ADVERTISEMENT

ಉದ್ರಿಕ್ತರಿಂದ 2 ಬಸ್‌ಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST
ಉದ್ರಿಕ್ತರಿಂದ 2 ಬಸ್‌ಗೆ ಬೆಂಕಿ
ಉದ್ರಿಕ್ತರಿಂದ 2 ಬಸ್‌ಗೆ ಬೆಂಕಿ   

ದೊಡ್ಡಬಳ್ಳಾಪುರ: ಗೌರಿಬಿದನೂರಿನಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ಸೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ-ಬೆಂಗಳೂರು ರಸ್ತೆಯ ಮಮತಾ ಪೆಟ್ರೋಲ್ ಬಂಕ್ ಬಳಿ ಭಾನುವಾರ ನಡೆದಿದೆ.

ಮೃತರನ್ನು ಪಿಳ್ಳಪ್ಪ (26) ಎಂದು ಗುರುತಿಸಲಾಗಿದೆ. ಬಸ್ ಚಾಲಕ ಪರಾರಿಯಾಗಿದ್ದಾನೆ. `ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ~ ಎಂದು ಆರೋಪಿಸಿ ಸಾರ್ವಜನಿಕರು, ಕೈಗಾರಿಕಾ ಪ್ರದೇಶದ ಕಾರ್ಮಿಕರು ಅಪಘಾತವೆಸಗಿದ ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಶಬರೀಶ್ ತಿಳಿಸಿದ್ದಾರೆ.

ಮೃತ ಪಿಳ್ಳಪ್ಪ ರಾಜಾನುಕುಂಟೆ ಬಳಿಯ ಅಗ್ರಹಾರ ನಿವಾಸಿ. ಈತ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಿಟ್ಟಲ್ ಕಾರ್ಖಾನೆಯ ಕಾರ್ಮಿಕ. ಮುಂದಿನ ತಿಂಗಳು ಇವರಿಗೆ ಮದುವೆ ನಿಶ್ಚಯವಾಗಿತ್ತು. ಅಪಘಾತದ ಸುದ್ದಿ ತಿಳಿಯುತ್ತಲೇ ಮೃತನ ಸಂಬಂಧಿಕರು, ಕಾರ್ಮಿಕರು ಮತ್ತು ಸಾರ್ವಜನಿಕರು ಅಪಘಾತ ಸ್ಥಳಕ್ಕೆ ಧಾವಿಸಿ ರಸ್ತೆ ತಡೆ ನಡೆಸಿದರು.

ಬೆಂಕಿ ನಂದಿಸಲು ಆಗಮಿಸಿದ ಅಗ್ನಿಶಾಮಕ ವಾಹನಕ್ಕೂ ಅವಕಾಶ ನೀಡದೇ ಪ್ರತಿಭಟನೆ ಮುಂದುವರಿಸಿದರು. ಇದರಿಂದ ಬೆಂಗಳೂರು- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೂ ರಸ್ತೆ ಸಂಚಾರ ಬಂದ್ ಆಗಿತ್ತು. `ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು~ ಎಂದು ಪ್ರತಿಭಟನಾಕಾರರು ಹಾಗೂ ಕಾರ್ಮಿಕ ಮುಖಂಡ ಧನಂಜಯ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.