ADVERTISEMENT

ಆಲಿಕಲ್ಲು ಮಳೆ: ಬತ್ತಕ್ಕೆ ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಸಿಂಧನೂರು: ಶುಕ್ರವಾರ ಸಂಜೆ ಬಿದ್ದ ಆಲಿಕಲ್ಲು ಮಳೆಗೆ ಮಲ್ಕಾಪುರ ಮತ್ತು ಜಾಲಿಹಾಳ ಗ್ರಾಮದ ಹಲವಾರು ಎಕರೆ ಜಮೀನಿನಲ್ಲಿ ಕೊಯ್ಲಿಗೆ ಬಂದ ಬತ್ತದ ಕಾಳು ನೆಲದ ಪಾಲಾಗಿದೆ. ತಾಲ್ಲೂಕಿನ ಕನ್ನಾರಿ ಗ್ರಾಮದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಬತ್ತ  ಎರಡು ದಿನಗಳ ಹಿಂದೆ  ಭಾರೀ ಪ್ರಮಾಣದಲ್ಲಿ ಸುರಿದ ಆಲಿಕಲ್ಲು ಮಳೆಗೆ ನಾಶಗೊಂಡಿತ್ತು.

ಮಲ್ಕಾಪುರ ಗ್ರಾಮದಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಬತ್ತ ನೆಲಕ್ಕೆ ಉದುರಿದೆ. ಬತ್ತ ಬೆಳೆಸಲು ಪ್ರತಿ ಎಕರೆಗೆ 20 ಸಾವಿರ ಖರ್ಚು ಮಾಡಲಾಗಿದ್ದು ಇದೀಗ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಬೇಸಿಗೆ ಬೆಳೆಗೆ ನೀರಿನ ಪ್ರಮಾಣ ಕಡಿಮೆ ಇದೆ ಎನ್ನುವ ಕಾರಣದಿಂದ ತಾಲ್ಲೂಕಿನಲ್ಲಿ ಶೇ.25ರಷ್ಟು ಜಮೀನಿನಲ್ಲಿ ಮಾತ್ರ ಬತ್ತ ಬೆಳೆಯಲಾಗಿದ್ದು ಇಳುವರಿ ಉತ್ತಮವಾಗಿತ್ತು. ಬತ್ತದ ದರವೂ ಮಳೆಗಾಲದ ಬೆಳೆಗಿಂತ ಹೆಚ್ಚಳವಾಗಿತ್ತು. ಈಗ ಆಲಿಕಲ್ಲು ಮಳೆ ಬಂದು ರೈತರನ್ನು ಬೀದಿಪಾಲಾಗುವಂತೆ ಮಾಡಿದೆ.

ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸುವಂತೆ ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಬಿ.ಎಸ್.ಆರ್. ಪಕ್ಷದ ಮುಖಂಡ ಕೆ.ಕರಿಯಪ್ಪ, ಸೋಮಲಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಮರೇಶಪ್ಪ ನಾಯಕ, ದೇವಣ್ಣ, ಮಾರ್ಕಂಡೇಯ ಮಲ್ಕಾಪುರ ಮತ್ತಿತರರು ಒತ್ತಾಯಿಸಿದ್ದಾರೆ.

ತಹಶೀಲ್ದಾರ ಕೆ.ನರಸಿಂಹ ನಾಯಕ ಅವರು ಆಲಿಕಲ್ಲು ಮಳೆಯಿಂದ ಹಾನಿಯಾದ ಬತ್ತದ ಹೊಲಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದ್ದಾರೆ. ಕಂದಾಯ ನಿರೀಕ್ಷಕರಿಂದ ಆಲಿಕಲ್ಲು ಮಳೆಗೆ ಬತ್ತ ನಾಶವಾದ ಶೇಕಡವಾರು ವರದಿಯನ್ನು ಪಡೆದು ಜಿಲ್ಲಾಧಿಕಾರಿಗೆ ಕಳುಹಿಸಿಕೊಡುವುದಾಗಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.