ADVERTISEMENT

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಮಡಿಕೇರಿ: ಆಟೊ ಚಾಲಕರು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೊಂದಲು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಆಟೊ ಮಾಲೀಕರು ಚಾಲಕರ ಸಂಘದ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ಡಾನ್ಸ್‌ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಚಾಲಕರು ಆಟೋಟ, ವ್ಯಾಯಾಮ, ಯೋಗದಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ರೂಢಿಸಿಕೊಳ್ಳಿರಿ ಎಂದರು.

ಆಟೊ ಚಾಲಕರು ಕಾನೂನಿನ ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಆಟೊ ಹಾಗೂ ಚಾಲನೆಗೆ ಸಂಬಂಧಿಸಿದಂತೆ ಸೂಕ್ತ  ದಾಖಲೆಗಳನ್ನು ಹೊಂದಿರಬೇಕು. ಶಿಸ್ತು, ಸಂಯಮದಿಂದ ಕಾರ್ಯ ನಿರ್ವಹಿಸುತ್ತ ಸಾರ್ವಜನಿಕರ ಸೇವೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಡಿವೈಎಸ್ಪಿ ಜೆ.ಡಿ. ಪ್ರಕಾಶ್ ಮಾತನಾಡಿ, ಆಟೊ ಚಾಲಕರು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಹಾಗೂ ಸಾರ್ವಜನಿಕರ ಜೊತೆ ಸ್ನೇಹದಿಂದ ವ್ಯವಹರಿಸಬೇಕು. ಅಪರಾಧ ಕೃತ್ಯಗಳು ನಿಮ್ಮ ಗಮನಕ್ಕೆ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಈ ಮೂಲಕ ಅಪರಾಧ ನಿಯಂತ್ರಿಸಲು ನಮ್ಮಂದಿಗೆ ಸಹಕರಿಸಿ ಎಂದರು.

ತಹಶೀಲ್ದಾರ್ ಬಾಬು ರವೀಂದ್ರನಾಥ್ ಪಟೇಲ್, ಜಿಲ್ಲಾ ಆಟೊ ಮಾಲಿಕರು-ಚಾಲಕರ ಸಂಘದ ಅಧ್ಯಕ್ಷ ಡಿ.ಎಚ್.ಮೇದಪ್ಪ, ನಗರಸಭೆ ಸದಸ್ಯರಾದ ಉನ್ನಿಕೃಷ್ಣ, ಎಂ.ಯು. ಅಶ್ರಫ್, ನಗರ ಆಟೊ ಮಾಲೀಕರು-ಚಾಲಕರ ಸಂಘದ ಅಧ್ಯಕ್ಷ ಎ.ಸಮ್ಮದ್, ಹೋಟೆಲ್ ಮಾಲೀಕ ವಿ.ಎಂ. ಶರೀನ್ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.